_1783103034010.webp?w=480&auto=format%2Ccompress&fit=max)
_1783103034010.webp?w=480&auto=format%2Ccompress&fit=max)
ಈ ಬಗ್ಗೆ ತೈತ್ತಿರೀಯೋಪನಿಷತ್ತಿನಲ್ಲಿ ಸ್ಪಷ್ಟವಾದ ವಿವರಣೆಯೇ ಇದೆ. ಅಲ್ಲಿ ಅಸಂತನೆಂದರೆ ಏನೆಂಬುದನ್ನು ಮೊದಲು ವಿವರಿಸಿ, ಆಮೇಲೆ ಸಂತನೆಂದರೆ ಯಾರೆಂಬುದನ್ನು ತಿಳಿಸಿದೆ.
ಸಂತನೆಂಬ ಪದ ಕನ್ನಡದ್ದು. ಅದರೆ ಅದರ ಮೂಲ ಸಂಸ್ಕೃತದ ಸತ್ ಎಂಬುದು. ಹಾಗಾದರೆ ಸತ್ ಎಂದರೇನು? ಅದಕ್ಕೆ ಗೀತೆಯಿತ್ತಿರುವ ಉತ್ತರವನ್ನೇ ಮೊದಲು ನೋಡುವುದು ಒಳಿತು.
ಸತ್ ಎಂಬುದು ಆರು ಅರ್ಥಗಳಲ್ಲಿ (ಲೋಕದಲ್ಲಿಯೂ ವೇದದಲ್ಲಿಯೂ) ಬಳಕೆಯಾಗಿದೆಯೆಂದು ಭಗವದ್ಗೀತೆಯು ಪಟ್ಟಿಮಾಡುತ್ತದೆ! ಮೊಟ್ಟಮೊದಲನೆಯದಾಗಿ ಸತ್ ಎನ್ನುವುದು ಬ್ರಹ್ಮದ ಹೆಸರೇ. ಅಲ್ಲದೆ, ಸದ್ಭಾವ ಹಾಗೂ ಸಾಧುಭಾವಗಳೆಂಬ ಅರ್ಥಗಳಲ್ಲೂ ಸತ್ ಎಂಬುದನ್ನು ಬಳಸಲಾಗುತ್ತದೆ.
ಈ ಮೂರಲ್ಲದೆ, ಯಾವುದೇ ಪ್ರಶಸ್ತ ಕರ್ಮವೂ ಸತ್ ಎನಿಸಿಕೊಳ್ಳುತ್ತದೆ. ಯಜ್ಞ- ದಾನ- ತಪಸ್ಸುಗಳಲ್ಲಿ ತೊಡಗುವಿಕೆಯೂ, ಜೊತೆಗೆ ಅವಕ್ಕಾಗಿ ಮಾಡುವ ಕರ್ಮವೂ ಸತ್ ಎನಿಸಿಕೊಳ್ಳತಕ್ಕವೇ ಎನ್ನುತ್ತದೆ ಗೀತೆ. (ಯಜ್ಞ-ದಾನ-ತಪಸ್ಸುಗಳನ್ನೇ ಅಶ್ರದ್ಧೆಯಿಂದ ಮಾಡಿದಲ್ಲಿ ಅವೆಲ್ಲವೂ ಅಸತ್ ಎನಿಸಿಕೊಳ್ಳುತ್ತವೆ).
ಇವಿಷ್ಟರಲ್ಲಿ ಮೊದಲನೆಯ ಮೂರು ಅರ್ಥಗಳು ನಮಗಿಲ್ಲಿ ಪ್ರಕೃತ. ಸತ್ ಎಂದರೆ ಇರುವಂತಹುದು. ಮೂರು ಕಾಲಗಳಲ್ಲೂ, ಎಂದರೆ ಹಿಂದೂ ಇಂದೂ ಮುಂದೂ, ಎಂದೆಂದೂ ಇರುವಂತಹುದು; ಅದೇ ಬ್ರಹ್ಮ. ಎಂದೇ ಅದೇ ಪ್ರಥಮಾರ್ಥ. ಇನ್ನು ಸದ್ ಭಾವವೆಂದರೆ ಇರುವುದೆಂದೆನಿಸಿ ಕೊಳ್ಳುವಿಕೆ; ಸಾಧುಭಾವವೆಂದರೆ ಒಳ್ಳೆಯ ದಾಗಿರುವಿಕೆ. ವಾಸ್ತವವಾಗಿ ಅಸ್ತಿ ಎಂಬುದರ ಧಾತುವಿನಿಂದಲೇ ಸತ್ ಎಂಬುದು ಬಂದಿರುವುದು. ಅಸ್ತಿ ಎಂದರೆ ಇದೆ ಎಂದರ್ಥ.
