ಜಾತಿ ಆದಾಯ ಪತ್ರ ವಿತರಣೆ ವಿಳಂಬ ಖಂಡಿಸಿ ರೈತ ಸಂಘದ ಹಸಿರು ಸೇನೆಯ ಅಧ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ ಹಾಗೂ ಪದಾಧಿಕಾರಿಗಳು ತಹಸೀಲ್ದಾರ್ ಎಂ.ಅನಿಲ್ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಗೌರವಾಧ್ಯಕ್ಷ ರಾಜಣ್ಣ, ಪದಾಧಿಕಾರಿಗಳಾದ ಡಾ.ಕಿರಣ್, ಗೋಪಿನಾಥ್, ಸೆಲ್ವಕುಮಾರ್, ಕುಮಾರ್, ಡಾ.ರಾಜು, ನೆಹರೂ ಇತರರು ಇದ್ದರು.
ದೇವನಹಳ್ಳಿ : ತಾಲೂಕು ಕಚೇರಿಯಲ್ಲಿ ಜಾತಿ ಆದಾಯ ಪ್ರಮಾಣಪತ್ರ ಪಡೆಯಲು ತಿಂಗಳುಗಟ್ಟಲೆ ಅಲೆದಾಡುವಂತಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಜಾತಿ ಆದಾಯ ಪ್ರಮಾಣಪತ್ರಕ್ಕಾಗಿ ಜನ ಅರ್ಜಿ ಹಾಕಿ ತಿಂಗಳಗಟ್ಟಲೇ ಅಲೆದು ಸುಸ್ತಾದರೂ ಸಿಗುತ್ತಿಲ್ಲ. ಈ ಬಗ್ಗೆ ತಹಸೀಲ್ದಾರರನ್ನು ಪ್ರಶ್ನಿಸಿದರೆ ನೂರು ಅರ್ಜಿಗಳು ಬಂದ ಬಳಿಕ ಎಲ್ಲವನ್ನು ಒಮ್ಮೆಲೆ ಇತ್ಯರ್ಥಪಡಿಸಿ ವಿತರಣೆ ಮಾಡಿ ಎಂದು ಸರ್ಕಾರದಿಂದ ಗೈಡ್ಲೈನ್ಸ್ ಬಂದಿದೆ ಎಂಬ ಪ್ರತಿಕ್ರಿಯೆ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಜಾತಿ ಆದಾಯ ಪ್ರಮಾಣ ಪತ್ರ ಪಡೆಯುವುದು ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ತಹಸೀಲ್ದಾರ್ಗೆ ಮನವಿ: ತಾಲೂಕಿನಲ್ಲಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಎದುರಾಗಿರುವ ಸಮಸ್ಯೆಗಳ ಬಗ್ಗೆ ತಿಳಿದ ಕರ್ನಾಟಕ ರೈತ ಸಂಘದ ಹಸಿರುಸೇನೆ ಅಧ್ಯಕ್ಷ ವಿನೋದ್ಕುಮಾರ್ ಗೌಡ ಹಾಗೂ ಪದಾಧಿಕಾರಿಗಳು ತಾಲೂಕು ಕಚೇರಿಗೆ ಭೇಟಿ ನೀಡಿ ತಹಸೀಲ್ದಾರ್ ಎಂ.ಅನಿಲ್ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದಾರೆ. ತಕ್ಷಣವೇ ಸಮಸ್ಯೆ ಸರಿಪಡಿಸಿ ಅಂದಿನ ಅರ್ಜಿಗಳನ್ನು ಅಂದೇ ಇತ್ಯರ್ಥಪಡಿಸಿ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇಂದಿನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ, ವಿದ್ಯಾರ್ಥಿವೇತನ, ಸರ್ಕಾರದ ಸೌಲಭ್ಯ, ಕೃಷಿಕರಿಗೆ ಗ್ಯಾರಂಟಿಗಳ ಮರು ದಾಖಲಾತಿ ಸೇರಿ ಹತ್ತಾರು ಕೆಲಸಗಳಿಗೆ ಜಾತಿ, ಆದಾಯ ಪತ್ರ ಬೇಕು. ಕಂದಾಯಾಧಿಕಾರಿಗಳನ್ನು ಕೇಳಿದರೆ ಇದು ಸರ್ಕಾರದ ಆದೇಶ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಇದೇ ಸ್ಥಿತಿ ಇದೆ. ನಾವೇನು ಮಾಡಲಾಗದು ಎನ್ನುತ್ತಾರೆ. ಸರ್ಕಾರ ಕೂಡಲೇ ಈ ಲೋಪ ಸರಿಪಡಿಸದೇ ಹೋದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ.
— ಬಿ.ಕೆ.ವಿನೋದ್ಕುಮಾರ್ಗೌಡ, ಕರ್ನಾಟಕ ರೈತ ಸಂಘದ ಹಸಿರುಸೇನೆ ಅಧ್ಯಕ್ಷ