ಬಿಡದಿ ಬಳಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ನಿರ್ಮಾಣ ಏನು-ಏತ್ತ? Bidadi Township

 7,481 ಎಕರೆ  ಪ್ರದೇಶಗಳಲ್ಲಿ ಬಿಡದಿ ಟೌನ್​ಶಿಪ್​
7,481 ಎಕರೆ ಪ್ರದೇಶಗಳಲ್ಲಿ ಬಿಡದಿ ಟೌನ್​ಶಿಪ್​
Published on
ಬೆಂಗಳೂರು: ರಾಜಧಾನಿಯ ಅನತಿ ದೂರದ ಬಿಡದಿ ಸಮೀಪ ಒಟ್ಟು 7,481 ಎಕರೆ ಪ್ರದೇಶಗಳಲ್ಲಿ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ’ಯನ್ನು ಅನುಷ್ಠಾನಕ್ಕೆ ತರುವ ವಿಚಾರ ಕುರಿತು ಆಡಳಿತ-ವಿರೋಧ ಪಕ್ಷಗಳು ನಡುವೆ ಸಂಘರ್ಷ ಏರ್ಪಟ್ಟಿದೆ. ಇದರ ನಡುವೆ ಯೋಜನೆ ರದ್ಧತಿಗಾಗಿ ರೈತರು,ಭೂಮಾಲೀಕರು ತೀವ್ರವಾಗಿ ಹೋರಾಟ ನಡೆಸುವ ಮೂಲಕ ಬಿಗಿಪಟ್ಟು ಹಿಡಿದಿದ್ದಾರೆ. ಈ ಮಧ್ಯೆಯಲ್ಲಿ ಈ ಯೋಜನೆಯ ರೂಪುರೇಷಗಳು ಏನು-ಎತ್ತ? ಎಂಬುದರ ಬಗ್ಗೆ ವಿಜಯವಾಣಿ ಮುಂದಿಟ್ಟಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯಡಿ ಒಟ್ಟು 18,133 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ. ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲಿನ ನಗರಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ‘ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ’ ಯೋಜನಾ ಪ್ರದೇಶಕ್ಕೆ ರಚಿಸಲಾಗಿರುವ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ರಾಮನಗರ ಜಿಲ್ಲೆಯ (ಪ್ರಸ್ತುತ ಬೆಂಗಳೂರು ದಕ್ಷಿಣ ಜಿಲ್ಲೆ) ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಬನ್ನಿಗಿರಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಮತ್ತು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 7,481 ಎಕರೆ ಪ್ರದೇಶಗಳಲ್ಲಿ ‘ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ’ ಯೋಜನೆಯನ್ನು ಅನುಷ್ಠಾನ ತರಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊರಟಿದೆ. ಯೋಜನೆ ಸಂಬಂಧ ಸ್ವೀಕೃತವಾಗಿರುವ ಆಕ್ಷೇಪಣೆಗಳನ್ನು ಈಗಾಗಲೇ ತಳ್ಳಿಹಾಕಲಾಗಿದೆ.
ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಬಿಎಂಆರ್‌ಡಿಎ) ವ್ಯಾಪ್ತಿಯ ಯೋಜನಾ ಪ್ರಾಧಿಕಾರಗಳಲ್ಲಿ ಸಂಗ್ರಹವಾಗಿರುವ ಒಟ್ಟು ಮೊತ್ತದ ಪೈಕಿ ಕೆರೆ ಪುನರ್‌ಜ್ಜೀವನ ಶುಲ್ಕ, ನೀರು ಸರಬರಾಜು ಯೋಜನಾ ಕರ, ರಿಂಗ್ ರಸ್ತೆ ಕರ, ಕೊಳಚೆ ಪ್ರದೇಶಗಳ ಉನ್ನತೀಕರಣ ಕರ ಸೇರಿ ಎಂಆರ್‌ಟಿಎಸ್ ಉದ್ದೇಶದ ಕರಗಳನ್ನು ಹೊರತುಪಡಿಸಿ ಉಳಿಕೆ ಶೇ.50 ಮೊತ್ತವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ.
