ಅಧರ್ಮ ಹೆಚ್ಚಿದಾಗ ಭಗವಂತ ಅವತಾರ

ಸೇಡಂನಲ್ಲಿ ಅಯೋಧ್ಯಾಪತಿ ಶ್ರೀ ರಾಮೋತ್ಸವ ಸಮಿತಿಯಿಂದ ಆಯೋಜಿಸಿದ್ದ ಧರ್ಮಸಭೆಯನ್ನು ಶ್ರೀ ಪಂಚಾಕ್ಷರ ಸ್ವಾಮೀಜಿ ಉದ್ಘಾಟಿಸಿದರು. ಮುಮ್ತಾಜ್​ ನೆಲ್ಯಡ್ಕ, ಶ್ರೀಕಾಂತಶೆಟ್ಟಿ ಕಾರ್ಕಳ, ರೂಪಾ ಮನಕೂರ ಇತರರಿದ್ದರು.
ಸೇಡಂನಲ್ಲಿ ಅಯೋಧ್ಯಾಪತಿ ಶ್ರೀ ರಾಮೋತ್ಸವ ಸಮಿತಿಯಿಂದ ಆಯೋಜಿಸಿದ್ದ ಧರ್ಮಸಭೆಯನ್ನು ಶ್ರೀ ಪಂಚಾಕ್ಷರ ಸ್ವಾಮೀಜಿ ಉದ್ಘಾಟಿಸಿದರು. ಮುಮ್ತಾಜ್​ ನೆಲ್ಯಡ್ಕ, ಶ್ರೀಕಾಂತಶೆಟ್ಟಿ ಕಾರ್ಕಳ, ರೂಪಾ ಮನಕೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿರೂಪಕಿ ಮುಮ್ತಾಜ್​ ನೆಲ್ಯಡ್ಕ ವ್ಯಾಖ್ಯಾನ
  • ಸೇಡಂನಲ್ಲಿ ಶ್ರೀರಾಮೋತ್ಸವ, ಧರ್ಮಸಭೆ
ಸೇಡಂ:ಧರ್ಮದ ಅವನತಿ, ಅಧರ್ಮ ಹೆಚ್ಚಾದಾಗ ಧರ್ಮ ಸಂಸ್ಥಾಪನೆಗಾಗಿ ಭಗವಂತ ಅವತರಿಸುತ್ತಾನೆ. ಇದಕ್ಕೆ ಪೂರಕವೆಂಬಂತೆ 500 ವರ್ಷಗಳ ನಂತರ ಆಯೋಧ್ಯೆಯಲ್ಲಿ ನಿರ್ಮಾಣಗೊಂಡ ಪ್ರಭು ಶ್ರೀರಾಮನ ಮಂದಿರವೇ ಸಾ ಎಂದು ನಿರೂಪಕಿ ಮುಮ್ತಾಜ್​ ನೆಲ್ಯಡ್ಕ ಹೇಳಿದರು.
ಕರೋಡಗಿರಿ ಹನುಮಾನ ದೇವಾಲಯದ ಮುಂಭಾಗದಲ್ಲಿ ಶನಿವಾರ ರಾತ್ರಿ ಅಯೋಧ್ಯಾಪತಿ ಶ್ರೀ ರಾಮೋತ್ಸವ ಸಮಿತಿಯಿಂದ ಆಯೋಜಿಸಿದ್ದ ಶ್ರೀರಾಮೋತ್ಸವ ಹಾಗೂ ಧರ್ಮಸಭೆಯಲ್ಲಿ ಮಾತನಾಡಿ, ಅಧರ್ಮ ಎಷ್ಟೇ ಶಕ್ತಿಶಾಲಿಯಾಗಿರಲಿ ಕೊನೆಗೆ ಧರ್ಮವೇ ಗೆಲ್ಲುತ್ತದೆ. ರಾಮನ ಹೆಸರು ಹೇಳಿದರೆ ಉರಿದುಕೊಳ್ಳುತಿದ್ದವರು ಸಹ ಇಂದು ರಾಮನ ಜಪ ಮಾಡಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಹಿಂದೂಗಳ ಒಗ್ಗಟ್ಟೆ ಕಾರಣ. ದೇಶದಲ್ಲಿ ರಾಮ ಭಕ್ತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಆಗಲೇ ನನ್ನ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಪ್ರಭು ಶ್ರೀರಾಮರ ಇಚ್ಛೆಯಾಗಿತ್ತು ಅನಿಸುತ್ತದೆ ಎಂದರು.
ಖ್ಯಾತ ವಾಗ್ಮಿ ಶ್ರೀಕಾಂತಶೆಟ್ಟಿ ಕಾರ್ಕಳ ಮಾತನಾಡಿ, ರಾಮನ ತತ್ವ&ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀರಾಮನ ಮಂದಿರ ಧ್ವಂಸ ಮಾಡಿದ 500 ವರ್ಷಗಳ ನಂತರ ಪ್ರಭುವಿನ ಗೌರವ ಮರಳಿ ಸ್ಥಾಪಿಸಲಾಗಿದೆ. ಸಾವಿರಾರು ಕರಸೇವಕರ ರಕ್ತ ಅಲ್ಲಿ ಹರಿಸಿದೆ. ಆ ಎಲ್ಲ ಆತ್ಮಗಳು ನಮ್ಮ ಕನಸು ಸಾಕಾರಗೊಳ್ಳಲಿಲ್ಲ ಎಂಬ ಕೊರಗಿನಲ್ಲಿದ್ದವು, ಇದೀಗ ಮಂದಿರ ನಿರ್ಮಾಣದ ನಂತರ ಸಂತೃಪ್ತರಾಗಿವೆ ಎನಿಸುತ್ತದೆ ಎಂದು ಹೇಳಿದರು.
ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಕಿರುತೆರೆ ನಟಿ ರೂಪಾ ಮನಕೂರ, ರಾಮ ನವಮಿ ಉತ್ಸವ ಸಮಿತಿ ಜಿಲ್ಲಾಧ್ಯಕ್ಷ ರಾಜು ಭವಾನಿ ಮಾತನಾಡಿದರು.
ನಿವೃತ್ತ ಶಿಕ್ಷಕಿ ಬಸಲಿಂಗಮ್ಮ ಪಾಟೀಲ್​, ರಾಮೋತ್ಸವ ಸಮಿತಿ ಗೌರವಾಧ್ಯಕ್ಷ ನರೇಂದ್ರ ರುದ್ನೂರ, ಅಧ್ಯಕ್ಷ ವಸಂತಕುಮಾರ ಪಾಟೀಲ್​, ಉಪಾಧ್ಯಕ್ಷ ಕಿಶನ್​ ಪವಾರ್​ ಇತರರಿದ್ದರು.
ಭರತ ಬಜಾಜ್​ ಹನುಮಾನ ಚಾಲೀಸ್​ ಪಠಣ ಮಾಡಿದರು. ವೀರೇಶ ಹೂಗಾರ ಸ್ವಾಗತಿಸಿ, ನಿರೂಪಣೆ ಮಾಡಿದರು. ಬಸವಪ್ರಸಾದ ಅವಂಟಿ ವಂದಿಸಿದರು.
ಬೃಹತ್​ ಶೋಭಾಯಾತ್ರೆ
ಸೇಡಂನಲ್ಲಿ ಶ್ರೀ ರಾಮೋತ್ಸವ ನಿಮಿತ್ತ ಅಯೋಧ್ಯಾಪತಿ ಶ್ರೀ ರಾಮೋತ್ಸವ ಸಮಿತಿಯಿಂದ ಶನಿವಾರ ರಾಮನ ಮೂರ್ತಿಯ ಬೃಹತ್​ ಶೋಭಾಯಾತ್ರೆ ನಡೆಯಿತು. ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್​ ತೆಲ್ಕೂರ(ಜಿಕೆ), ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಡೊಳ್ಳು, ಹಲಗೆ, ವಿದ್ಯಾರ್ಥಿಗಳ ಲೇಜಿಮ್​ ಸೇರಿ ವಿವಿಧ ವಾಧ್ಯಮೇಳಗಳು ಗಮನಸೆಳೆದವು. ರಥದಲ್ಲಿ ಶ್ರೀರಾಮ, ಸೀತಾಮಾತೆ, ಹನುಮ ವೇಷಧಾರಿಗಳು, ತೆರೆದ ವಾಹನದಲ್ಲಿ ರಾಮಾಯಣ ರಚಿಸಿದ ವಾಲ್ಮೀಕಿಯ ವೇಷಧಾರಿ ಮತ್ತು ಬೃಹತ್​ ಶ್ರೀರಾಮನ ಮೂರ್ತಿ ಆಕರ್ಷಣೀಯವಾಗಿದ್ದವು. ಯುವಕರಿಂದ ಜೈ ಶ್ರೀರಾಮ್​.. ಜೈ ಹನುಮಾನ್​ ಸೇರಿ ವಿವಿಧ ಘೋಷಣೆ ಮೊಳಗಿದವು.
"

