ಬೇಲೂರು ತಾಲೂಕಿನ ಗೆಂಡೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೋಟರಿ ಕ್ಲಬ್‌ನಿಂದ ಕೊಡುಗೆ ನೀಡಿದ ನೂತನ ತಂತ್ರಜ್ಞಾನದ ವಾಟರ್ ಫಿಲ್ಟರ್ ಉದ್ಘಾಟಿಸಿದ ಗಣ್ಯರು.
Published on:
Copied
Follow Us
ಬೇಲೂರು: ಗ್ರಾಮೀಣ ಭಾಗದ ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬೇಲೂರು ರೋಟರಿ ಸಂಸ್ಥೆಯಿಂದ ಅತ್ಯಾಧುನಿಕ ತಂತ್ರಜ್ಞಾನದ ಬಿಸಿ ಹಾಗೂ ತಣ್ಣೀರಿನ ಕುಡಿಯುವ ನೀರಿನ ಹೈಟೆಕ್ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರನ್ನು ತಾಲೂಕಿನ ಗೆಂಡೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬುಧವಾರ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಸಂಸ್ಥೆಯ ಡಿ.ಎಸ್. ರವಿ, ದಿ.ಗಂಗಯ್ಯ ಹೆಗಡೆ ಸ್ಮರಣಾರ್ಥ ಅವರ ಪುತ್ರ ದಿ.ಸಿದ್ಧಾರ್ಥ್ ಹೆಗಡೆ ಅವರು ನೀಡಿದ್ದ ದತ್ತಿನಿಧಿಯ ವಾರ್ಷಿಕ ಬಡ್ಡಿಯಿಂದ ಪ್ರತಿ ವರ್ಷ ಗ್ರಾಮೀಣ ಭಾಗದ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ರೋಟರಿ ಸಂಸ್ಥೆ ಮಾಡುತ್ತಿದೆ. ಈ ಬಾರಿ ರೋಟರಿ ಜಿಲ್ಲಾ ಅನುದಾನ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ 64 ಸಾವಿರ ರೂ. ವೆಚ್ಚದಲ್ಲಿ ಹೈಟೆಕ್ ವಾಟರ್ ಫಿಲ್ಟರ್ ಕೊಡಲಾಗಿದೆ. ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶಗಳಲ್ಲಿ ಮಕ್ಕಳಲ್ಲಿ ಕೆಮ್ಮು, ಶೀತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಶಾಲಾ ಮಕ್ಕಳಿಗೆ ಶುದ್ಧವಾದ ಬಿಸಿ ನೀರು ಲಭ್ಯವಾಗಬೇಕೆಂಬ ಉದ್ದೇಶದಿಂದ ಅತ್ಯಾಧುನಿಕ ತಂತ್ರಜ್ಞಾನದ ವಾಟರ್ ಫಿಲ್ಟರ್ ಕೊಡಲಾಗಿದ್ದು, ಇದನ್ನು ವಿದ್ಯಾರ್ಥಿಗಳು, ಸಿಬ್ಬಂದಿ ಸದೂಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಗಣೇಶ್ ಮಾತನಾಡಿ, ವಿದ್ಯಾರ್ಥಿಗಳು, ಸಿಬ್ಬಂದಿ ಈ ವಾಟರ್ ಫಿಲ್ಟರ್‌ನ ಸಮರ್ಪಕವಾಗಿ ಬಳಸಿಕೊಂಡು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ರಂಗನಾಥ್ ಮಾತನಾಡಿ, ದಿ. ಗಂಗಯ್ಯ ಹೆಗಡೆಯವರ ದತ್ತಿ ನಿಧಿಯಿಂದ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವುದು ಶ್ಲಾಘನೀಯವಾಗಿದೆ. ಮನುಷ್ಯ ಬದುಕಿರುವಾಗ ಮಾಡುವ ಜನಪರ ಕಾರ್ಯಗಳು ನಿಧನರಾದ ನಂತರವೂ ಅವರ ಹೆಸರನ್ನು ಶಾಶ್ವತವಾಗಿ ಉಳಿಸುತ್ತವೆ ಎನ್ನುವುದಕ್ಕೆ ಗಂಗಯ್ಯ ಹೆಗಡೆ ಹಾಗೂ ಸಿದ್ಧಾರ್ಥ್ ಹೆಗಡೆ ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು.
ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸುಷ್ಮಾ, ರೋಟರಿ ಕ್ಲಬ್ ಕಾರ್ಯದರ್ಶಿ ಎಚ್.ಕೆ.ರಮೇಶ್, ವೈ.ಡಿ.ಲೋಕೇಶ್, ಉಪನ್ಯಾಸಕರಾದ ಪೂರ್ಣಚಂದ್ರ, ಪ್ರದೀಪ್, ದೀಕ್ಷಿತ್, ಪ್ರಾಧ್ಯಾಪಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.