ಅಸಲಿ ಪನೀರ್​ ಯಾವುದು? ಅನಲಾಗ್​ ಪನೀರ್​ ಯಾವುದು? ಆರೋಗ್ಯಕ್ಕೆ ಎಷ್ಟು ಅಪಾಯ ಗೊತ್ತೇ? ತಿನ್ನುವ ಮುನ್ನ ತಿಳಿಯಬೇಕಾದ 5 ವಿಚಾರಗಳು ಇಲ್ಲಿವೆ! Real Paneer and Analog Paneer

ಅಸಲಿ ಮತ್ತು ಅನಲಾಗ್​ ಪನೀರ್​
ಅಸಲಿ ಮತ್ತು ಅನಲಾಗ್​ ಪನೀರ್​
Published on

ಪ್ರಮುಖ ಮುಖ್ಯಾಂಶಗಳು

  • ಮಾರುಕಟ್ಟೆಯಲ್ಲಿ ನಕಲಿ ಅಥವಾ ಅನಲಾಗ್ ಪನೀರ್ ಹಾವಳಿ ಹೆಚ್ಚಳ
  • ಕಾರ್ನಾಟಕ ಸರ್ಕಾರದಿಂದ ಅನಲಾಗ್​ ಪನೀರ್​ ಒಂದು ವರ್ಷಕ್ಕೆ ಬ್ಯಾನ್​
  • ಅಸಲಿ ಮತ್ತು ಅನಲಾಗ್​ ಪನೀರ್ ಪರೀಕ್ಷೆ ನಡೆಸುವುದು ಹೇಗೆ?
Real Paneer and Analog Paneer​:

ರಾಜ್ಯದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಮುಂದಿನ ಒಂದು ವರ್ಷದ ಮಟ್ಟಿಗೆ ನಾನ್​ ಡೈರಿ ಪನೀರ್​ ಅಥವಾ ಅನಲಾಗ್​ ಪನೀರ್​ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪ್ರಕಟಿಸಿರುವ ಆದೇಶದಲ್ಲಿ, ಒಂದು ವರ್ಷದ ಮಟ್ಟಿಗೆ ರಾಜ್ಯದಲ್ಲಿ ಅನಲಾಗ್​ ಪನೀರ್​ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್​, ಸಂಗ್ರಹ ಮತ್ತು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಲಾಗಿದೆ.
ಆದರೆ, ಬಹಳಷ್ಟು ಜನರಿಗೆ ಹಾಲಿನಿಂದ ತಯಾರಿಸುವ ಪನೀರ್​ ಮತ್ತು ಈ ಅನಲಾಗ್​ ಪನೀರ್​ಗೆ ಏನು ವ್ಯತ್ಯಾಸ? ಹಾಗೂ ಈ ಅನಲಾಗ್​ ಪನೀರ್​ ಎಂದರೇನು? ಇದನ್ನು ಸೇವಿಸಿದರೆ ಆರೋಗ್ಯಕ್ಕೆ ತೊಂದರೆಯೇ? ಸರ್ಕಾರ ಏಕೆ ಇದನ್ನು ನಿಷೇಧಿಸಿದೆ? ಅಸಲಿ ಮತ್ತು ಅನಲಾಗ್​ ಪನೀರ್​ ಅನ್ನು ಪತ್ತೆ ಹಚ್ಚುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತಿರುತ್ತವೆ. ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿಯೋಣ.

ಅನಲಾಗ್​ ಪನೀರ್​ ಎಂದರೇನು?

ಅನಲಾಗ್​ ಪನೀರ್​ ಏನೆಂದು ತಿಳಿಯುವ ಮುನ್ನ ಮೊದಲು ಪನೀರ್​ ಏನೆಂದು ತಿಳಿಯೋಣ.

ಹಸುವಿನ ಅಥವಾ ಎಮ್ಮೆಯ ಹಾಲಿನ್ನು ನಿಂಬೆರಸ, ವಿನೆಗರ್ ಅಥವಾ ಮಜ್ಜಿಗೆಯಂತಹ ಆಮ್ಲೀಯ ಪದಾರ್ಥಗಳಿಂದ ಹೆಪ್ಪುಗಟ್ಟಿಸಿ, ನಂತರ ಅದರಲ್ಲಿರುವ ನೀರನ್ನು ಸಂಪೂರ್ಣವಾಗಿ ಸೋಸಿದಾಗ ದೊರೆಯುವ ಮೃದುವಾದ ಹಾಲಿನ ಉತ್ಪನ್ನವನ್ನು ಪನೀರ್ ಎನ್ನಲಾಗುತ್ತದೆ.

