ಕ್ರಾಸ್‌ ವೋಟಿಂಗ್ ಅಂದ್ರೇನು? ಕರ್ನಾಟಕ MLC ಚುನಾವಣೆಯ ಬಳಿಕ ಏಕೆ ಭಾರೀ ಚರ್ಚೆ?

MLC
MLC
Published on
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ(MLC) ನಡೆದ ಚುನಾವಣೆಯ ಫಲಿತಾಂಶದ ಬಳಿಕ "ಕ್ರಾಸ್‌ ವೋಟಿಂಗ್" ಎಂಬ ಪದ ಮತ್ತೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಡಳಿತಾರೂಢ ಕಾಂಗ್ರೆಸ್‌ 5 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 2 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ ಮತದಾನದ ವೇಳೆ ಕೆಲವು ಶಾಸಕರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕದೆ ಬೇರೆ ಅಭ್ಯರ್ಥಿಗಳಿಗೆ ಬೆಂಬಲ ನೀಡಿರುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಕ್ರಾಸ್‌ ವೋಟಿಂಗ್ ಎಂದರೇನು? ಅದು ಹೇಗೆ ನಡೆಯುತ್ತದೆ? ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಕ್ರಾಸ್‌ ವೋಟಿಂಗ್ ಅಂದರೆ ಏನು?

ಯಾವುದೇ ಚುನಾವಣೆಯಲ್ಲಿ ರಾಜಕೀಯ ಪಕ್ಷ ಒಂದು ಅಭ್ಯರ್ಥಿಯನ್ನು ಅಧಿಕೃತವಾಗಿ ಬೆಂಬಲಿಸುತ್ತದೆ. ಪಕ್ಷದ ಶಾಸಕರು ಅಥವಾ ಮತದಾರರು ಆ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಸೂಚನೆ ನೀಡಲಾಗುತ್ತದೆ.ಆದರೆ ಪಕ್ಷದ ಸೂಚನೆಯನ್ನು ಮೀರಿ, ಬೇರೆ ಪಕ್ಷದ ಅಭ್ಯರ್ಥಿಗೆ ಅಥವಾ ಬೇರೆ ಅಭ್ಯರ್ಥಿಗೆ ಮತ ಹಾಕಿದರೆ ಅದನ್ನು "ಕ್ರಾಸ್‌ ವೋಟಿಂಗ್" ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ತಮ್ಮ ಪಕ್ಷದ ವಿರುದ್ಧವಾಗಿ ಮತ ಚಲಾಯಿಸುವುದೇ ಕ್ರಾಸ್‌ ವೋಟಿಂಗ್.

ವಿಧಾನ ಪರಿಷತ್ ಚುನಾವಣೆಯಲ್ಲಿ ಇದು ಹೇಗೆ ಸಾಧ್ಯ?

ವಿಧಾನ ಪರಿಷತ್ ಅಥವಾ ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡುತ್ತಾರೆ. ಇಲ್ಲಿ ಪ್ರಾಶಸ್ತ್ಯ ಆಧಾರಿತ ಮತದಾನ ಪದ್ಧತಿ ಇರುತ್ತದೆ. ಅಂದರೆ ಮತದಾರರು ಅಭ್ಯರ್ಥಿಗಳಿಗೆ ಮೊದಲ, ಎರಡನೇ ಮತ್ತು ಮೂರನೇ ಪ್ರಾಶಸ್ತ್ಯ ನೀಡಬಹುದು. ಇಂತಹ ಚುನಾವಣೆಗಳಲ್ಲಿ ಕೆಲವೊಮ್ಮೆ ಪಕ್ಷದ ಕೆಲವು ಶಾಸಕರು ರಹಸ್ಯವಾಗಿ ಅಥವಾ ಉದ್ದೇಶಪೂರ್ವಕವಾಗಿ ಬೇರೆ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ನೀಡುವ ಸಾಧ್ಯತೆ ಇರುತ್ತದೆ. ಇದರಿಂದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀಳಬಹುದು.

ಆರ್‌. ಅಶೋಕ್ ಹೇಳಿದ್ದೇನು?

ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್, ಬಿಜೆಪಿ ಮತಗಳಲ್ಲಿ ಕ್ರಾಸ್‌ ವೋಟಿಂಗ್ ನಡೆದಿರುವ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ. "ನಮ್ಮ ಕೆಲವು ಮತಗಳು ಬೇರೆ ಅಭ್ಯರ್ಥಿಗಳ ಕಡೆಗೆ ಹೋಗಿವೆ ಎಂಬ ಮಾಹಿತಿ ಇದೆ. ಯಾರು ಪಕ್ಷದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಚುನಾವಣೆಯಲ್ಲಿ ಏನಾಯಿತು?

ಬಿಜೆಪಿಯಿಂದ ಆರ್‌. ರಘು ಮತ್ತು ಲಿಂಗರಾಜು ಪಾಟೀಲ್ ಕಣದಲ್ಲಿದ್ದರು. ಆರ್‌. ರಘು ಅವರಿಗೆ 29 ಮತಗಳು ಬಂದಿದ್ದರೂ, ಅವುಗಳಲ್ಲಿ ಒಂದು ಮತ ಅಸಿಂಧುವಾಯಿತು. ಲಿಂಗರಾಜು ಪಾಟೀಲ್ ಅವರಿಗೆ 27 ಮತಗಳು ದೊರಕಿದವು. ಗೆಲುವಿಗೆ ಅಗತ್ಯವಿದ್ದ ಮತಗಳ ಸಂಖ್ಯೆ 27.63 ಆಗಿದ್ದರಿಂದ ಕೊನೆಯ ಹಂತದ ಮತ ಎಣಿಕೆ ಬಹಳ ಮಹತ್ವ ಪಡೆದಿತ್ತು. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮೊದಲ ಸುತ್ತಿನಲ್ಲೇ ಹೊರಬಿದ್ದ ಬಳಿಕ ಅವರ ಮತಗಳ ಮರುಹಂಚಿಕೆ ನಡೆಯಿತು. ಈ ವೇಳೆ ಲಿಂಗರಾಜು ಪಾಟೀಲ್ ಅವರಿಗೆ ಹೆಚ್ಚುವರಿ ಲಾಭ ದೊರೆತು ಅವರು ಗೆಲುವು ಸಾಧಿಸಿದರು.

ಕ್ರಾಸ್‌ ವೋಟಿಂಗ್ ಮಾಡಿದರೆ ಕ್ರಮ ಏನು?

ಪಕ್ಷದ ವಿಪ್ ಅಥವಾ ಅಧಿಕೃತ ಸೂಚನೆಯನ್ನು ಉಲ್ಲಂಘಿಸಿ ಮತ ಚಲಾಯಿಸಿದರೆ ಸಂಬಂಧಿತ ಪಕ್ಷ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಪಕ್ಷದಿಂದ ಅಮಾನತು, ನೋಟಿಸ್ ಅಥವಾ ಸದಸ್ಯತ್ವ ರದ್ದುಪಡಿಸುವ ಕ್ರಮಗಳನ್ನೂ ಪರಿಗಣಿಸಬಹುದು. ಆದರೆ ಅದು ಚುನಾವಣೆಯ ಸ್ವರೂಪ ಮತ್ತು ಕಾನೂನು ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ.

ಏಕೆ ಹೆಚ್ಚು ಚರ್ಚೆಯಾಗುತ್ತಿದೆ?

ಈ ಬಾರಿ ಕಾಂಗ್ರೆಸ್ ತನ್ನ ಸಂಖ್ಯಾಬಲಕ್ಕಿಂತ ಹೆಚ್ಚು ಮತಗಳನ್ನು ಪಡೆದಿರುವುದು ರಾಜಕೀಯ ವಲಯದ ಗಮನ ಸೆಳೆದಿದೆ. ಇದೇ ವೇಳೆ ಬಿಜೆಪಿ ಮತಗಳಲ್ಲಿ ಕೆಲ ವ್ಯತ್ಯಾಸ ಕಂಡುಬಂದಿರುವ ಕಾರಣ ಕ್ರಾಸ್‌ ವೋಟಿಂಗ್ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಯಾವ ಪಕ್ಷದ ಶಾಸಕರು ಪಕ್ಷದ ವಿರುದ್ಧವಾಗಿ ಮತ ಹಾಕಿದ್ದಾರೆ ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net