ಕೆಎಂಎಫ್ ಮೇಲೂ ಯುದ್ಧ ಕಾರ್ಮೋಡ

ಕೆಎಂಎಫ್
ಕೆಎಂಎಫ್
Published on
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಯುದ್ಧದ ಪರಿಣಾಮ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ(ಕೆಎಂಎಫ್) ಉತ್ಪನ್ನಗಳ ತಯಾರಿಕೆ ಮತ್ತು ವ್ಯಾಪಾರದ ಮೇಲೂ ದುಷ್ಪರಿಣಾಮ ಬೀರಲಿದೆ!
‘ವಿಜಯವಾಣಿ’ ಕಚೇರಿಯಲ್ಲಿ ನಡೆಸಿದ ಸಂವಾದದಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, ಪಶ್ಚಿಮಏಷ್ಯಾದಲ್ಲಿನ ಯುದ್ಧದ ಪರಿಣಾಮದಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟರು. ಹಾಲು, ಮೊಸಲು, ತುಪ್ಪ, ಮಜ್ಜಿಗೆ ಪ್ಯಾಕ್ ಮಾಡಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಯುದ್ಧ ಪರಿಸ್ಥಿತಿ ಹೀಗೆ ಮುಂದುವರಿದರೇ ಕಚ್ಚಾ ಪ್ಲಾಸ್ಟಿಕ್ ಸಿಗದೆ ಪ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಮನೆ ಮನೆಗೆ ಹಾಲು ಸರಬರಾಜು ಮಾಡಲು ತೊಡಕಾಗಲಿದೆ ಎಂದರು.
ಪ್ರಸ್ತುತ ಕೆಎಂಎಫ್ ಬಳಿ 25 ದಿನಗಳಿಗೆ ಆಗುವಷ್ಟು ಪ್ಯಾಕಿಂಗ್ ಕವರ್ ಇದೆ. ಆಗಂತ ಪ್ಲಾಸ್ಟಿಕ್ ಸಿಗದೇ ಇರುವುದಿಲ್ಲ. ಏಕೆಂದರೆ, ಯುದ್ಧದ ನಡುವೆಯೂ ಇಂಧನ ಮತ್ತು ಅನಿಲ ಭಾರತಕ್ಕೆ ಪೂರೈಕೆ ಆಗುತ್ತಿದೆ. ಒಂದಿಷ್ಟು ಸಮಸ್ಯೆ ಬಿಟ್ಟರೆ ಉಳಿದಂತೆ ದೊಡ್ಡ ಪ್ರಮಾಣದಲ್ಲಿ ಯಾವುದೇ ತೊಂದರೆ ಇಲ್ಲ. ಅದೇ ರೀತಿಯಾಗಿ ಪ್ಲಾಸ್ಟಿಕ್ ಕಚ್ಚಾ ವಸ್ತುಗಳ ಪೂರೈಕೆ ಸಹ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಕವರ್ ಬರುವುದಕ್ಕೂ ಮೊದಲು ಟ್ಯಾಂಕರ್ ಮೂಲಕ ಹಾಲನ್ನು ನಿಗದಿತ ಪ್ರದೇಶಕ್ಕೆ ಕಳುಹಿಸಿ, ಅಲ್ಲಿಂದ ಮನೆ ಮನೆಗೆ ಹಾಲು ಪೂರೈಕೆ ಮಾಡಲಾಗುತ್ತಿತ್ತು. ಅದೇ ಮಾದರಿಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲು ಅವಕಾಶಗಳೂ ಇವೆ. ಅಂತಹ ಪರಿಸ್ಥಿತಿ ಎದುರಾಗಬಾರದು ಎಂಬುದು ಎಲ್ಲರ ಆಶಯವಾಗಿದೆ. ಇದಲ್ಲದೆ, ಅರಬ್ ದೇಶಗಳಿಗೆ ಹಾಲಿನ ಉತ್ಪನ್ನಗಳು ರ್ತು ಆಗುತ್ತಿದ್ದು, ಇದರ ಸರಬರಾಜು ಮೇಲೂ ಪರಿಣಾಮ ಬೀರಲಿದೆ. ಆದರಿಂದ ಪರಿಸ್ಥಿತಿ ತಿಳಿ ಆಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಬಯೋಗ್ರಿಡ್ ಪ್ಯಾಕ್

ಹಾಲಿನ ಉತ್ಪನ್ನಗಳ ಪ್ಯಾಕ್‌ಗಳಿಗೆ ಪ್ಲಾಸ್ಟಿಕ್ ಬದಲಿಗೆ ಬಯೋಗ್ರಿಡ್ ಬಳಸಲು ಪ್ರಯೋಗಗಳು ನಡೆಯುತ್ತಿವೆ. ಕನಕಪುರದಲ್ಲಿ ಈ ಪ್ರಯೋಗ ನಡೆಯುತ್ತಿದೆ. ಅದರ ಸಾಧಕ ವರದಿ ಬಂದ ಮೇಲೆ ಕ್ರಮ ವಹಿಸಲಾಗುತ್ತದೆ. ಬಯೋಗ್ರಿಡ್ ಭೂಮಿಯಲ್ಲಿ ಮುಚ್ಚಿದಾಗ 6 ತಿಂಗಳ ಒಳಗಾಗಿ ಕರಗಬೇಕು. ಆದರಿಂದ ಇದು ಪ್ರಯೋಗ ಹಂತದಲ್ಲಿ ಇದ್ದು, ಸಾಧ್ಯತಾ ವರದಿ ಬಂದ ಮೇಲೆ ಸರ್ಕಾರದ ಒಪ್ಪಿಗೆ ಪಡೆದು ಮುಂದಿನ ಹಂತಕ್ಕೆ ಹೋಗಲಾಗುತ್ತದೆ ಎಂದು ಎಂ.ಡಿ. ಬಿ. ಶಿವಸ್ವಾಮಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net