ಅಸಲಿ ಪನೀರ್​ನಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಆರೋಗ್ಯಕರ ಕೊಬ್ಬಿನ ಅಂಶಗಳಿದ್ದು, ಇದು ಒಂದರ್ಥದಲ್ಲಿ ಸಸ್ಯಹಾರಿಗಳ ಚಿಕನ್​ ಎಂದೂ ಕರೆಯಬಹುದಾಗಿದೆ.

ಆದರೆ, ಸರ್ಕಾರ ಈಗ ಬ್ಯಾನ್​ ಮಾಡಿರುವ ಕೃತಕ ಪನೀರ್​ ಅಥವಾ ಅನಲಾಗ್​ ಪನೀರ್​​ ಅನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಸಸ್ಯಜನ್ಯ ತೈಲ, ವನಸ್ಪತಿ (ಡಾಲ್ಡಾ) ಮತ್ತು ಹಾಲಿನ ಬದಲು ರಾಸಾಯನಿಕಗಳನ್ನು ಬಳಸಿಕೊಂಡು ತಯಾರಿಸುವ ಪನೀರ್​ ಅನ್ನು ಕೃತಕ ಪನೀರ್​ ಅಥವಾ ಅನಲಾಗ್​ ಪನೀರ್​ ಎಂದು ಕರೆಯಲಾಗುತ್ತದೆ.
ಈ ಅನಲಾಗ್​ ಪನೀರ್​ ಅನ್ನು ಹಾಲಿನ ಬದಲು ರಾಸಾಯನಿಕಗಳ ಸಹಾಯದಿಂದ ತಯಾರಿಸುವ ಕಾರಣ ಇದರಲ್ಲಿ ಅಸಲಿ ಪನೀರ್​ನಲ್ಲಿ ಇರುವಂತೆ ಯಾವುದೇ ಪ್ರೊಟೀನ್​, ಕ್ಯಾಲ್ಸಿಯಂ ಮತ್ತು ಆರೋಗ್ಯಕರ ಕೊಬ್ಬಿನ ಅಂಶಗಳು ಇರುವುದಿಲ್ಲ.

ಈ ಅನಲಾಗ್​ ಪನೀರ್​ ಅಸಲಿ ಪನೀರ್​ನಲ್ಲಿನಂತೆ ಕಾಣುತ್ತದೆ, ಹಾಗೂ ಪರಿಮಳವನ್ನೂ ಸೂಸುತ್ತದೆ. ಆದರೆ ಅಸಲಿಯಲ್ಲಿರುವ ಪೋಷಕಾಂಶಗಳು ಕೃತಕದಲ್ಲಿರುವುದಿಲ್ಲ.

ಅನಲಾಗ್​ ಪನೀರ್​ ಸೇವನೆ ಹಾನಿಕಾರಕವೇ?

ಹೌದು, ಅಸಲಿ ಪನೀರ್​ ಬದಲಿಗೆ ಈ ಅನಲಾಗ್​ ಪನೀರ್​ ಅನ್ನು ನಿರಂತರವಾಗಿ ಸೇವಿಸಿದರೆ, ಖಂಡಿತವಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ.

1. ಹೃದಯದ ಸಮಸ್ಯೆಗಳು

ಅನಲಾಗ್ ಪನೀರ್ ತಯಾರಿಸಲು ತಾಳೆ ಎಣ್ಣೆ (ಪಾಮ್​ ಆಯಿಲ್), ವನಸ್ಪತಿ ಅಥವಾ ಹೈಡ್ರೋಜನೀಕರಿಸಿದ ಸಸ್ಯಜನ್ಯ ಕೊಬ್ಬನ್ನು ಬಳಸಲಾಗುತ್ತದೆ. ಇದರಲ್ಲಿ ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಕೊಬ್ಬು ಅತ್ಯಧಿಕವಾಗಿರುತ್ತದೆ. ಇದು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಿ, ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟುಮಾಡುವ ಮೂಲಕ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

2. ಬೊಜ್ಜು ಮತ್ತು ಅಧಿಕ ತೂಕ

ಅನಲಾಗ್​ ಪನೀರ್​ ಕಡಿಮೆ ಗುಣಮಟ್ಟದ ಕೊಬ್ಬು ಮತ್ತು ಕೃತಕ ಪಿಷ್ಟದಿಂದ ಮಾಡಲ್ಪಟ್ಟಿರುವುದರಿಂದ ಇದರ ಕ್ಯಾಲೊರಿ ಪ್ರಮಾಣ ಅಧಿಕವಾಗಿರುತ್ತದೆ. ಇದನ್ನು ನಿರಂತರವಾಗಿ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆಯಾಗಿ ತೂಕ ಹೆಚ್ಚಾಗಿ ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗುತ್ತದೆ.

