_1774116950122.webp?w=480&auto=format%2Ccompress&fit=max)
_1774116950122.webp?w=480&auto=format%2Ccompress&fit=max)
ಎಲ್ಲಿ ನೀರು ಹರಿಯುವುದೋ ಅಲ್ಲಿ ಸಮಾನತೆ ಬೆಳೆಯುವುದು...
ಇದು ವಿಶ್ವಜಲದಿನದ ಈ ಸಲದ ಘೋಷವಾಕ್ಯ. ಅಂದರೆ ನೀರಿನ ಮೂಲಕ ಲಿಂಗ ಸಮಾನತೆ ಸಾಧಿಸುವುದು ಉದ್ದೇಶ, ನೀರಿಗಾಗಿ ದೂರ ದೂರ ಅಲೆಯುತ್ತ ಮಹಿಳೆಯರು ಪಡುವ ಕಷ್ಟವನ್ನು ಕಡಿಮೆ ಮಾಡುವ ಸಂಕಲ್ಪ ಹಾಗೂ ನೀರಿನ ಕೊರತೆಯು ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಬೀರುವ ಪರಿಣಾಮಗಳನ್ನು ತಡೆಗಟ್ಟುವ ಗುರಿ ಈ ವರ್ಷದ ಆಶಯ.
ವಿಶ್ವದ ಅನೇಕ ಭಾಗಗಳಲ್ಲಿ ನೀರನ್ನು ಸಂಗ್ರಹಿಸುವ ಜವಾಬ್ದಾರಿ ಬಹುತೇಕ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿದೆ. ಅವರಿಗೆ ನೀರು ಸುಲಭವಾಗಿ ಸಿಗುವಂತಾದರೆ ಅವರ ಸಮಯ ಉಳಿತಾಯವಾಗಿ ಆವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಇಡೀ ಸಮಾಜದ ಪ್ರಗತಿಗೆ ಕಾರಣವಾಗುತ್ತದೆ. ಒಟ್ಟಾರೆ ಜಲ ಸಂರಕ್ಷಣೆಯಲ್ಲಿ ಮಹಿಳೆಯರನ್ನು ಪ್ರಧಾನ ಪಾತ್ರಧಾರಿಗಳನ್ನಾಗಿ ಮಾಡುವುದರಿಂದ ಮಾತ್ರ ನಾವು ಸುಸ್ಥಿರ ಭವಿಷ್ಯವನ್ನು ನಿರ್ವಿುಸಲು ಸಾಧ್ಯ ಎಂಬುದು ಈ ವರ್ಷದ ಸಂದೇಶ.
***
‘ಈ ಆಶಯವೇನೋ ಚೆನ್ನಾಗಿದೆ. ಆದರೆ ನೀರು ಬೇಕಲ್ಲ!’ ಎಂದು ನಗುವವರಿದ್ದಾರೆ. ಆದರೆ ವಾಸ್ತವ ಅಷ್ಟೇನೂ ಭೀಕರವಾಗಿಲ್ಲ. ನೀರಿದೆ. ಅದರ ಸಂರಕ್ಷಣೆಯ ವಿಷಯದಲ್ಲಿ ನಾವು ಎಡವಿದ್ದೇವೆ, ಎಡವುತ್ತಿದ್ದೇವೆ ಅಷ್ಟೆ. ನಮಗೆ ಬೃಹತ್ ಯೋಜನೆಗಳ ದಾಹ. ಆದ್ದರಿಂದ ಸಣ್ಣ ಸಣ್ಣ ಪರಿಹಾರಗಳು ಕಾಣಿಸುವುದಿಲ್ಲ.
***
ಒಂದು ಲೆಕ್ಕಾಚಾರದ ಪ್ರಕಾರ, ರಾಜ್ಯದಲ್ಲಿ ಪ್ರಮುಖವಾಗಿ ಏಳು ನದಿ ವ್ಯವಸ್ಥೆಗಳಿವೆ. ನೂರಾರು ಸಣ್ಣ ಹಾಗೂ ದೊಡ್ಡ ನದಿಗಳಿವೆ. 41 ಸಾವಿರ ಕೆರೆಗಳಿವೆ. ಆ ಪೈಕಿ 10 ಸಾವಿರದಷ್ಟು ಕೆರೆಗಳು ಒತ್ತುವರಿಯಾಗಿವೆ. ವಾರ್ಷಿಕವಾಗಿ ಸರಾಸರಿ 1250 ಮಿ.ಮೀ.ಮಳೆಯಾಗುತ್ತದೆ. ಸುಮಾರು 3200 ಟಿಎಂಸಿಯಷ್ಟು ನೀರನ್ನು ಆ ಮಳೆ ಒದಗಿಸುತ್ತದೆ. ಇಷ್ಟೊಂದು ನೀರಿದ್ದರೂ ನಮಗೆ ನೀರಿನ ಬಿಕ್ಕಟ್ಟು! ರಾಜಧಾನಿ ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ವಿಜ್ಞಾನಿ ಡಾ. ಟಿ. ವಿ. ರಾಮಚಂದ್ರ ಅವರು ಹೇಳಿದ ಪ್ರಕಾರ, ‘ಬೆಂಗಳೂರು ನಗರದ ನೀರಿನ ಅಗತ್ಯಗಳಲ್ಲಿ ಶೇಕಡ 70 ನ್ನು ಮಳೆಯಿಂದಲೇ ಪೂರೈಸಬಹುದು. ಬೆಂಗಳೂರಿಗೆ ವಾರ್ಷಿಕವಾಗಿ ಸರಾಸರಿ 18 ರಿಂದ 20 ಟಿಎಂಸಿ ನೀರು ಬೇಕಾಗುತ್ತದೆ. ಇದರಲ್ಲಿ ಮಳೆಯೇ ಕನಿಷ್ಠ 15 ಟಿಎಂಸಿ ನೀರು ಪೂರೈಸುವ ಸಾಮರ್ಥ್ಯ ಹೊಂದಿದೆ. ಉಳಿದ ನೀರನ್ನು ಮಳೆ ನೀರು ಕೊಯ್ಲು, ತ್ಯಾಜ್ಯ ನೀರಿನ ಸಂಸ್ಕರಣೆಯ ಮೂಲಕ ಪಡೆಯಬಹುದು.’
‘ಪುನರುಜ್ಜೀವನದ ಮೂಲಕ ಸರೋವರಗಳಿಗೆ ಅಂತರ್ಜಲ ಮರುಪೂರಣವಾದರೆ ಇಡೀ ನಗರದ ಮನೆಗಳ ನೀರಿನ ಅಗತ್ಯ ಪೂರೈಸಲು ಸಹಕಾರಿಯಾಗುತ್ತದೆ. ಬೆಂಗಳೂರು ಒಂದು ವರ್ಷದಲ್ಲಿ ಸರಾಸರಿ 700-850 ಮಿ.ಮೀ. ಮಳೆಯನ್ನು ಪಡೆಯುವುದರಿಂದ, ಪರಿಣಾಮಕಾರಿ ಜಲಾನಯನ ಕಾರ್ಯಕ್ರಮಗಳಾದರೆ ಕನಿಷ್ಠ 15 ಟಿಎಂಸಿ ನೀರನ್ನು ಪಡೆಯಬಹುದಾಗಿದೆ. ತ್ಯಾಜ್ಯನೀರಿನ ಸಂಸ್ಕರಣೆ ಸಿಂಗಪೂರದಂತೆ ಯಶಸ್ವಿಯಾದರಂತೂ ಇನ್ನೂ 16 ಟಿಎಂಸಿ ನೀರು ಪಡೆಯಬಹುದು. ಅಂದರೆ ವಾರ್ಷಿಕವಾಗಿ ಒಟ್ಟೂ 31 ಟಿಎಂಸಿ! ಇದು ನಗರದ ಅವಶ್ಯಕತೆಗಿಂತ ಹೆಚ್ಚು. ಹಾಗಾದರೆ ಕೊರತೆಯ ಪ್ರಶ್ನೆ ಎಲ್ಲಿದೆ?’- ಇದು ಡಾ.ರಾಮಚಂದ್ರ ಅವರು ನಮ್ಮ ಮುಂದಿಡುವ ಪ್ರಶ್ನೆ. ಆದ್ದರಿಂದ ನಮ್ಮ ಆಡಳಿತಗಾರರಿಗೆ ಇದೆಲ್ಲ ಅರ್ಥವಾಗುವುದು ಯಾವಾಗ? ಎನ್ನುವುದು ನಾವು ಉತ್ತರ ಹುಡುಕಬೇಕಾದ ಪ್ರಶ್ನೆ.
