ಸುಧೀರ್ಘ ಸೇವೆ, ದುರಂತ ಸಾವು: ಹುಣಸೂರು ತಾಲೂಕಿನ ಕಚುವನಹಳ್ಳಿಯ ಸಣ್ಣಹೈದ ತನ್ನ 15 ನೇ ವರ್ಷದಿಂದ (1985ರಲ್ಲಿ) ಅರಣ್ಯ ಇಲಾಖೆಯಲ್ಲಿ ವಾಚರ್, ಆನೆ ಮಾವುತನಾಗಿ ಕೆಲಸ ಮಾಡುತ್ತಿದ್ದರು. 2009ರಲ್ಲಿ ಅರಣ್ಯ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ನ್ಯಾಯಾಧೀಶರು ಸೇರಿದಂತೆ ಗಣ್ಯರು ಭೇಟಿ ನೀಡುತ್ತಿದ್ದ ಬಂಡೀಪುರ ವಲಯದ ಮರಳಳ್ಳ ಕ್ಯಾಂಪ್‌ನಲ್ಲಿ ವಾಚರ್ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅರಣ್ಯ ಇಲಾಖೆ ನಡೆಸುತ್ತಿದ್ದ ಫ್ರೆಂಡ್ಸ್ ಆಫ್ ಬಂಡೀಪುರ ಎಂಬ ಕಾರ್ಯಕ್ರಮದಲ್ಲಿ ಪರಿಸರ ಶಿಕ್ಷಣ ಪಡೆಯಲು ಬರುತ್ತಿದ್ದ ಶಿಬಿರಾರ್ಥಿಗಳ ನಡೆಸುತ್ತಿದ್ದ ಸಂವಾದದಲ್ಲಿ ವನ್ಯಜೀವಿಗಳು ಎದುರಾದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಆನೆಯನ್ನು ಕಂಡರೆ ನಿಲ್ಲಬಾರದು, ಹುಲಿಯನ್ನು ಕಂಡರೆ ಓಡಬಾರದು ಎಂದು ತನ್ನ ಸುಧೀರ್ಘ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ಸತತ 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ ಅರಣ್ಯ ಇಲಾಖೆಯಲ್ಲಿ ಕೆಲಸ ಕಾಯಂ ಆಗದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದರು.