ಲೋಕಾಪುರ: ಗ್ರಾಮದಲ್ಲಿ ಮದುವೆಯ ಸಡಗರವಿತ್ತು, ಮದುವೆಯ ಸಂದರ್ಭದಲ್ಲಿ ಮಾಡಬೇಕಾದ ಎಲ್ಲ ಕೈಂಕರ್ಯಗಳು ನಡೆಯುತ್ತಿದ್ದವು. ಎಲ್ಲೆಡೆ ಸಂಭ್ರಮ-ಸಡಗರ ಮನೆ ಮಾಡಿತ್ತು, ಆದರೆ ಅಲ್ಲಿ ಮದುಮಕ್ಕಳು ಮಾತ್ರ ಇರಲಿಲ್ಲ.
ಹೌದು, ಇದು ಗೊಂಬೆಗಳ ಮದುವೆ, ನಾಡಿಗೆ ಉತ್ತಮ ಮಳೆ- ಬೆಳೆ ನೀಡುವಂತೆ ಪ್ರಾರ್ಥಿಸಿ ಶುಕ್ರವಾರ ಸಮೀಪದ ವರ್ಚಗಲ್ ಗ್ರಾಮದ ಸಾರ್ವಜನಿಕರು ನಡೆಸಿದ ವಿಶೇಷ ಮದುವೆಯಿದು.
ನಿಯಮ ಪಾಲನೆ: ಓಣಿಯ ಹಿರಿಯರೆಲ್ಲಾ ಸೇರಿಕೊಂಡು ಗೊಂಬೆಗಳಿಗೆ ಅರಿಷಿಣ ನೀರು ಹಾಕಿದ್ದಾರೆ. ಆದರೆ ಗೊಂಬೆಗಳು ಸರಿಯಾಗಿ ಕುಳಿತುಕೊಳ್ಳುವುದಿಲ್ಲ ಎನ್ನುವ ಕಾರಣಕ್ಕಾಗಿ ಚಿಕ್ಕ ಮಕ್ಕಳ ಕೈಯಲ್ಲಿ ಈ ಗೊಂಬೆಗಳನ್ನು ಕೊಟ್ಟು ಅವರ ಮೂಲಕವೇ ಗೊಂಬೆಗಳ ಮದುವೆ ಮಾಡಿದ್ದಾರೆ. ಹೆಣ್ಣು ಮತ್ತು ಗಂಡು ಗೊಂಬೆಗಳಿಗೆ ಸುರಗಿ ಕಟ್ಟುವುದು, ವಿಶೇಷ ಆರತಿ ಮಾಡುವುದು. ಹೀಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಡೆಯುವ ಸಾಮಾನ್ಯ ಮದುವೆಗಳಂತೆಯೇ ಗೊಂಬೆಗಳಿಗೆ ಮದುವೆಗೂ ಎಲ್ಲ ನಿಯಮಗಳನ್ನು ಪಾಲನೆ ಮಾಡಿದ್ದು
ಗಮನಾರ್ಹವಾಗಿತ್ತು.
ಸಂಪ್ರದಾಯದ ಪ್ರಕಾರ ಆಚರಣೆ: ಗ್ರಾಮಸ್ಥರೆಲ್ಲ ಸೇರಿ ವರನ ಮನೆಯಲ್ಲಿ ಹಾಲುಗಂಬ ನೆಡುವ, ಒಳಕಲ್ಲು ಪೂಜೆ ಮಾಡುವ, ಬಳಿ ಉಡಿಸುವ, ವಿವಿಧ ಪದಾರ್ಥಗಳ ಕುಟ್ಟುವಿಕೆ ಮೊದಲಾದ ಸಾಂಪ್ರದಾಯವನ್ನು ನೆರವೇರಿಸಿದರು. ವರನ ಕಡೆಯವರು ಬಂದಾಗ ಎದುರುಗೊಳ್ಳುವ ಕಾರ್ಯಕ್ರಮ ಸಾಂಪ್ರದಾಯಕ ಪ್ರಕಾರ ಜರುಗಿತು.
