ಚೇಳೂರು: ತಾಲೂಕಿನಾದ್ಯಂತ ಅಂತರ್ಜಲ ಕುಸಿತ ಮತ್ತು ತೀವ್ರ ನೀರಿನ ಅಭಾವ ಎದುರಾಗುತ್ತಿರುವ ಸಂದರ್ಭದಲ್ಲಿ, ಜಿಪಂ ಸಿಇಒ ಡಾ.ವೈ.ನವೀನ್ ಭಟ್ ಕರೆಗೆ ಪೂರ್ವಜರು ನಿರ್ಮಿಸಿದ ಐತಿಹಾಸಿಕ ಜಲಮೂಲಗಳನ್ನು ರಕ್ಷಿಸಲು ಗ್ರಾಪಂ ಸಿಬ್ಬಂದಿ ಶ್ರಮದಾನದ ಮೂಲಕ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಿಲ್ಲಾದ್ಯಂತ ಮಾ.23 ರಿಂದ ಏ.3 ರವರೆಗೆ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ತಾಲೂಕಿನ ಚಾಕವೇಲು ಗ್ರಾಪಂ ವ್ಯಾಪ್ತಿಯ ದಿಗವಪ್ಯಾಯಲವಾರಿಪಲ್ಲಿಯ ಕಲ್ಯಾಣಿಯನ್ನು ಸೋಮವಾರ ಸ್ವಚ್ಛಗೊಳಿಸುವ ಮೂಲಕ ಜಲ ರಕ್ಷಣೆಯ ಸಂದೇಶ ಸಾರಿದರು.
ನೀರು ಪ್ರತಿ ಜೀವ ಸಂಕುಲಕ್ಕೂ ಆಧಾರ. ಸಿಇಒ ಡಾ.ನವೀನ್ ಭಟ್ ನೀಡಿದ್ದ ಸೂಚನೆಯನ್ನು ಚೇಳೂರು ತಾಲೂಕಿನ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅನುಷ್ಠಾನಕ್ಕೆ ತಂದಿದ್ದಾರೆ.
"
ಪೂರ್ವಜರು ನೀಡಿರುವ ಜಲಮೂಲಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮಳೆಗಾಲ ಆರಂಭವಾಗುವ ಮೊದಲೇ ನೀರು ಸಂಗ್ರಹಣೆಗೆ ಸಜ್ಜುಗೊಳಿಸುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.
> ಶ್ರೀಕಾಂತ್, ಪಿಡಿಒ ಚಾಕವೇಲು ಗ್ರಾಪಂ
ಅಧಿಕಾರಿಗಳ ಉತ್ಸಾಹ ಕಂಡ ಗ್ರಾಮಸ್ಥರು ಶ್ರಮದಾನದಲ್ಲಿ ಕೈಜೋಡಿಸಿದರು. ಕಲ್ಯಾಣಿಯ ಸುತ್ತಮುತ್ತಲ ಪೊದೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ, ದಶಕಗಳಿಂದ ಪಾಳುಬಿದ್ದಿದ್ದ ಕಲ್ಯಾಣಿ ಕಳೆ ಪಡೆದಿದೆ.
ಕಲ್ಯಾಣಿಯ ಸೂಕ್ತ ನಿರ್ವಹಣೆಯಿಲ್ಲದೆ ಗಿಡ&ಗಂಟಿ, ಹೂಳಿನಿಂದ ತುಂಬಿ ಹೋಗಿತ್ತು. ಸೋಮವಾರ ತಾಲೂಕಿನ ವಿವಿಧ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡರು. ಆದೇಶ ನೀಡುವಿಕೆಗೆ ಸೀಮಿತವಾಗದ ಅಧಿಕಾರಿಗಳು, ಖುದ್ದಾಗಿ ಹಾರೆ-, ಬುಟ್ಟಿ ಹಿಡಿದು ತ್ಯಾಜ್ಯವನ್ನು ಎತ್ತಿದ್ದು ಸ್ಥಳಿಯರ ಮೆಚ್ಚುಗೆಗೆ ಪಾತ್ರವಾಯಿತು.