ಮುಸುಕಿನಜೋಳಕ್ಕೆ ಬಿಳಿಸುಳಿ ರೋಗ

ಆಲೂರು ತಾಲೂಕಿನ ಕುಂದೂರು ಹೋಬಳಿಯ ಕೆಂಚನಹಳ್ಳಿ ಗ್ರಾಮದಲ್ಲಿ ಮುಸುಕಿನ ಜೋಳ ಬಿಳಿಸುಳಿ ರೋಗಕ್ಕೆ ತುತ್ತಾಗಿರುವುದು.
ಆಲೂರು ತಾಲೂಕಿನ ಕುಂದೂರು ಹೋಬಳಿಯ ಕೆಂಚನಹಳ್ಳಿ ಗ್ರಾಮದಲ್ಲಿ ಮುಸುಕಿನ ಜೋಳ ಬಿಳಿಸುಳಿ ರೋಗಕ್ಕೆ ತುತ್ತಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನಜೋಳ
  • ಬೆಳೆಗೆ ಬಿಳಿಸುಳಿ (ಬೂಜು) ರೋಗ
ಆಲೂರು: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಮುಸುಕಿನಜೋಳ ಬೆಳೆಗೆ ಬಿಳಿಸುಳಿ (ಬೂಜು) ರೋಗ ಕಾಣಿಸಿಕೊಂಡಿರುವ ಪರಿಣಾಮ ಜೋಳದ ಬೆಳೆ ಒಣಗುತ್ತಿದ್ದು, ರೈತರು ತೀವ್ರ ಆತಂಕಗೊಂಡಿದ್ದಾರೆ.
ತಾಲೂಕಿನ ಪಾಳ್ಯ ಹಾಗೂ ಕುಂದೂರು ಹೋಬಳಿಯ ಹೊಳೆಬೆಳ್ಳೂರು, ಕೆಂಚನಹಳ್ಳಿ, ಗಂಜಿಗೆರೆ, ಕದಾಳು, ಮಡಬಲು, ತಾಳೂರು, ಹುಣಸುವಳ್ಳಿ, ದೊಡ್ಡಕಣಗಾಲು, ಪಾಳ್ಯ ಗ್ರಾಮ ಪಂಚಾಯಿತಿ ಹಾಗೂ ಕಸಬಾ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿನ ರೈತರು ತಮ್ಮ ಹೊಲಗಳಲ್ಲಿ ಬೆಳೆದಿರುವ ಮುಸುಕಿನಜೋಳದ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಹಲವರ ಜಮೀನಿನಲ್ಲಿ ಈ ರೋಗವು ್ಲ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುವ ಹಾಗೂ ಒಣಗಿ ಹೋಗುವ ಆತಂಕ ಎದುರಾಗಿದ್ದು, ಇದು ರೈತರನ್ನು ಕಂಗೆಡುವಂತೆ ಮಾಡಿದೆ.
ಬಹುತೇಕ ರೈತರು ಹೆಚ್ಚಾಗಿ ಖಾಸಗಿ ಅಂಗಡಿಗಳಿಂದ ಬಿತ್ತನೆ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದರು. 3.5 ಕೆ.ಜಿ. ಚೀಲಕ್ಕೆ 1,650 ರೂ.ಕೊಟ್ಟು ಖರೀದಿ ಮಾಡಿದ್ದಾರೆ. ಬಿತ್ತನೆ ಮಾಡಿದ ಸುಮಾರು 25 ದಿನದ ನಂತರ ಗಿಡಗಳು ಬಿಳಿ ಬಣ್ಣಕ್ಕೆ ತಿರುಗುತ್ತಿವೆ. ಅಲ್ಲದೆ ಗಿಡಗಳು ನಿಲ್ಲಲಾರದೆ ಮುದುಡುತ್ತಿದ್ದು, ಒಂದು ಹಂತದಲ್ಲಿ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ. ಬಹುತೇಕ ಸಣ್ಣ ಮತ್ತು ಅತಿ ಸಣ್ಣ ರೈತರೇ ತಾಲೂಕಿನಲ್ಲಿದ್ದು, ಸಾಲ ಮಾಡಿ ಬಿತ್ತನೆ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗಿಡಗಳು ಬಲಿಯಲು ಅವಕಾಶವಿಲ್ಲದಂತಾಗಿದ್ದು, ಗಿಡಗಳು ಬಲಿಯದೆ ತೆನೆ ಬಿಡದಿದ್ದರೆ ನಷ್ಟ ಅನುಭವಿಸುವಂತಾಗಲಿದೆ ಎಂಬುದು ರೈತರ ಅಳಲು.
