ಕಸದ ಲಾರಿಗಳ ಮೇಲೆ ಗ್ರಾಮಸ್ಥರ ಹದ್ದಿನ ಕಣ್ಣು / DODDABALLAPUR

ದೊಡ್ಡಬಳ್ಳಾಪುರದ ಚಿಕ್ಕಮಂಕಳಾದ ಬಳಿ ಕಸದ ಲಾರಿಗಳನ್ನು ಸ್ಥಳಿಯ ಗ್ರಾಮಸ್ಥರು ಪರಿಶೀಲಿಸುತ್ತಿರುವುದು.
ದೊಡ್ಡಬಳ್ಳಾಪುರದ ಚಿಕ್ಕಮಂಕಳಾದ ಬಳಿ ಕಸದ ಲಾರಿಗಳನ್ನು ಸ್ಥಳಿಯ ಗ್ರಾಮಸ್ಥರು ಪರಿಶೀಲಿಸುತ್ತಿರುವುದು.
Published on
ದೊಡ್ಡಬಳ್ಳಾಪುರ : ಎಂಎಸ್​ಜಿಪಿ ಘಟಕಕ್ಕೆ ಹೆಚ್ಚುವರಿ ಕಸದ ಲಾರಿಗಳು ಬುಧವಾರ ಬರದಂತೆ ಹದ್ದಿನಕಣ್ಣು ಇಟ್ಟಿದ್ದರು. ಬೆಂಗಳೂರಿನ ಕಸವನ್ನು ವಿಲೇವಾರಿ ಮಾಡಲು ಮಹದೇವಪುರ ಮತ್ತು ಮೀಟಗಾನಹಳ್ಳಿಯ ವಿಲೇವಾರಿ ಘಟಕಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಕಸದ ಲಾರಿಗಳು ದೊಡ್ಡಬಳ್ಳಾಪುರದ ಎಂಎಸ್​ಜಿಪಿ ಘಟಕದತ್ತ ಮುಖಮಾಡಿದ್ದವು. ಆದರೆ, ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚುವರಿಯಾಗಿ ಬಂದ ಲಾರಿಗಳನ್ನು ತಡೆದಿದ್ದಾರೆ. ಗ್ರಾಮಸ್ಥರಿಗೆ ಶಾಸಕ ಧೀರಜ್​ ಮುನಿರಾಜು ಸಾಥ್​ ನೀಡಿ ಕಸದ ಲಾರಿಗಳನ್ನು ವಾಪಸ್​ ಕಳಿಸುವಲ್ಲಿ ಯಶಸ್ವಿಯಾಗಿದ್ದರು. ಬುಧವಾರವೂ ನಿಗದಿತ 70 ಲಾರಿಗಳನ್ನು ಬಿಟ್ಟು ಹೆಚ್ಚುವರಿ ಲಾರಿಗಳು ಬರುವ ಆತಂಕದಿಂದ ಇಲ್ಲಿನ ಗ್ರಾಮಸ್ಥರು ಇಡೀ ದಿನ ಎಂಎಸ್​ಜಿಪಿ ಘಟಕದ ಮೇಲೆ ಹದ್ದಿನ ಕಣ್ಣಿಟಿದ್ದರು.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ ಪರಿಶೀಲನೆ: ಎಂಎಸ್​ಜಿಪಿ ಘಟಕದ ಬಳಿಯ ಚಿಕ್ಕಮಂಕಳಾಲದ ಬಳಿ ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಯಿತು. ಎಂಎಸ್​ಜಿಪಿ ಘಟಕದ ಲಾರಿಗಳ ದಾಖಲಾತಿ ಪರಿಶೀಲಿಸಿ ಒಳಗೆ ಬಿಡಲಾಯಿತು. ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ದೊಡ್ಡಬೆಳವಂಗಲ ಹೋಬಳಿ ಇನ್​ಸ್ಪೆಕ್ಟರ್​ ಕಲ್ಲಪ್ಪ ಭೇಟಿ ನೀಡಿ ಪರಿಶೀಲಿಸಿದರು. ಎಂಎಸ್​ಜಿಪಿ ಘಟಕದ ಎಂ.ಡಿ. ಪ್ರವಿಣ್​ ಗೌಡಗೆ ಕರೆಮಾಡಿದ ಡಿವೈಎಸ್ಪಿ ಲಾರಿಗಳ ಸಂಖ್ಯೆ, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಹೆಚ್ಚುವರಿ ಲಾರಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಎಎಸ್​ಐ ನೇತೃತ್ವದಲ್ಲಿ ಬಿಗಿ ಭದ್ರತೆಗೆ ಸೂಚಿಸಿದರು.
