ಪತಿಗಿಂತ ದುಪ್ಪಟ್ಟು ವೇತನವಿದ್ದ ಪತ್ನಿಗೆ ಜೀವನಾಂಶ ನಿರಾಕರಣೆ| High court

High court
High court
Published on
ಬೆಂಗಳೂರು: ಪತ್ನಿಯು ಆರ್ಥಿಕವಾಗಿ ಸಬಲಳಾಗಿದ್ದು, ಪತಿಗಿಂತ ಹೆಚ್ಚಿನ ಆದಾಯ ಹೊಂದಿರುವಾಗ ಮತ್ತು ಆಕೆಗೆ ಹೆಚ್ಚುವರಿ ಜವಾಬ್ದಾರಿಗಳಿಲ್ಲದ ಸಂದರ್ಭದಲ್ಲಿ ಜೀವನಾಂಶ ನೀಡುವಂತೆ ಪತಿಗೆ ಯಾಂತ್ರಿಕವಾಗಿ ಆದೇಶ ನೀಡಬಾರದು ಎಂದು ಹೈಕೋರ್ಟ್​ ಹೇಳಿದೆ.
ಪತ್ನಿಗೆ 20 ಸಾವಿರ ರೂ. ಜೀವನಾಂಶ ನೀಡುವಂತೆ ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಡಾ.ಚಿಲ್ಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
2024ರಲ್ಲಿ ದಾಂಪತಕ್ಕೆ ಕಾಲಿಟ್ಟಿದ್ದ ದಂಪತಿ ಎರಡು ತಿಂಗಳು ಮಾತ್ರ ಒಟ್ಟಿಗಿದ್ದರು. ಬಳಿಕ ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದ ಪತ್ನಿ, ಮಾಸಿಕ 1.13 ಲಕ್ಷ ರೂ. ಮಧ್ಯಂತರ ಜೀವನಾಂಶ ಮತ್ತು 50 ಸಾವಿರ ರೂ. ಕಾನೂನು ವೆಚ್ಚ ನೀಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಮಾಸಿಕ 20 ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.
ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಖಾಸಗಿ ಕಂಪನಿ ಉದ್ಯೋಗಿಗಳಾಗಿರುವ ಪತ್ನಿಯು ಮಾಸಿಕ 1.64 ಲಕ್ಷ ರೂ. ಮತ್ತು ಪತಿಯು 60 ಸಾವಿರ ರೂ. ವೇತನ ಪಡೆಯುತ್ತಿದ್ದಾರೆಂದು ಗಮನಿಸಿತು. ಪತ್ನಿಯ ಆದಾಯವು ಪತಿಯ ಆದಾಯಕ್ಕಿಂತ ಹೆಚ್ಚಾಗಿರುವುದನ್ನು ಪರಿಗಣಿಸಿರುವ ಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಸಾಲದ ದಾಖಲೆಗಳಿಲ್ಲ: 

ಪತ್ನಿ ಪರ ವಾದಿಸಿದ ವಕೀಲರು, ಮದುವೆಗಾಗಿ ಮಾಡಿಕೊಂಡಿರುವ ಸಾಲಗಳನ್ನು ತೀರಿಸಲು ಜೀವನಾಂಶದ ಅಗತ್ಯವಿದೆ ಎಂದು ತಿಳಿಸಿದ್ದರು. ಆದರೆ, ಈ ಸಾಲದ ವಿವರಗಳು ಅಥವಾ ಇಎಂಐ ಪಾವತಿ ಬಗ್ಗೆ  ದಾಖಲೆಗಳನ್ನು ಸಲ್ಲಿಸಲು ಪತ್ನಿ ವಿಲರಾಗಿದ್ದಾರೆ. ಪತ್ನಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಪತಿಗಿಂತ ಆರ್ಥಿಕವಾಗಿ ಸದೃಢರಾಗಿರುವ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಭವಿಷ್ಯದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆಗಳಾದರೆ ಹೊಸ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ನೀಡಲಾಗಿದೆ. 
⚠️

ಯಾವಾಗ ನೀಡಬೇಕು?

ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಥವಾ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ ನಿಯಮಗಳ ಪ್ರಕಾರ, ಪತ್ನಿಗೆ ಪತಿಯ ಜೀವನಮಟ್ಟಕ್ಕೆ ತಕ್ಕಂತೆ ಬದುಕಲು ಸಾಧ್ಯವಿಲ್ಲದೇ ಇದ್ದಾಗ ಅಥವಾ ಯಾವುದೇ ಆರ್ಥಿಕ ಮೂಲಗಳು ಇಲ್ಲದಾಗ ಮಾತ್ರ ಕೌಟುಂಬಿಕ ನ್ಯಾಯಾಲಯಗಳು ಜೀವನಾಂಶ ಮಂಜೂರು ಮಾಡಬೇಕು ಎಂದು ಹೈಕೋರ್ಟ್​ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net