ತಾಲೂಕಿನ ಮೂರು ಹೋಬಳಿಯಾದ್ಯಂತ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಮುಸುಕಿನಜೋಳ ಯಥೇಚ್ಛವಾಗಿ ಬೆಳೆಯುತ್ತಾರೆ. ಬೇರೆ ಯಾವುದೇ ಬೆಳೆ ಮೇಲೆ ಇಲ್ಲದಿರುವಷ್ಟು ನಂಬಿಕೆ ಈ ಬೆಳೆ ಮೇಲಿದೆ. ಕಡಿಮೆ ಖರ್ಚು ಹಾಗೂ ಮಿತವಾದ ಕೆಲಸ ಎಂಬ ಉದ್ದೇಶದಿಂದ ಪ್ರತಿಯೊಬ್ಬ ರೈತ ಜೋಳ ಬೆಳೆಯಲಿದ್ದು, ಇದರಲ್ಲಿ ಯಶಸ್ಸನ್ನೂ ಕಂಡುಕೊಂಡಿದ್ದಾರೆ. ಈ ವರ್ಷ ಋತುಮಾನಕ್ಕೆ ತಕ್ಕಂತೆ ಮಳೆಯಾಗದಿರುವುದರಿಂದ ಜೋಳ ಮೊಳಕೆಯೊಡೆದು ಮೇಲೆ ಬರಲು ಸಹ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಜೋಳವೂ ಸಹ ಇದೀಗ ಒಣಗುತ್ತಿದೆ. ಜತೆಗೆ ಬಿಳಿ ಸುಳಿ ರೋಗ ಜೋಳವನ್ನು ಆವರಿಸುತ್ತಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ತಾಲೂಕಿನ 15 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.80ರಷ್ಟು ಅಂದರೆ ಸುಮಾರು 7,400ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನಜೋಳ ಬಿತ್ತನೆ ಮಾಡಲಾಗಿದೆ. ಬಿತ್ತನೆ ಸಮಯದಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದು ಹೊರೆತುಪಡಿಸಿದರೆ ನಂತರದ ದಿನಗಳಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಇದರಿಂದ ಮುಂದೇನು ಮಾಡಬೇಕೆಂದು ತಿಳಿಯದೆ ಅನ್ನದಾತ ಕೈಕಟ್ಟಿ ಕುಳಿತಿದ್ದಾನೆ. ಕಳೆದ ವರ್ಷ ಎರಡು ತಿಂಗಳ ಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಂಡಿತ್ತು. ಆದರೆ ಈ ವರ್ಷ ಬಿತ್ತನೆ ಮಾಡಿದ 25 ದಿನಗಳಲ್ಲೆ ರೋಗ ಕಾಣಿಸಿಕೊಳ್ಳುತ್ತಿದೆ. ಎರಡು ಮೂರು ದಿನಗಳಲ್ಲಿ ಹೊಲವನ್ನೆಲ್ಲ ಆಕ್ರಮಿಸು ಹಂತಕ್ಕೆ ತಲುಪಿದೆ.
ಈ ಬಾರಿ ಶೇ.40% ಕಡಿಮೆ ಮಳೆ: ಕೃಷಿ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ತಾಲೂಕಿನಾದ್ಯಂತ ಈ ಬಾರಿ ಶೇ.40% ಕಡಿಮೆ ಮಳೆಯಾಗಿದೆ. ಹೆಸರಿಗಷ್ಟೆ ಮಲೆನಾಡಿನ ಭಾಗ ಎಂದನಿಸಿಕೊಂಡಿದ್ದು, ಮಳೆ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ವಾಡಿಕೆಯಂತೆ ಈ ದಿನದವರೆಗೆ 324 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 247 ಮಿ.ಮೀ. ಮಳೆಯಾಗಿದೆ.
ಕೃಷಿ ಇಲಾಖೆಯಿಂದ ಆಂದೋಲನ: ಈಗಾಗಲೆ ಕೆಲವು ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಕೃಷಿ ಇಲಾಖೆ ಅಧಿಕಾರಿಗಳು, ರೈತರಿಗೆ ಕೆಲವು ಮಾಹಿತಿ ನೀಡುತ್ತಿದ್ದಾರೆ. ಕಳೆದ ವರ್ಷ ಬಿಳಿಸುಳಿ ರೋಗ ಕಾಣಿಸಿಕೊಂಡ ಪ್ರದೇಶದಲ್ಲಿ ಮತ್ತೆ ಜೋಳ ಬಿತ್ತನೆ ಮಾಡುವುದನ್ನು ಕಮ್ಮಿ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಅಲ್ಲದೆ ಇದರ ಬದಲಾಗಿ ದ್ವಿದಳ ದಾನ್ಯ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ. ರೋಗ ಹತೋಟಿಗೆ ಬರಲು ಔಷಧ ಸಿಂಪಡಿಸುವಂತೆಯೂ ಸಲಹೆ ನೀಡುತ್ತಿದ್ದು, ಆ ಮೂಲಕ ರೈತರಿಗೆ ಕೃಷಿ ಚಟುವಟಿಕೆ ಕುರಿತು ಇಲಾಖೆ ಅಗತ್ಯ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ.