ವಧುವಿನ ಕಡೆಯವರು ಬಂದು ವರನ ಕಡೆಯವರಿಗೆ ಸಿಹಿ ನೀಡಿ ಮದುವೆಗೆ ಆಮಂತ್ರಿಸಿದರು. ಮೆರವಣಿಗೆಯುದ್ದಕ್ಕೂ ಆರತಿಯನ್ನು ಮುತ್ರೈದೆಯರು ಹಿಡಿದು ಸಂಪ್ರದಾಯ ಮೆರೆದರು. ನಂತರ ಎರಡು ಗೊಂಬೆಗಳಿಗೆ ಅರಿಷಿಣ ಹಾಗೂ ಎರಡೂ ಪಕ್ಷದ ಸಂಬಂಧಿಕರಿಗೆ ಪರಸ್ಪರ ಅರಿಷಿಣ ಹಚ್ಚಿ ಸ್ನಾನ ಮಾಡಿಸಲಾಯಿತು.
ಈ ರೀತಿ ಗೊಂಬೆಗಳ ಮದುವೆ ಮಾಡುವುದರಿಂದ ಮಳೆಯಾಗುತ್ತದೆಯೇ? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ, ಇಲ್ಲಿನ ಹಿರಿಯರು ಈ ರೀತಿ ಮಳೆ ಕೊರತೆ ಎದುರಾದ ಸಂದರ್ಭದಲ್ಲಿ ನಮ್ಮ ಹಿರಿಯರು ಗೊಂಬೆಗಳ ಮದುವೆ ಮಾಡುತ್ತಿದ್ದರು. ಇದು ದೇವರಿಗೆ ಮನವರಿಕೆಯಾಗಿ, ರೈತರ ನೆರವಿಗೆ ಧಾವಿಸಿ ವರುಣ ದೇವ ಕೃಪೆ ತೋರುತ್ತಿದ್ದನು. ಹೀಗಾಗಿ ಹಳೇ ಪದ್ಧತಿ ಮುಂದುವರೆಸಿದ್ದೇವೆ ಎಂದರು.
"
ಒಗ್ಗಟ್ಟಿನ ಪ್ರತೀಕ
ಎಲ್ಲ ಮದುವೆಗಳಂತೆ ಈ ಮದುವೆ ಅಲ್ಲ. ಸಂಪೂರ್ಣ ಕೃಷಿಯನ್ನೇ ನಂಬಿರುವ ಕುಟುಂಬಗಳಿಗೆ ಮಳೆ ಇಲ್ಲದೇ ಕಾಯಕವೇ ಇಲ್ಲ, ಇಂತಹ ಸಂದರ್ಭದಲ್ಲಿ ಗ್ರಾಮದಲ್ಲಿ ಎಲ್ಲರೂ ಸೇರಿ, ಈ ರೀತಿಯ ಧಾರ್ಮಿಕ ಕಾರ್ಯಗಳಲ್ಲಿ ತೊಡುಗುವುದರಿಂದ ಒಗ್ಗಟ್ಟು ಮೂಡುತ್ತದೆ. ಮನಸ್ಸಿಗೂ ಕೊಂಚ ನೆಮ್ಮದಿ ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಗೊಂಬೆಗಳ ಮದುವೆ ಕಾರ್ಯಕ್ರಮದ ನೇತೃತ್ವ ಈರಣ್ಣ ಬಲ್ಕಿ, ಛಾಯಪ್ಪಗೌಡ ಪಾಟೀಲ, ಬಸು ಹೊಸಳ್ಳಿ, ಶಿವಪ್ಪ ಯಾದವಾಡ, ಸಿದ್ದು ಹೊಸಮನಿ, ಭಗವಂತಪ್ಪ ತುಳಸಿಗೇರಿ, ಮಂಜು ಬಲ್ಕಿ, ಹೊಳಬಸು ವಸದ, ಬಸಲಿಂಗಪ್ಪ ಕಟ್ಟಿ ವಹಿಸಿದ್ದರು.