ಕೆಪಿಎಸ್ ಓಕೆ ವಿಲೀನ ಏಕೆ? 25 ಸಾವಿರ ಶಾಲೆಗಳಲ್ಲಿ 50ಕ್ಕೂ ಕಡಿಮೆ ಮಕ್ಕಳು

ವಿದ್ಯಾರ್ಥಿಗಳ ಛಾಯಾಚಿತ್ರ
ವಿದ್ಯಾರ್ಥಿಗಳ ಛಾಯಾಚಿತ್ರ
Published on

| ಎನ್.ಎಲ್.ಶಿವಮಾದು, ಬೆಂಗಳೂರು

ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂಬ ಬದ್ಧತೆ ಪ್ರದರ್ಶಿಸುತ್ತಿರುವ ರಾಜ್ಯ ಸರ್ಕಾರ, ಖಾಸಗಿ ಶಾಲೆಗಳ ಪೈಪೋಟಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಆರಂಭಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ (ಕೆಪಿಎಸ್) ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಶಾಲೆಗಳ ದಾಖಲಾತಿ, ಮೂಲ ಸೌಕರ್ಯ ಹೆಚ್ಚಳ, ಗುಣಾತ್ಮಕ ಶಿಕ್ಷಣಕ್ಕೆ ಕೆಪಿಎಸ್ ಸಹಕಾರಿಯಾಗುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಆದರೆ, ಕಡಿಮೆ ಮಕ್ಕಳಿರುವ ಶಾಲೆಗಳನ್ನು ಕೆಪಿಎಸ್​ನಲ್ಲಿ ವಿಲೀನಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಉಳಿಗಾಲದ ಬಗ್ಗೆ ಆತಂಕವೂ ತಲೆದೋರಿದೆ. ಇತ್ತೀಚೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ 7 ಶಾಲೆಗಳನ್ನು ಕೆಪಿಎಸ್​ನಲ್ಲಿ ವಿಲೀನಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆದೇಶ ಹೊರಡಿಸಿದೆ.

ನ್ನಪಟ್ಟಣ ತಾಲೂಕಿನ ಹೊಂಗನೂರು ಶಾಲೆಯನ್ನು ಕೆಪಿಎಸ್ ಆಗಿ ಪರಿವರ್ತಿಸಿ ಸುತ್ತಲಿನ 7 ಶಾಲೆ ವಿಲೀನಗೊಳಿಸಲು ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಅ.23ರಂದು ಆದೇಶ ಹೊರಡಿಸಿದೆ. ವಿಲೀನಗೊಳ್ಳುತ್ತಿರುವ ಶಾಲೆಗಳಲ್ಲಿರುವ ಹುದ್ದೆಗಳನ್ನು ಸ್ಥಳಾಂತರಿಸಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಅನುಮತಿ ನೀಡಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದೇಶದಲ್ಲಿ ಏನಿದೆ?

7 ಶಾಲೆಗಳ ಶಿಕ್ಷಕರು, ಭೌತಿಕ, ಶೈಕ್ಷಣಿಕ ದಾಖಲೆ, ಪೀಠೋಪಕರಣಗಳು ಮತ್ತುಶಾಲೆಯಲ್ಲಿರುವ ಎಲ್ಲ ಸಾಮಗ್ರಿ ಗಳನ್ನು ಪಟ್ಟಿ ಮಾಡಿ ಹೊಂಗನೂರು ಕೆಪಿಎಸ್ ಶಾಲೆಗೆ ನೀಡಬೇಕು, ವಿಲೀನಗೊಳ್ಳುತ್ತಿರುವ ಶಾಲೆಗಳ ಪೈಕಿ ಹೊಡಿಕೆ ಹೊಸಹಳ್ಳಿಯಲ್ಲಿ 77, ಕನ್ನೀದೊಡ್ಡಿ ಶಾಲೆಯಲ್ಲಿ 82, ಅಮ್ಮಳ್ಳಿ ದೊಡ್ಡಿಯಲ್ಲಿ 31, ಸಂತೆ ಮೊಗಳ್ಳಿಯಲ್ಲಿ 100, ಮೊಗಳ್ಳಿದೊಡ್ಡಿಯಲ್ಲಿ 20, ಸುಣ್ಣ ಘಟ್ಟ ಶಾಲೆಯಲ್ಲಿ 80 ಮತ್ತು ಚನ್ನಂಕೇಗೌಡನದೊಡ್ಡಿಯಲ್ಲಿ ಇಬ್ಬರು ವಿದ್ಯಾರ್ಥಿ ಗಳಿದ್ದಾರೆಂದು ಆದೇಶದಲ್ಲಿ ಉಲ್ಲೇಖವಾಗಿದೆ. ತೀರಾ ಕಡಿಮೆ ಮಕ್ಕಳಿರುವ ಶಾಲೆ ವಿಲೀನ ವಾಸ್ತವಿಕವಾದರೂ, 80, 100 ಮಕ್ಕಳಿರುವ ಶಾಲೆಗಳನ್ನೂ ವಿಲೀನ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆ ಎದುರಾಗಿದೆ.

ರಾಜ್ಯದಲ್ಲಿ ಒಟ್ಟು 46,174 ಸರ್ಕಾರಿ ಶಾಲೆಗಳಿವೆ. ಇದರಲ್ಲಿ 25,683 ಶಾಲೆಗಳಲ್ಲಿ 50ಕ್ಕಿಂತ ಕಡಿಮೆ ಮಕ್ಕಳು ಕಲಿಯುತ್ತಿದ್ದಾರೆ. ಹತ್ತಿರದ ಕೆಪಿಎಸ್ ಶಾಲೆಗಳಿಗೆ ವಿಲೀನಗೊಳಿಸುವ ಸಂದರ್ಭ ಬಂದರೆ, ಈ ಶಾಲೆಗಳ ಕಥೆ ಏನು ಎಂಬ ಕಳವಳ ಸದ್ಯ ವ್ಯಕ್ತವಾಗುತ್ತಿದೆ.

"

ಶಾಲೆಗಳನ್ನು ಕೆಪಿಎಸ್ ಜತೆ ವಿಲೀನಗೊಳಿಸಬೇಕೆ? ಬೇಡವೆ? ಎಂಬುದನ್ನು ಎಸ್​ಡಿಎಂಸಿ ನಿರ್ಧರಿಸಬೇಕು. ಪಾಲಕರು, ಮಕ್ಕಳು ಮತ್ತು ಎಸ್​ಡಿಎಂಸಿ ಒಪ್ಪಿಗೆ ಇಲ್ಲದೆ ಶಾಲೆಗಳನ್ನು ಯಾವುದೇ ಕಾರಣಕ್ಕೂ ವಿಲೀನಗೊಳಿಸುತ್ತಿಲ್ಲ. ಯಾವುದೇ ಶಾಲೆ ಮುಚ್ಚುವುದಿಲ್ಲ.

— | ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ಕೆಪಿಎಸ್ ಅನುಕೂಲಗಳು

  • ದ್ವಿಭಾಷಾ ಮಾಧ್ಯಮ (ಕನ್ನಡ, ಇಂಗ್ಲಿಷ್) ದಲ್ಲಿ ಬೋಧನೆ
  • ಶಾಲಾ ಕಟ್ಟಡ, ಮೈದಾನ, ಕ್ರೀಡಾ ಸಲಕರಣೆ ಸೇರಿ ಉತ್ತಮ ಮೂಲ ಸೌಕರ್ಯಗಳು
  • ಟಿಇಟಿ ಮತ್ತು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ)ಯಲ್ಲಿ ತೇರ್ಗಡೆ ಹೊಂದಿರುವ ಗುಣಮಟ್ಟದ ಬೋಧನಾ ಸಿಬ್ಬಂದಿ
  • ಶಾಲೆಯ ಸಮೀಪದ ಗ್ರಾಮಗಳಿಂದ ಮಕ್ಕಳನ್ನು ಕರೆತರಲು ಸಾರಿಗೆ ವ್ಯವಸ್ಥೆ
  • ಸರ್ಕಾರದಿಂದ ಸಿಗುವ ಸವಲತ್ತುಗಳು (ಬಿಸಿಯೂಟ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಪೌಷ್ಟಿಕ ಆಹಾರಗಳಾದ ಮೊಟ್ಟೆ/ಬಾಳೇಹಣ್ಣು)

ಶಾಲೆಗಳ ದಾಖಲಾತಿ ಇಳಿಕೆ

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಳೆದ 10 ವರ್ಷದಲ್ಲಿ (2015-16ರಿಂದ 2025-26) 47.1 ಲಕ್ಷದಿಂದ 38.2 ಲಕ್ಷಕ್ಕೆ ಕುಸಿದಿದೆ. ಒಟ್ಟಾರೆ ಪ್ರಮಾಣ ಶೇ.46ರಿಂದ 38ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳ ದಾಖಲಾತಿ 36.3 ಲಕ್ಷದಿಂದ 47 ಲಕ್ಷಕ್ಕೆ (ಶೇ.29)ಏರಿಕೆಯಾಗಿದೆ.

ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂಬ ಸರ್ಕಾರದ ಸ್ಪಷ್ಟನೆ ಸತ್ಯಕ್ಕೆ ದೂರವಾದುದು - ಅಶ್ವಿನಿ ಕೆ.ಎಸ್. ಎಐಡಿಎಸ್​ಒ ರಾಜ್ಯಾಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net