5,681 ಎಕರೆ ಪ್ರದೇಶದಲ್ಲಿ ಬೃಹತ್ ಏಕ ನಿವೇಶನ ಅಭಿವೃದ್ಧಿ:
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಡಿ 1,800 ಎಕರೆ ಪ್ರದೇಶಗಳಲ್ಲಿ ವಸತಿ ಬಡಾವಣೆ ನಿರ್ಮಾಣ ಮತ್ತು 5,681 ಎಕರೆ ಪ್ರದೇಶದಲ್ಲಿ ಬೃಹತ್ ಏಕನಿವೇಶನ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಏಕ ನಿವೇಶನದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು, ಈ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸಲು ಅವಕಾಶ ನೀಡಲು ಉದ್ದೇಶಿಸಲಾಗಿದೆ. ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡುವ ವಸತಿ ನಿವೇಶನಗಳ ಅಭಿವೃದ್ಧಿಗಾಗಿ ಅಂದಾಜು 2,827 ಕೋಟಿ ರೂ ಹಾಗೂ ಏಕ ನಿವೇಶನಗಳ ಅಭಿವೃದ್ಧಿಗೆ ಅಂದಾಜು 3,753 ಕೋಟಿ ರೂ. ಸೇರಿ ಒಟ್ಟು ಅಭಿವೃದ್ಧಿ ವೆಚ್ಚ 6,580 ಕೋಟಿ ರೂ.ಗಳಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನಾ ಅನುಷ್ಠಾನ, ಅಭಿವೃದ್ಧಿಗಾಗಿ ತೆಗೆದುಕೊಳ್ಳುವ ಸಾಲದ ಮೊತ್ತಕ್ಕೆ ಬಡ್ಡಿಯನ್ನು ಸರ್ಕಾರ ಭರಿಸಬೇಕಿದೆ. ಹಾಗಾಗಿ, ಮೂರು ವರ್ಷ ಅವಧಿಗೆ ಈ ಯೋಜನೆಗಾಗಿ ಒಟ್ಟು 2,443 ಕೋಟಿ ರೂ.ಅನುದಾನ ಕೋರಲಾಗಿದೆ. ಎಲ್ಲ ಮೂಲಗಳಿಂದ ಕ್ರೋಡೀಕರಿಸಿದ ಸಂಪನ್ಮೂಲಗಳು ಮತ್ತು ಬಾಹ್ಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಕ್ಕೆ 3,897 ಕೋಟಿ ರೂ.ಬಡ್ಡಿ ನೀಡಬೇಕಾಗುತ್ತದೆ.
ಹುಡ್ಕೋನಿಂದ 12,661 ಕೋಟಿ ರೂ.ಸಾಲ:
ಈ ಯೋಜನೆಗೆ ಸರ್ಕಾರವು ವಿವಿಧ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಯೋಜನೆ ರೂಪಿಸಿದೆ. ಬಿಎಂಆರ್‌ಡಿಎ ವ್ಯಾಪ್ತಿಯ ಯೋಜನಾ ಪ್ರಾಧಿಕಾರಗಳಿಂದ 1,150 ಕೋಟಿ ರೂ., ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2 ಸಾವಿರ ಕೋಟಿ ರೂ ಹಾಗೂ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸಿಎ ನಿವೇಶನಗಳನ್ನು ಅಡಮಾನ ಇಟ್ಟು ಬ್ಯಾಂಕ್‌ನಿಂದ 3,500 ಕೋಟಿ ರೂ.ಸಾಲ ಪಡೆಯಲು ಯೋಜಿಸಲಾಗಿದೆ. ಹುಡ್ಕೋ ಬ್ಯಾಂಕ್‌ನಿಂದ ಬರೋಬ್ಬರಿ 12,661 ಕೋಟಿ ರೂ.ಸಾಲ ಪಡೆಯಲು ಸರ್ಕಾರ ನಿರ್ಧರಿಸಿದೆ. ಯೋಜನೆಯಿಂದ ಬರುವ ಆದಾಯವನ್ನು ಹುಡ್ಕೋ ಸಾಲ ತೀರಿಸಲು ಆದ್ಯತೆ ನೀಡಲಾಗಿದೆ.