ಬಿಳಿಸುಳಿ ರೋಗಬಾಧೆ ತಡೆಯಲು ರೈತರು ಶಿಲೀಂದ್ರನಾಶಕ ಔಷಧ ಸಿಂಪಡಣೆ ಮಾಡಬೇಕು. ನಾಲ್ಕು ದಿನಗಳ ನಂತರ ಕಳೆನಾಶಕ ಸಿಂಪಡಣೆ ಮಾಡಿದರೆ ರೋಗವನ್ನು ತಡೆಗಟ್ಟಬಹುದು. ಔಷಧ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ರೈತರು ಆತಂಕಕ್ಕೊಳಗಾಗದೆ ಕ್ರಮಬದ್ಧವಾಗಿ ಬೆಳೆಗೆ ಔಷಧ ಸಿಂಪಡಣೆ ಮಾಡುವುದು ಸೂಕ್ತ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಚಾಲ್ತಿಯಲ್ಲಿದ್ದು, ರೈತರು ಬೆಳೆಯುವ ಮುಸುಕಿನ ಜೋಳ ಮತ್ತು ಭತ್ತದ ಬೆಳೆಯ ಅಗತ್ಯ ದಾಖಲೆಗಳನ್ನು ಹತ್ತಿರದ ಕೃಷಿಪತ್ತಿನ ಸಹಕಾರ ಬ್ಯಾಂಕ್, ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬೆಳೆ ವಿಮೆ ಮಾಡಿಸುವುದು ಸೂಕ್ತ.
ಮನು ಸಹಾಯಕ ಕೃಷಿ ನಿರ್ದೇಶಕ
ಸರಿಯಾದ ಪ್ರಮಾಣದಲ್ಲಿ ಮಳೆ ಬಾರದೆ ಜೋಳ ಸಂಪೂರ್ಣ ಒಣಗುತ್ತಿರುವುದು ಒಂದೆಡೆಯಾದರೆ, ಜೋಳ ಬಿತ್ತನೆ ಮಾಡಿದ 25 ದಿನಗಳಲ್ಲೇ ಬಿಳಿಸುಳಿ ರೋಗ ಕಾಣಿಸಿಕೊಳ್ಳುತ್ತಿದೆ. ಎರಡು ಮೂರು ದಿನ ನೋಡು ನೋಡುತ್ತಿರುವಂತೆ ರೋಗ ಸಂಪೂರ್ಣ ಜೋಳವನ್ನೇ ಆಕ್ರಮಿಸಿಕೊಳ್ಳುತ್ತಿದೆ. ಬೀಜೋಪಚಾರ ಮಾಡಿದ ಮೇಲೆ ಬೀಜಗಳನ್ನು ವಿತರಿಸುತ್ತಿದ್ದೇವೆ ಎನ್ನುತ್ತಾರೆ ಕೃಷಿ ಇಲಾಖಾ ಅಧಿಕಾರಿಗಳು. ಆದರೆ ರೋಗ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ ಅಧಿಕಾರಿಗಳ ಮಾತು ಸುಳ್ಳು ಎನಿಸುತ್ತಿದೆ.
ಗುರುಪ್ರಸಾದ್ ರೈತ, ಹೊಳೆಬೆಳ್ಳೂರು
ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಕಳೆದ ವಾರದಿಂದ ರೋಗ ಮತ್ತು ಕೀಟಬಾಧೆ ಕಾಣಿಸಿಕೊಂಡಿದ್ದು, ಇದು ನಮ್ಮನ್ನು ಕಂಗಾಲಾಗುವಂತೆ ಮಾಡಿದೆ. ಅಂಗಡಿಗಳಲ್ಲಿ ಔಷಧಗಳನ್ನು ತಂದು ಸಿಂಪಡಿಸಿದರೂ ರೋಗ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾವಿರಾರು ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಮುಂದೆ ಏನಾಗುತ್ತದೆಯೋ ಎಂಬ ಆತಂಕ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೈತರ ಹಿತ ಕಾಯಬೇಕು.
ಮಲ್ಲೇಶ್ ರೈತ, ಕೆಂಚನಹಳ್ಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net