ದಾಬಸ್ಪೇಟೆ : ಕಾಲೇಜು ಸೇರಿದಾಕ್ಷಣ ವಿದ್ಯಾರ್ಥಿಗಳಲ್ಲಿ ಏನೋ ಸಾಧನೆ ಮಾಡಿದ್ದೇನೆ... ಇಲ್ಲಿ ಎಲ್ಲವೂ ನನ್ನದೇ ನಡೆಯಬೇಕು ಎಂಭ ಭ್ರಮೆ ಆವರಿಸುತ್ತದೆ. ಜತೆಗೆ ಇತರ ಆಕರ್ಷಣೆಗೆ ಒಳಗಾಗುವುದು ಸಹಜ. ಆದರೆ ಯಾರೂ ಚಾಂಚಲ್ಯಕ್ಕೆ ಒಳಗಾಗದೇ ಉತ್ತಮ ದಾರಿಯಲ್ಲಿ ಸಾಗಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ಉಮಾರಾಣಿ ಕಿವಿಮಾತು ಹೇಳಿದರು.
ಸೋಂಪುರ ಹೋಬಳಿ ಶಿವಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಹದಿಹರೆಯದ ವಯಸ್ಸಿನಲ್ಲಿ ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಅಷ್ಟಾಗಿ ಇರುವುದಿಲ್ಲ. ಮನಸ್ಸು ಚಂಚಲವಾಗುತ್ತದೆ. ಆದರೆ ತಪ್ಪು ನಿರ್ಧಾರ ಮಾಡಬೇಡಿ. ಪೋಕ್ಸೋ ಕಾಯ್ದೆ ಕುರಿತು ಎಚ್ಚರವಹಿಸಬೇಕು. ಸಮಯ ಹಾಳು ಮಾಡಿಕೊಳ್ಳದೇ ಚೆನ್ನಾಗಿ ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು.
ಹಿರಿಯ ಅಧಿಕಾರಿ ಲೋಕೇಶ್ ಮಾತನಾಡಿ, ವಿದ್ಯಾರ್ಥಿಗಳು ದೃಢ ಸಂಕಲ್ಪ, ಶಿಸ್ತು, ನಿರಂತರ ಪ್ರಯತ್ನವನ್ನು ಸದಾ ನೆನಪಿಟ್ಟುಕೊಳ್ಳಬೇಕು. ಗುರಿ ಜ್ಞಾನದ ಕಡೆ ಇರಲಿ. ಶಿಕ್ಷಣವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ವಿದ್ಯೆಯನ್ನು ಹಂಚಿದಷ್ಟು ಹೆಚ್ಚಾಗುತ್ತದೆ ಎಂದರು.
ದಾಬಸ್ಪೇಟೆ ಠಾಣೆ ಇನ್ಸ್ಪೆಕ್ಟರ್ ಧಮೇಂರ್ದ್ರ ಮಾತನಾಡಿ, ಕನಸು ಕಾಣಬೇಕು. ನಿರಂತರ ಪ್ರಯತ್ನದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.