ಡಿಸಿಎಂಗೆ ಧೀರಜ್​ ತಿರುಗೇಟು : ಅನುದಾನ ನೀಡಿಲ್ಲವೆಂದು ಹೇಳಿ ಕಸದ ಲಾರಿಗಳಿಗೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿರುವ ಡಿಸಿಎಂ ಡಿ.ಕೆ. ಶಿವಕುಮಾರ್​ಗೆ ಶಾಸಕ ಧೀರಜ್​ ಮುನಿರಾಜು ಸವಾಲು ಹಾಕಿದ್ದಾರೆ. ದೊಡ್ಡಬಳ್ಳಾಪುರಕ್ಕೆ ಕಸದ ಘಟಕದ ಪರಿಣಾಮವಾಗಿ 10 ಕೋಟಿ ರೂಪಾಯಿ ಕಸದ ಅನುದಾನ ಮೀಸಲಿರಿಸಿದ್ದಾರೆ. ಆದರೆ, ನಾನು ಡಿ. ಕೆ. ಶಿವಕುಮಾರ್​ ಹೇಳಿದಂತೆ ಅನುದಾನಕ್ಕೆ ಬೇಡಿಕೆ ಇಟ್ಟಿಲ್ಲ. ಕೇಳಿಲ್ಲ. ಮುಂದೆಯೂ ಕೇಳಲ್ಲ. ಇದರ ಬಗ್ಗೆ ನನ್ನ ಮನವಿ ಪತ್ರವಾಗಲಿ, ದೂರವಾಣಿ ಕರೆ ದಾಖಲೆಗಳಾಗಲಿ ಇದ್ದರೆ ಬಿಡುಗಡೆ ಮಾಡಲಿ. ಒಟ್ಟಾರೆ ನನಗೆ ಆ ಅನುದಾನವೂ ಬೇಡ. ಕಸದ ಘಟಕವೂ ಬೇಡ ಎಂದಿದ್ದಾರೆ.

ಕಸದ ಘಟಕದಿಂದಾಗಿ ಈ ಭಾಗದ ಎರಡು ಗ್ರಾಪಂ ಪ್ರದೇಶದಲ್ಲಿ ನೆಲ, ಜಲ, ಗಾಳಿ ಸಂಪೂರ್ಣ ಕಲುಷಿತಗೊಂಡಿದೆ. ಈ ಭಾಗದವರು ರೋಗ ರುಜಿನಗಳಿಗೆ ತುತ್ತಾಗಿದ್ದಾರೆ. ಜಾನುವಾರು ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆಲ್ಲ ಯಾರು ಹೊಣೆ? ಜನರು ಘಟಕವನ್ನು ಸ್ಥಗಿತಗೊಳಿಸಲು ಅಧಿಕಾರ ನೀಡಿದ್ದಾರೆ. ಜನರ ಪರವಾಗಿ ನಿಲ್ಲುತ್ತೇನೆ. ಕಸವನ್ನು ಸುರಿಯುವುದಿದ್ದರೆ ಆರ್​.ಆಶೋಕ್​, ಬಿವೈ.ವಿಜಯೇಂದ್ರ, ಬಿಜೆಪಿ ಕಚೇರಿ ಮುಂದೆ, ಏಕೆ ನನ್ನ ಮನೆ ಮುಂದೆಯೇ ಸುರಿಯಲಿ. ಯಾವುದೇ ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಹೋರಾಟಕ್ಕೆ ನಾನು ಸಿದ್ಧ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net