ಇದು ರಾಜಧಾನಿಗೆ ಸೀಮಿತವಲ್ಲ, ರಾಜ್ಯದ ಉದ್ದಗಲಕ್ಕೂ ಇರುವ ಸ್ಥಿತಿ. ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವ ಅವಕಾಶವೇನೋ ಇದೆ. ಆದರೆ ಸಂಗ್ರಹಾಗಾರಗಳೇ ಇಲ್ಲ.
ಕೊಟ್ಟ ಕುದುರೆ ಏರಲರಿಯದೆ...: ಬೇಡ್ತಿ - ವರದಾ ನದಿ ಜೋಡಣೆ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದೆ. ಆ ಯೋಜನೆಯಿಂದ ನೀರು ತರುವ ಉದ್ದೇಶ ಹೊಂದಿದ ಹಾವೇರಿ ಜಿಲ್ಲೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ಜಿಲ್ಲೆಯಲ್ಲಿ ಹಾದುಹೋದ ವರದಾ ನದಿಯಲ್ಲಿ ವಾರ್ಷಿಕ ಕನಿಷ್ಠ 40 ಟಿಎಂಸಿ ನೀರು ಹರಿಯುತ್ತದೆ. ಅದರಲ್ಲಿ 20 ಟಿಎಂಸಿಗಿಂತ ಹೆಚ್ಚು ತುಂಗಭದ್ರೆಯನ್ನು ಸೇರುತ್ತದೆ. ಅದೇ ನೀರನ್ನು (ನದಿಯನ್ನಲ್ಲ)ತಿರುಗಿಸಿ, ಸಂಗ್ರಹಾಗಾರಕ್ಕೆ ಹರಿಸಿದರೆ ಹಾಗೂ ಅದೇ ಜಿಲ್ಲೆಯ ಕುಮುದ್ವತಿ ನದಿ ನೀರನ್ನು ಪೂರ್ತಿಯಾಗಿ ಹಿಡಿದಿಟ್ಟುಕೊಂಡರೆ ಇಡೀ ಹಾವೇರಿ ಜಿಲ್ಲೆ ಜಲಸ್ವಾವಲಂಬನೆ ಸಾಧಿಸಬಹುದು. ಹಾನಗಲ್ ಭಾಗದಲ್ಲಿ ವರ್ಷಕ್ಕೆ 1100 ಮಿ.ಮೀ., ಜಿಲ್ಲೆಯ ಪೂರ್ವ ಭಾಗದಲ್ಲಿ ಅಂದಾಜು 700 ಮಿ.ಮೀ. ಮಳೆಯಾಗುತ್ತದೆ. ವರದಾ, ಧರ್ವ, ಕುಮದ್ವತಿ, ತುಂಗಭದ್ರೆ ಮೂಲಕ ಪಕ್ಕದ ಜಿಲ್ಲೆಯ ಮಳೆ ನೀರೂ ಬರುತ್ತದೆ. ಕೇವಲ 350 ಮಿ.ಮೀ. ಮಳೆ ಬರುವ ಇಸ್ರೇಲ್ ದೇಶ ಅಷ್ಟೂ ನೀರು ಹಿಡಿದಿಟ್ಟುಕೊಂಡು ಅದ್ಭುತ ಕೃಷಿ ಸಾಧನೆ ಮಾಡಿರುವಾಗ, ಅದರ ಎರಡು-ಮೂರು ಪಟ್ಟು ಮಳೆಯಾಗುವ ಹಾವೇರಿ ಜಿಲ್ಲೆಯನ್ನು ಮಾದರಿ ಮಾಡಬಹುದಿತ್ತಲ್ಲವೇ? ಅಂದರೆ, ಬೇಡ್ತಿ ನದಿಯಲ್ಲಿ ಇಲ್ಲದ ನೀರನ್ನು ಇರುವಂತೆ ಚಿತ್ರಿಸಿ ಹಾವೇರಿ ಜನತೆಯ ಮೂಗಿಗೆ ತುಪ್ಪ ಹಚ್ಚುತ್ತಿರುವ ರಾಜಕಾರಣಿಗಳು ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆ ಬಯಸುವವವರು..’ ಎಂದರೆ ತಪ್ಪಲ್ಲ. ಈ ಕಾರಣದಿಂದಲೇ ಬೃಹತ್ ಯೋಜನೆಗಳು ಕನಿಷ್ಠ ಹತ್ತು ವರ್ಷಗಳ ಕಾಲ ‘ಕೆಲವರ’ ಹೊಟ್ಟೆ ಹೊರೆಯುತ್ತವೆ ಎಂಬ ಮಾತಿಗೆ ಪುಷ್ಟಿ ದೊರೆಯುತ್ತದೆ.
