ವಾರದ ಸಂತೆ ಎಪಿಎಂಸಿಗೆ ಸ್ಥಳಾಂತರ

Weekly festival shifted to APMC
Weekly festival shifted to APMC
Published on
ಹುಳಿಯಾರು: ಕಳೆದ ಐದಾರು ತಿಂಗಳಿನಿಂದ ಪಟ್ಟಣದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದ್ದ ವಾರದ ಸಂತೆ ಸ್ಥಳಾಂತರ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಗಾಂಧಿಪೇಟೆಯ ಮುಖ್ಯರಸ್ತೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣಕ್ಕೆ ಸಂತೆ ಸ್ಥಳಾಂತರಿಸಲು ಎಪಿಎಂಸಿ ಆಡಳಿತ ಮಂಡಳಿ ಅಂತಿಮ ಪ್ರಕಟಣೆ ಹೊರಡಿಸಿದ್ದು, ದಶಕಗಳ ವಿವಾದಕ್ಕೆ ತೆರೆ ಬಿದ್ದಂತಾಗಿದೆ.
ಸಂತೆ ಸ್ಥಳಾಂತರದ ವಿಷಯವಾಗಿ ಕಳೆದ ಐದಾರು ತಿಂಗಳುಗಳಿಂದ ವ್ಯಾಪಾರಿಗಳು ಮತ್ತು ರೈತ ಸಂಘದವರ ನಡುವೆ ನಿರಂತರ ಜಟಾಪಟಿ ನಡೆಯುತ್ತಲೇ ಇತ್ತು. ಗಾಂಧಿಪೇಟೆಯ ಮುಖ್ಯರಸ್ತೆಯಲ್ಲಿ ಸಂತೆ ನಡೆಯುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ಶಾಲಾ ಮಕ್ಕಳಿಗೆ ಮತ್ತು ಪಶು ಆಸ್ಪತ್ರೆಗೆ ಬರುವ ಜಾನುವಾರುಗಳಿಗೆ ತೊಂದರೆಯಾಗುತ್ತಿದೆ ಹಾಗೂ ಸ್ವಚ್ಛತೆಯ ಕೊರತೆ ಎದ್ದುಕಾಣುತ್ತಿದೆ ಎಂದು ಆರೋಪಿಸಿ ರೈತ ಸಂಘ ಪ್ರತಿಭಟನೆ ನಡೆಸಿ, ಸಂತೆ ಸ್ಥಳಾಂತರಕ್ಕೆ ಪಟ್ಟು ಹಿಡಿದಿತ್ತು. ಆದರೆ, ನಮ್ಮ ತಾತನ ಕಾಲದಿಂದಲೂ ಇದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಊರಿನ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ನಿತ್ಯ ತರಕಾರಿ ವ್ಯಾಪಾರ ಮಾಡುವವರನ್ನು ಬಿಟ್ಟು ಜನಸಂದಣಿಯೇ ಇಲ್ಲದ ಸಂತೆಬೀದಿಯಿಂದ ನಮ್ಮನ್ನು ಸ್ಥಳಾಂತರಿಗೆ ಜನರೇ ಓಡಾಡದ ಮಾರುಕಟ್ಟೆಗೆ ಸ್ಥಳಾಂತರಿಸಿ ನಮ್ಮ ಹೊಟ್ಟೆ ಮೇಲೆ ಹೊಡೆಯಬೇಡಿ ಎಂಬುದು ವ್ಯಾಪಾರಿಗಳ ವಾದವಾಗಿತ್ತು. ಅಲ್ಲದೆ ನೆರಳಿಲ್ಲದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉರಿಯುವ ಬಿಸಿಲಿನಲ್ಲಿ ಹೇಗೆ ತಾನೇ ಕೂತು ವ್ಯಾಪಾರ ಮಾಡಲಿ ಎಂದು ವ್ಯಾಪಾರಿಗಳು ತಮ್ಮ ಅಳಲು ವ್ಯಕ್ತಪಡಿಸುತ್ತಿದ್ದರು.