ನಾವು ಕಾಣುವ ಎಲ್ಲ ವಸ್ತುಗಳೂ/ವ್ಯಕ್ತಿಗಳೂ ಇಂದಲ್ಲ ನಾಳೆ ಬದಲಾಗುವಂತಹವೇ/ ಮರೆಯಾಗುವಂತಹರೇ. (ನಾವೂ ಅಷ್ಟೇ). ಕೆಲವೇ ವಸ್ತುಗಳೇ ದೀರ್ಘಕಾಲ ಉಳಿಯುವಂತಹುವು. ಈಗಿದ್ದು ಮರುಕ್ಷಣಕ್ಕೆ ಮರೆಯಾಗುವುದನ್ನು ನಂಬುವುದೆಂತು? ಇಂದು ನಂಬಿಸಿ ನಾಳೆ ಮಾಯವಾಗುವವರನ್ನು ನೆಚ್ಚಲಾದೀತೇ, ಮೆಚ್ಚಲಾದೀತೇ? ಪ್ರೀತಿ-ವಿಶ್ವಾಸಗಳಾದರೂ ಚಿರಕಾಲ ಉಳಿಯುವಂತಾದಾಗಲೇ ಅವಲ್ಲಿ ನಂಬಿಕೆಯಿಡುವಂತಹುದು.
ಯಾವುದನ್ನು ನೆಚ್ಚಬಲ್ಲೆವೋ ಅದುವೇ ಒಳ್ಳೆಯದನ್ನಾಗಿಸುವುದು: ಯಾವುದು ಉಳಿಯುವುದೋ ಅದುವೇ ಒಳ್ಳೆಯದೂ ಆಗುವುದು. ಹೀಗಾಗಿ ಉಳಿಯುವುದು, ಒಳ್ಳೆಯದು ಎಂಬೆರಡಕ್ಕೂ ಅಂಟುಂಟು.
ಅಲ್ಲಿಗೆ, ಸಂಸ್ಕೃತದ ಸತ್ ಎಂಬುದರ ಅರ್ಥಗಳಾದ ಸದ್ಭಾವ- ಸಾಧುಭಾವ ಗಳಲ್ಲಿಯ ಅಂಟು- ನಂಟುಗಳೇ ಕನ್ನಡದ ಕನ್ನಡಿಯಲ್ಲಿ ಹೀಗೆ ಪ್ರತಿಫಲಿತವಾಗಿವೆ ಯೆಂದಾಯಿತು!
ಇನ್ನು ಉಪನಿಷತ್ತು ಏನು ಹೇಳುವುದೆಂಬುದನ್ನು ನೋಡೋಣ. ತ್ರಿಕಾಲಸತ್ಯವು ಯಾವುದೋ, ಎಂದರೆ ಭೂತ- ವರ್ತಮಾನ- ಭವಿಷ್ಯತ್ತುಗಳಲ್ಲಿ ಯಾವುದು ಇರುವುದೋ, ಅದುವೇ ಬ್ರಹ್ಮವಷ್ಟೆ? ಆದ್ದರಿಂದ ಸತ್ ಎನ್ನಿಸಿಕೊಳ್ಳುವ ಪದಾರ್ಥಗಳಲ್ಲೆಲ್ಲಾ ಅದುವೇ ಶ್ರೇಷ್ಠವಾದದ್ದು: ಸತ್ತಮವೇ ಅದು.