3. ಪೌಷ್ಟಿಕಾಂಶದ ಕೊರತೆ

ಅಸಲಿ ಪನೀರ್‌ನಲ್ಲಿ ನೈಸರ್ಗಿಕ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳು ಸಮೃದ್ಧವಾಗಿರುತ್ತವೆ. ಆದರೆ ಅನಲಾಗ್ ಪನೀರ್‌ನಲ್ಲಿ ಪ್ರೊಟೀನ್ ಅಂಶ ತೀರಾ ಕಡಿಮೆ ಇರುತ್ತದೆ. ದೇಹಕ್ಕೆ ಸಿಗಬೇಕಾದ ಸರಿಯಾದ ಪೋಷಕಾಂಶಗಳು ಸಿಗದೆ ಪೌಷ್ಟಿಕಾಂಶದ ಕೊರತೆ ಎದುರಾಗುತ್ತದೆ.

4. ಜೀರ್ಣಕ್ರಿಯೆ ಸಮಸ್ಯೆಗಳು

ಅನಲಾಗ್​ ಪನೀರ್​ ಅನ್ನು ಗಟ್ಟಿಯಾಗಿಸಲು ಮತ್ತು ಒಂದೇ ಸಮನಾದ ಆಕಾರದಲ್ಲಿಡಲು ಕೃತಕ ರಾಸಾಯನಿಕಗಳು, ಸ್ಟೆಬಿಲೈಸರ್‌ಗಳು ಮತ್ತು ಎಮಲ್ಸಿಫೈರ್‌ಗಳನ್ನು ಬಳಸಲಾಗುತ್ತದೆ. ಇವು ಹೊಟ್ಟೆಗೆ ಸೇರುವುದರಿಂದ ಜೀರ್ಣಕ್ರಿಯೆ ನಿಧಾನವಾಗಿ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಡಬಹುದು.

5. ಮಧುಮೇಹದ ಅಪಾಯ

ಅನಲಾಗ್​ ಪನೀರ್​ನಲ್ಲಿರುವ ಕೃತಕ ಪದಾರ್ಥಗಳು ಮತ್ತು ರಾಸಾಯನಿಕಗಳನ್ನು ಸಂಸ್ಕರಿಸಲು ಯಕೃತ್ತಿಗೆ (ಲಿವರ್​) ಹೆಚ್ಚು ಒತ್ತಡ ಬೀಳುತ್ತದೆ. ಅಲ್ಲದೆ, ಇದರಲ್ಲಿ ಬಳಸುವ ಸಂಸ್ಕರಿಸಿದ ಕೊಬ್ಬುಗಳು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ ಭವಿಷ್ಯದಲ್ಲಿ ಮಧುಮೇಹ ಬರುವ ಸಾಧ್ಯತೆ ಅಧಿಕವಾಗಿರುತ್ತದೆ.

ಅನಲಾಗ್​ ಪನೀರ್​ ಪತ್ತೆ ಹಚ್ಚುವ ಕ್ರಮಗಳು

ಸರ್ಕಾರವೇನೋ ಜನರ ಆರೋಗ್ಯ ದೃಷ್ಟಿಯಿಂದ ಅನಲಾಗ್​ ಪನೀರ್​ ಅನ್ನು ಬ್ಯಾನ್​ ಮಾಡಿದೆ. ಆದರೆ ಬಹುತೇಕ ಜನರಿಗೆ ಅಸಲಿ ಮತ್ತು ಅನಲಾಗ್​ ಪನೀರ್​ ನಡುವೆ ಇರುವ ವ್ಯತ್ಯಾಸ ಹಾಗೂ ಅನಲಾಗ್​ ಪನೀರ್​ ಅನ್ನು ಹೇಗೆ ಪತ್ತೆ ಮಾಡುವುದೆಂಬ ಕುರಿತು ಮಾಹಿತಿ ಕೊರೆತೆಯಿದೆ.
ಈ ಕೆಳಗಿನ ಕೆಲ ಪ್ರಯೋಗಗಳನ್ನು ಮಾಡುವ ಮೂಲಕ ನೀವು ಬಳಸುತ್ತಿರುವ ಪನೀರ್​ ಅಸಲಿಯೋ? ಅಥವಾ ಕೃತಕವೋ? ಎಂದು ತಿಳಿಯಬಹುದಾಗಿದೆ.