ರಾಜ್ಯದಲ್ಲಿರುವ ಅನೇಕ ಜಲಾಶಯ, ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ. ಅದನ್ನು ಎತ್ತಲು ಸರ್ಕಾರಕ್ಕೆ ಮನಸ್ಸಿಲ್ಲ. ಉದಾಹರಣೆಗೆ ಉತ್ತರಕನ್ನಡದ ಧರ್ವ ಜಲಾಶಯದಲ್ಲಿ ಕಾಲುಭಾಗ ಹೂಳಿರಬಹುದು. ‘ಕಾಲುವೆಯಲ್ಲಿರುವ ಹೂಳನ್ನಾದರೂ ಎತ್ತಿ’ ಎಂದು ರೈತರು ಹಲವು ವರ್ಷ ಹೋರಾಟ ಮಾಡಿದ ನಂತರ ಐದು ಕೋಟಿ ರೂ. ಮಂಜೂರಿ ಆಗಿ, ಟೆಂಡರ್ ಆಯಿತು. ‘ಹೂಳೆತ್ತಬೇಕಿದೆ, ಅದಕ್ಕಾಗಿ ಕಾಲುವೆಯಲ್ಲಿ ನೀರು ಹರಿಸಲು ಆಗದು’ ಎಂದು ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದರಿಂದ ಹಾನಗಲ್ ತಾಲೂಕಿನಲ್ಲಿ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಹದಿನೈದು ಸಾವಿರ ಹೆಕ್ಟೇರ್ಗಿಂತ ಹೆಚ್ಚು ಭೂಮಿಯನ್ನು ಹಾಗೇ ಬಿಡಲಾಗಿದೆ. ಆದರೆ ಈವರೆಗೂ ಸರ್ಕಾರ ಕಾರ್ಯಾದೇಶವನ್ನೇ ನೀಡಿಲ್ಲ!
ವಿಪರ್ಯಾಸವೆಂದರೆ ಹೂಳನ್ನು ಎತ್ತಿದರೆ ಎಲ್ಲಿ ವಿಲೇವಾರಿ ಮಾಡುವುದು ಎನ್ನುವುದು ಪ್ರಶ್ನೆಯಂತೆ! ರೈತರ ಹೊಲಗಳಿಗೆ ಉಚಿತವಾಗಿ ನೀಡಬಹುದಾದರೂ ಅದೆಲ್ಲ ನಮ್ಮ ಆಡಳಿತಗಾರರ ತಲೆಗೆ ಹೋಗುವುದಿಲ್ಲ. ಏಕೆಂದರೆ ಹಾಗೆಲ್ಲ ಮಾಡಿದರೂ ಅದು ಸಹಸ್ರಾರು ಕೋಟಿ ವೆಚ್ಚ ಬೇಡುವ ಯೋಜನೆಯಾಗುವುದಿಲ್ಲವಲ್ಲ್ಲ ಕೇವಲ ಐದು ಕೋಟಿ ರೂ.ಗಳನ್ನು ಸಕಾಲಕ್ಕೆ ಕೊಡಲಾಗದ ಸರ್ಕಾರಕ್ಕೆ ಇಪ್ಪತ್ತು ಸಾವಿರ ಕೋಟಿ ರೂ.ಯೋಜನೆಯ ಚಿಂತೆ!
ರಾಜ್ಯಾದ್ಯಂತ ಸುತ್ತಿದರೆ ಹಿಂದಿನ ಕಾಲದಲ್ಲಿ ಕಟ್ಟಲಾದ ಸಹಸ್ರಾರು ಕೆರೆಗಳಿವೆ. ಆದರೆ ಎಲ್ಲದರ ಒಡಲನ್ನೂ ಹೂಳು ತುಂಬಿಕೊಂಡಿದೆ. ವರ್ಷಕ್ಕೆ 25 ಕೆರೆ ಹೂಳೆತ್ತಲೂ ಸರ್ಕಾರ ಹಣ ನೀಡುತ್ತಿಲ್ಲ! ಕೃಷ್ಣಾ ಮೇಲ್ದಂಡೆ ಯೋಜನೆಗೆ ಈಗಿನ ಸರ್ಕಾರ ಐದು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂ. ಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಸರ್ಕಾರ ಬಂದು ಎರಡೂವರೆ ವರ್ಷ ಆಗಿದೆ, ಇದುವರೆಗೆ 50 ಸಾವಿರ ಕೋಟಿ ರೂ. ಕೊಡಬೇಕಿತ್ತು. ಕೇವಲ ಸಾವಿರ ಕೋಟಿ ರೂಪಾಯಿ ಆದರೂ ಬಂದಿದೆಯೇ?