ಶಾಸಕರ ಸಂಧಾನ ಸಭೆ: ಈ ಬಿಕ್ಕಟ್ಟು ಬಗೆಹರಿಸಲು ಶಾಸಕ ಸಿ.ಬಿ.ಸುರೇಶ್​ ಬಾಬು ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಕೂಡ ನಡೆದಿತ್ತು. ಸಭೆಯಲ್ಲಿ ತಿಪಟೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ, ಆಗಿನ ತಹಸೀಲ್ದಾರ್​ ಪುರಂದರ್​, ಮುಖ್ಯಾಧಿಕಾರಿ ಮಂಜುನಾಥ್​ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಎರಡೂ ಬಣಗಳ ಅಭಿಪ್ರಾಯ ಆಲಿಸಿದ್ದರು. ಎಪಿಎಂಸಿ ಆವರಣದಲ್ಲಿ ನೀರು, ನೆರಳು ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ ನಂತರ ಸ್ಥಳಾಂತರ ಎಂಬ ಭರವಸೆಯೊಂದಿಗೆ ಅಂತಿಮವಾಗಿ ಸ್ಥಳಾಂತರದ ನಿರ್ಧಾರಕ್ಕೆ ಬರಲಾಗಿತ್ತು.
23ರಿಂದ ಹೊಸ ವ್ಯವಸ್ಥೆ: ಇದೀಗ ಎಪಿಎಂಸಿ ಕಾರ್ಯದರ್ಶಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಏಪ್ರಿಲ್​ 23ರಿಂದ ಹುಳಿಯಾರು ಮುಖ್ಯ ಮಾರುಕಟ್ಟೆಯ ಆಡಳಿತ ಕಚೇರಿ ಹಿಂಭಾಗದ ಖಾಲಿ ಜಾಗಕ್ಕೆ ಸಂತೆಯನ್ನು ಸ್ಥಳಾಂತರಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ. ಅದರಂತೆ ಏ.23 ರ ಗುರುವಾರದಿಂದ ಹುಳಿಯಾರು ಮುಖ್ಯ ಮಾರುಕಟ್ಟೆ ಆಡಳಿತ ಕಚೇರಿಯ ಹಿಂಭಾಗದ ಖಾಲಿ ಜಾಗದಲ್ಲಿ ಸಂತೆ ಆರಂಭವಾಗಲಿದ್ದು, ವ್ಯಾಪಾರಸ್ಥರು ಸಮಿತಿ ನಿಗದಿಪಡಿಸಿದ ಜಾಗದಲ್ಲಿಯೇ ತರಕಾರಿಗಳನ್ನು ಮಾರಾಟ ಮಾಡಬೇಕು. ಮಾರುಕಟ್ಟೆ ಪ್ರಾಂಗಣದೊಳಗೆ ಕೃಷಿಯೇತರ ಇತರ ವ್ಯಾಪಾರಗಳಿಗೆ ಕಡ್ಡಾಯ ನಿಷೇಧ ಹೇರಲಾಗಿದ್ದು, ವ್ಯಾಪಾರಸ್ಥರು ನಿಯಮಾನುಸಾರ ನೆಲ ಬಾಡಿಗೆ ಹಾಗೂ ನಿಗದಿತ ಬಳಕೆದಾರರ ಶುಲ್ಕವನ್ನು ಪಾವತಿಸಿ ಸಮಿತಿಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ. \\
ಸಂತೆಯ ನಂತರ ಉಂಟಾಗುವ ತ್ಯಾಜ್ಯ ವಿಲೇವಾರಿಗೆ ಪಟ್ಟಣ ಪಂಚಾಯಿತಿಯ ನೆರವು ಪಡೆಯಲಾಗುತ್ತಿದ್ದು, ಸಾರ್ವಜನಿಕರು ಮತ್ತು ರೈತ ಬಾಂಧವರು ಈ ಹೊಸ ವ್ಯವಸ್ಥೆಗೆ ಸ್ಪಂದಿಸಬೇಕೆಂದು ಕಾರ್ಯದರ್ಶಿಗಳು ವಿನಂತಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net