ಹಿಂದೂ ಧರ್ಮವೆಂದರೆ ಅದೊಂದು ನಂಬಿಕೆ, ಸಂಸತಿಯ ಪ್ರತಿಕ. ಯಾವುದೇ ಧರ್ಮದಲ್ಲಿ ಮಹಿಳೆಗೆ ಪೂಜ್ಯನಿಯ ಸ್ಥಾನವಿಲ್ಲ. ಆದರೆ ಹಿಂದೂ ಧರ್ಮದಲ್ಲಿ ಗೌರವದ ಸ್ಥಾನ ನೀಡಲಾಗಿದೆ. ಅಧರ್ಮದ ವ್ಯಕ್ತಿಗಳು ರಾಮನ ದೇವಸ್ಥಾನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಕೊನೆಗೆ ಧರ್ಮ ಗೆದ್ದಿದೆ..

> ಮುಮ್ತಾಜ್​ ನೆಲ್ಯಡ್ಕ, ನಿರೂಪಕಿ

"

ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ಕರ ಸೇವಕರನ್ನು ಗೌರವಿಸುವ ಕೆಲಸ ಉತ್ಸವದ ವೇದಿಕೆಯಲ್ಲಿ ಆಗಬೇಕು. ನಮ್ಮ ಜಾತಿಗಳನ್ನು ಮನೆಗೆ ಮಾತ್ರ ಸೀಮಿತಗೊಳಿಸಿ, ಹಿಂದೂ ಧರ್ಮದ ಅಖಂಡತೆಯನ್ನು ಎತ್ತಿಹಿಡಿಯುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು.

> ಶ್ರೀಕಾಂತಶೆಟ್ಟಿ ಕಾರ್ಕಳ, ಖ್ಯಾತ ವಾಗ್ಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net