ಹಾಗಿರುವ ಅದನ್ನೇ ಯಾರಾದರೂ ಅಸತ್ ಎಂದುಕೊಂಡು ಬಿಡುವುದಾದರೆ ಆತನೇ ಅಸತ್/ಅಸಂತನಾಗಿಬಿಡುತ್ತಾನೆ! ಎನ್ನುತ್ತದೆ ತೈತ್ತಿರೀಯ. ಅರ್ಥಾತ್ ಇಲ್ಲವಾಗಿಬಿಡುತ್ತಾನೆ! ಪರಮಸತ್ಯವನ್ನೇ ಅಲ್ಲಗಳೆಯುವಾತನು ತಾನುಳಿದಾನೇ? ಹಾಗೆಂದ ಮಾತ್ರಕ್ಕೆ ತತ್ಕ್ಷಣವೇ ಆತನು ಸತ್ತುಹೋಗಿಬಿಡುತ್ತಾನೆಂದಲ್ಲ; ಇದ್ದೂ ಇಲ್ಲವಾಗು ತ್ತಾನೆಂದೇ ಅದರ ಅರ್ಥ. ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬುದರ ಅರ್ಥ ಇದೇ. ಸತ್ ಎಂಬುದು ಹೋದವನನ್ನೇ ಸತ್ತುಹೋದವನು ಎನ್ನುವುದು! ಇದಕ್ಕೆ ಪ್ರತಿಯಾಗಿ, ಸದಾ ಇರುವ ಸತ್ತನ್ನೇ ಅಸ್ತಿ ಎಂಬುದಾಗಿ ಯಾವನು ಅರಿತಿರುವನೋ, ಆತನನ್ನೇ ಸಂತನೆನ್ನುವರು (ಸಂತಮೇನಂ ತತೋ ವಿದುಃ) - ಎನ್ನುತ್ತದೆ ಉಪನಿಷತ್ತು.
ಈ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳು ಕೊಟ್ಟಿರುವ ಎಚ್ಚರವು ಅವಧೇಯ: ಬ್ರಹ್ಮನ ಇರುವಿಕೆಯನ್ನು ಕಂಡು ಅರಿತವನನ್ನೇ ಸಂತನೆಂದು ಜ್ಞಾನಿಗಳು ತಿಳಿಯುತ್ತಾರೆ. ಅಂತಹವನೇ ನಿಜವಾದ ಆಸ್ತಿಕ.
ಅರ್ಥಾತ್, ಆ ಅನುಭವವೇ ಉಂಟಾಗದವರು, ಅಸ್ತಿಯೆಂದು ಬಾಯ್ಮಾತಿಗಷ್ಟೇ ಹೇಳುವವರು, ಒಂದರ್ಥದಲ್ಲಿ ನಾಸ್ತಿಕರೇ ಸರಿ; ಔಪಚಾರಿಕವಾಗಿಯಷ್ಟೆ ಅವರು ಆಸ್ತಿಕರು!
ಉಪನಿಷತ್ತು ಹೇಳುವ ಅರ್ಥದಲ್ಲಿ ಸಂತನೆನಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಶ್ರೀರಂಗಮಹಾಗುರುಗಳು ತಿಳಿಸುವ ಲೆಕ್ಕದಲ್ಲಿ ಆಸ್ತಿಕರಾಗಬೇಕಾದರೆ ನಿಜವಾದ ಸಾಧನೆಯೇ ಬೇಕು. ಅಸ್ತಿಯೆಂಬ ಮತಿಯು ವಾಸ್ತವವಾಗಿ ತನ್ನಲ್ಲಿಯೇ ಉಂಟಾದವನೇ ನಿಜವಾದ ಆಸ್ತಿಕ. ಜಗತ್ ಎಂಬ ಪದಕ್ಕೇ ಸದಾ ಬದಲಾಗುತ್ತಿರುವುದು ಎಂಬ ಅರ್ಥವಿದೆ. ಇದಕ್ಕೆ ಪ್ರತಿಯಾಗಿ ಎಂದೂ ಬದಲಾಗದೆ ಇರುವುದೇ ಸತ್ ಎನಿಸುವುದು. ಸನಾತನ/ಸದಾತನವೆಂದರೂ ಅದುವೇ.
ಅಂತಹ ಮಹತ್ತಾದ ಸದ್ವಸ್ತುವನ್ನು ಸ್ವಾನುಭವದಿಂದ ತನ್ನ ಸ್ವಾಂತಕ್ಕೆ(ಅಂತಃಕರಣಕ್ಕೆ) ತಂದುಕೊಂಡವನೇ ಸಂತ ಎನ್ನುವುದೇ ಉಪನಿಷದುಕ್ತಿಯ ಸದಾಶಯವಲ್ಲವೇ?