ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವೃಂದದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸೇವಾವಧಿ ಹಿರಿತನ ಆಧಾರದ ಮೇರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ, ಕನಿಷ್ಠ ಸೇವಾ ಅವಧಿ ಪೂರೈಸಿ ವರ್ಗಾವಣೆಗೆ ಅರ್ಹರಾದ ನೌಕರರ ಆದ್ಯತಾ ಪಟ್ಟಿ ತಯಾರಿಸಲಾಗಿತ್ತು. ಬಳಿಕ, ಕೌನ್ಸೆಲಿಂಗ್ ಮೂಲಕ ಅರ್ಹ ನೌಕರರನ್ನು ವರ್ಗಾವಣೆ ಮಾಡಬೇಕಿತ್ತು. ಆದರೆ, ಅಂತಿಮ ಆದ್ಯತಾ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಅಧಿಕಾರಿಗಳು ಮತ್ತು ನಿವೃತ್ತಿ ಅಂಚಿನಲ್ಲಿರುವ ನೌಕರರನ್ನು ವರ್ಗಾವಣೆಗೊಳಿಸಲಾಗಿದೆ. ಅಲ್ಲದೆ, ಇಲಾಖೆಯ ಒಟ್ಟು ಕಾರ್ಯಬಲದ ಶೇ.15 ಮಿತಿ ಮೀರಿ ನೌಕರನ್ನು ವರ್ಗಾವಣೆ ಮಾಡಲಾಗಿದೆ. ಅರ್ಹ ನೌಕರರನ್ನು ವರ್ಗಾವಣೆ ಪಟ್ಟಿಯಿಂದ ಕೈಬಿಟ್ಟಿದ್ದು, ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.