1. ಪ್ಯಾಕೆಟ್ ಮೇಲಿನ ಪದಾರ್ಥಗಳ ಪಟ್ಟಿ ಓದುವುದು

ನೀವು ಮಾರುಕಟ್ಟೆಯಲ್ಲಿ ಪ್ಯಾಕೆಟ್ ಪನೀರ್ ಖರೀದಿಸುವಾಗ ಅದರ ಹಿಂದೆ ನೀಡಿರುವ ವಿವರಗಳನ್ನು ಗಮನಿಸಿ. ಅದರಲ್ಲಿ ಹಾಲಿನ ಬದಲಿಗೆ ವೆಜಿಟೇಬಲ್ ಆಯಿಲ್, ಪಾಮ್ ಆಯಿಲ್, ಸ್ಟಾರ್ಚ್, ಅಥವಾ ಎಮಲ್ಸಿಫೈರ್ಸ್ (Emulsifiers) ಎಂದು ನಮೂದಿಸಿದ್ದರೆ ಅದು ಖಂಡಿತವಾಗಿಯೂ ಅನಲಾಗ್ ಪನೀರ್ ಆಗಿರುತ್ತದೆ.

2. ಮುಟ್ಟಿ ನೋಡುವುದು

ಅಸಲಿ ಪನೀರ್: ಇದು ಕೈಯಿಂದ ಒತ್ತಿದಾಗ ಮೃದುವಾಗಿ, ಸ್ವಲ್ಪ ತೇವಾಂಶದಿಂದ ಕೂಡಿರುತ್ತದೆ ಮತ್ತು ಸುಲಭವಾಗಿ ಪುಡಿಯಾಗುತ್ತದೆ.
ಅನಲಾಗ್ ಪನೀರ್: ಇದು ಅತಿ ಹೆಚ್ಚು ನುಣ್ಣಗೆ, ಗಟ್ಟಿಯಾಗಿ ರಬ್ಬರ್‌ನಂತೆ ಇರುತ್ತದೆ. ಕೈಯಿಂದ ಒತ್ತಿದರೆ ಪ್ಲಾಸ್ಟಿಕ್‌ನಂತೆ ಮರಳಿ ತನ್ನ ಆಕಾರಕ್ಕೆ ಬರುತ್ತದೆ.

3. ಬಣ್ಣ ಮತ್ತು ವಾಸನೆ

ಅಸಲಿ ಪನೀರ್: ಇದು ತಿಳಿಯಾದ ಹಾಲಿನ ಕೆನೆಯ ಬಣ್ಣ ಹೊಂದಿರುತ್ತದೆ ಮತ್ತು ಹಾಲಿನ ಪರಿಮಳ ಬೀರುತ್ತದೆ.
ಅನಲಾಗ್ ಪನೀರ್: ಇದು ಅತಿ ಹೆಚ್ಚು ಹೊಳಪಿನಿಂದ ಕೂಡಿದ ಬಿಳಿ ಬಣ್ಣದಲ್ಲಿರುತ್ತದೆ. ಇದಕ್ಕೆ ಹಾಲಿನ ವಾಸನೆ ಇರುವುದಿಲ್ಲ, ಬದಲಿಗೆ ಕೃತಕ ವಾಸನೆ ಅಥವಾ ರಾಸಾಯನಿಕ ವಾಸನೆ ಬರುತ್ತದೆ.

4. ಬಿಸಿ ಮಾಡುವ ಪರೀಕ್ಷೆ

ಬಾಣಲೆಯಲ್ಲಿ ಸ್ವಲ್ಪ ಪನೀರ್ ತುಂಡನ್ನು ಎಣ್ಣೆ ಹಾಕದೆ ಬಿಸಿ ಮಾಡಿ. ಆಗ ಪನೀರ್​ ಸ್ವಲ್ಪ ಸುಟ್ಟಂತೆ ಕಂದು ಬಣ್ಣಕ್ಕೆ ತಿರುಗಿದರೆ ಅದು ಅಸಲಿ ಪನೀರ್​. ಆದರೆ, ಕಾಯಿಸಿದಂತೆ ಎಣ್ಣೆ ಬೀಡುತ್ತಾ, ರಬ್ಬರ್​ನಂತೆ ಗಟ್ಟಿಯಾಗಿದ್ದರೆ ಅದು ಅನಲಾಗ್​ ಪನೀರ್​ ಎಂದು ಗುರುತಿಸಬಹುದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net