ವಿವೇಕರ ಆದರ್ಶ ಯುವಜನರಿಗೆ ಸ್ಫೂರ್ತಿ

ಕುಶಾಲನಗರ ತಾಲೂಕಿನ ಕೂಡುಮಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವಿವೇಕಾನಮದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಟಿ.ಜಿ. ಪ್ರೇಮಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕುಶಾಲನಗರ ತಾಲೂಕಿನ ಕೂಡುಮಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವಿವೇಕಾನಮದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಟಿ.ಜಿ. ಪ್ರೇಮಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
Published on
ಕುಶಾಲನಗರ: ತಾಲೂಕಿನ ಕೂಡುಮಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಎನ್ನೆಸ್ಸೆಸ್ ಘಟಕ, ಸಮಾಜ ಸಂಘ, ವಿದ್ಯಾರ್ಥಿ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹಾಗೂ ಜೆಸಿಐ ಸಂಸ್ಥೆ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲಾ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್, ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನವನ್ನು ಪಡೆದು ವಿಶ್ವದ ಗಮನ ಸೆಳೆದ ಆಧ್ಯಾತ್ಮಿಕ ಚಿಂತಕರೂ ಆದ ಯುವ ಜನಾಂಗದ ಕಣ್ಮಣಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ದೇಶದ ಯುವಕರ ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯುತ್ತಮ ಮಾರ್ಗದರ್ಶನ ಒದಗಿಸಲಿವೆ ಎಂದರು.

ವಿದ್ಯಾರ್ಥಿಗಳು ವಿಶ್ವದ ಆಧ್ಯಾತ್ಮಿಕ ಗುರು ಎನಿಸಿರುವ ಸ್ವಾಮಿ ವಿವೇಕಾನಂದರ ಉದಾತ್ತ ವ್ಯಕ್ತಿತ್ವ, ಜೀವನ ಕ್ರಮ, ದೂರದೃಷ್ಟಿ ಹಾಗೂ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರದ ಸಮಗ್ರತೆ ಹಾಗೂ ಏಕತೆ ಎತ್ತಿ ಹಿಡಿಯಬೇಕು ಎಂದರು.

ಸಮಾಜ ವಿಜ್ಞಾನ ಶಿಕ್ಷಕಿ ಎಸ್.ಎಂ.ಗೀತಾ ಮಾತನಾಡಿ, ಸ್ವಾಮಿ ವಿವೇಕಾನಂದರ ‘ಏಳಿ.. ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಸಂದೇಶ ಸಾರ್ವಕಾಲಿಕವಾಗಿದೆ. ಈ ಹಿನ್ನೆಲೆಯಲ್ಲಿ ವಿವೇಕಾನಂದರು ಎಂದೆಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರು ಹಾಗೂ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಎನ್. ಸುಜಾತಾ, ಬಿ.ಡಿ.ರಮ್ಯಾ, ಅನ್ಸಿಲಾ ರೇಖಾ, ಕೆ.ಟಿ. ಸೌಮ್ಯಾ, ಕಚೇರಿ ಸಿಬ್ಬಂದಿ ಎಂ.ಉಷಾ ಇದ್ದರು. ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿವೇಕಾನಂದರ ಸಂದೇಶದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net