ಬೃಹತ್ ಯೋಜನೆಗಳ ಬಾಲ ಹಿಡಿದು ಹೊರಡುವ ನಾಯಕರಿಗೆ ವಾಸ್ತವ ಅರ್ಥವಾಗುವುದಿಲ್ಲ ಎಂಬುದು ಕಟು ಸತ್ಯ. ಅದಕ್ಕೆ ಉದಾಹರಣೆ ಈ ನದಿ ತಿರುವು ಎಂಬ ಅವೈಜ್ಞಾನಿಕ ಯೋಜನೆಗಳು. ಯಾವುದೇ ನದಿಯ ಸಹಜ ಹರಿವನ್ನು ತಿರುಗಿಸಿದರೆ ಆ ನದಿಗೇ ಕುತ್ತು ಬರುತ್ತದೆ. ಇಂತಹ ಯೋಜನೆಗಳು ಅಂತಿಮವಾಗಿ ಕಾಡುವುದು ಗ್ರಾಮೀಣ ಮತ್ತು ಬಡ ಮಹಿಳೆಯರ ಬದುಕನ್ನು. ನದಿ ತನ್ನ ಹಾದಿ ತಪ್ಪಿದಾಗ, ಮಹಿಳೆಯರ ಬದುಕು ಕೂಡ ದಿಕ್ಕು ತಪ್ಪುತ್ತದೆ. ನದಿ ಎನ್ನುವುದು ಒಂದು ಜೀವಂತ ಪರಿಸರ ವ್ಯವಸ್ಥೆ. ನದಿಯ ಹರಿವನ್ನು ಕೃತಕವಾಗಿ ಬದಲಿಸುವುದು ಅಥವಾ ತಿರುಗಿಸುವುದು ನದಿಯ ಜಲಾನಯನ ಪ್ರದೇಶದ ಅಂತರ್ಜಲ ಮಟ್ಟ ಕುಸಿಯುವಂತೆ ಮಾಡುತ್ತದೆ. ನದಿ ಬತ್ತಿದಾಗ ಅಥವಾ ಹರಿವು ಕಡಿಮೆಯಾದಾಗ ಆ ಭಾಗದ ಬಾವಿ, ಕೆರೆಗಳು ಬತ್ತಿ ಹೋಗುತ್ತವೆ. ವಿಜ್ಞಾನವನ್ನು ಗಾಳಿಗೆ ತೂರಿ ಬರುವ ಇಂತಹ ಯೋಜನೆಗಳು ದೀರ್ಘಕಾಲದ ಪರಿಸರ ನಾಶಕ್ಕೆ ನಾಂದಿ ಹಾಡುತ್ತವೆ. ನದಿ ಭೂಮಿಯ ರಕ್ತನಾಳದಂತೆ. ಅದನ್ನು ಕತ್ತರಿಸುವುದು ಅಥವಾ ತಿರುಗಿಸುವುದು ಜೀವಸಂಕುಲಕ್ಕೇ ಅಪಾಯಕಾರಿ. ನದಿ ತಿರುವಿನ ಯೋಜನೆಗಳು ಕೇವಲ ಇಂಜಿನಿಯರಿಂಗ್ ವೈಫಲ್ಯವಲ್ಲ, ಅವು ಮಾನವೀಯ ಮತ್ತು ಲಿಂಗತ್ವದ ಬಿಕ್ಕಟ್ಟು ಕೂಡ ಹೌದು. ಈ ಜಲ ದಿನದಂದು, ನಾವು ನದಿಯನ್ನು ಅದರ ಪಾಡಿಗೆ ಹರಿಯಲು ಬಿಡುವ ಮತ್ತು ಮಹಿಳೆಯರ ಹೆಗಲ ಮೇಲಿನ ನೀರಿನ ಹೊರೆ ಇಳಿಸುವ ಸಂಕಲ್ಪ ಮಾಡಬೇಕಾಗಿದೆ.
ಇರುವ ಜಲಮೂಲಗಳನ್ನು ಸಂರಕ್ಷಿಸುವ ವೈಜ್ಞಾನಿಕ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಅವು ಯಾವವು?