ಯೋಜನೆ ವಿವರ:
* ಒಟ್ಟು 7,481 ಎಕರೆ ಪ್ರದೇಶಗಳಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಅನುಷ್ಠಾನ
* ಇದರಲ್ಲಿ ಸರ್ಕಾರಿ ಮಾಲೀಕತ್ವದ 830 ಎಕರೆ ಇದ್ದರೆ, ಖಾಸಗಿ ಮಾಲೀಕತ್ವದ 6,650 ಎಕರೆ ಇದೆ
* ರೈತರು ಸೇರಿ ಖಾಸಗಿ ಭೂಮಾಲೀಕರಿಂದ 6,650 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ
* ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಪ್ರಾಧಿಕಾರಕ್ಕೆ ಲಭ್ಯವಾಗುವ ವಿಸ್ತೀರ್ಣದ ಪೈಕಿ ಶೇ.44.5 ಅಭಿವೃದ್ಧಿ ಹೊಂದಿ ಮಾರಾಟ ಮಾಡಬಹುದಾದ ವಿಸ್ತೀರ್ಣ ಲಭ್ಯ
* ಪ್ರತಿ ಎಕರೆಗೆ ಭೂಮಾಲೀಕರಿಗೆ 9,696 ಚ.ಅಡಿ ವಸತಿ ನಿವೇಶನ ಅಥವಾ 8,723 ಚ.ಅಡಿ ವಾಣಿಜ್ಯ ನಿವೇಶನವನ್ನು ಪರಿಹಾರ ರೂಪದಲ್ಲಿ ನೀಡಲು ನಿರ್ಣಯ
* ಯೋಜನೆ ಅನುಷ್ಠಾನಕ್ಕೆ ಬಡ್ಡಿ ಸೇರಿ ಒಟ್ಟು 22,001 ಕೋಟಿ ರೂ. ಆಗಲಿದೆ
* ಬಿಎಂಆರ್‌ಡಿಎ ವ್ಯಾಪ್ತಿಯ ಯೋಜನಾ ಪ್ರಾಧಿಕಾರಗಳಲ್ಲಿ ಬಳಕೆಯಾಗದೇ ಇರುವ ಮೊತ್ತಗಳ ಪೈಕಿ ಶೇ.50 ಮೊತ್ತ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ
* ಆಂತರಿಕ, ಬಾಹ್ಯ ಸಂಪನ್ಮೂಲ ಕ್ರೋಡೀಕರಿಸಿ 3 ವರ್ಷ ಅವಧಿಯಲ್ಲಿ ಭೂಸ್ವಾಧೀನ, ಅಭಿವೃದ್ಧಿಗಾಗಿ ವೆಚ್ಚ ಮಾಡಲು ತೀರ್ಮಾನ
* ಪ್ರೀಮಿಯಂ ಎಫ್​​​ಎಆರ್ ಆಸ್ತಿ ತೆರಿಗೆ ಸೇರಿ ಇತರ ಶುಲ್ಕದಿಂದ 33,562 ಕೋಟಿ ರೂ.ಆದಾಯ ನಿರೀಕ್ಷೆ
* ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಐ-ಡೆಕ್‌ನಿಂದ ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆ ವರದಿ ತಯಾರಿಕೆ
ಈ ಯೋಜನೆಯು ನಗರಾಭಿವೃದ್ಧಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೆ, ಪಾರದರ್ಶಕ ಭೂಸ್ವಾಧೀನ ಪ್ರಕ್ರಿಯೆ, ನ್ಯಾಯಸಮ್ಮತ ಪರಿಹಾರ, ಸಮಯೋಚಿತ ಪುನರ್ವಸತಿ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಆಧಾರದಲ್ಲಿ ಈ ಯೋಜನೆ ಅವಲಂಬಿತವಾಗಿದೆ. ರೈತರು, ಭೂಮಾಲೀಕರು, ನಗರ ಯೋಜನೆ, ಪರಿಸರ, ಸ್ಥಳೀಯ ಸಮುದಾಯಗಳ ಮೇಲೆ ಬೀರುವ ಪರಿಣಾಮವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಪ್ರೀಮಿಯಂ ಎಫ್​​​ಎಆರ್, ಪರಿಸರ ಸಮತೋಲನ ಮತ್ತು ಸಮಗ್ರ ನಗರ ಯೋಜನಾ ಉದ್ದೇಶಗಳನ್ನು ದುರ್ಬಲಗೊಳಿಸಬಾರದು.
ಪ್ರಶಾಂತ್ ಮಿರ್ಲೆ, ವಕೀಲರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net