ನಂಬರ್ 1 ಸ್ಥಾನ ಅಬಾಧಿತ!...ಎಬಿಸಿ ವರದಿಯಲ್ಲಿ ವಿಜಯವಾಣಿಯ ಹೆಗ್ಗಳಿಕೆ: ಕನ್ನಡದ ಸಮಸ್ತ ಓದುಗರಿಗೆ ಕೋಟಿ ಕೋಟಿ ಧನ್ಯವಾದಗಳು

Vijayavani | ಎಬಿಸಿ ವರದಿಯಲ್ಲಿ ವಿಜಯವಾಣಿಯ ಹೆಗ್ಗಳಿಕೆ:
Vijayavani | ಎಬಿಸಿ ವರದಿಯಲ್ಲಿ ವಿಜಯವಾಣಿಯ ಹೆಗ್ಗಳಿಕೆ:
Published on
ನಾಡು ಗೌರಿ&ಗಣೇಶ ಹಬ್ಬದ ಸಂಭ್ರಮದಲ್ಲಿದೆ. ಈ ಶುಭ ಸಂದರ್ಭದಲ್ಲಿ ವಿಶೇಷ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕನ್ನಡದ ನಂಬರ್​ 1 ದಿನಪತ್ರಿಕೆ ವಿಜಯವಾಣಿಯು ತನ್ನ ವಿಜಯಯಾತ್ರೆಯನ್ನು ಮುಂದುವರಿಸಿದೆ. 
ಇದು ನಿಮ್ಮ, ಅಂದರೆ ಓದುಗರ ವಿಜಯ; ಜನಪರ ಪತ್ರಿಕೋದ್ಯಮದ ವಿಜಯ. ಪತ್ರಿಕಾ ಪ್ರಕಾಶಕರು, ಜಾಹೀರಾತುದಾರರು ಮತ್ತು ಜಾಹೀರಾತು ಏಜೆನ್ಸಿಗಳ ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ಒಳಗೊಂಡ ಆಡಿಟ್​ ಬ್ಯೂರೋ ಆಫ್​ ಸಕ್ಯುರ್ಲೇಷನ್ಸ್​ (ಎಬಿಸಿ) ಸಂಸ್ಥೆಯು ಪತ್ರಿಕೆಗಳ ಪ್ರಸಾರ ಸಂಖ್ಯೆಯ ಕುರಿತು ನೀಡುವ ವರದಿ ಅಧಿಕೃತ ಎಂದು ಪರಿಗಣಿತವಾಗಿದೆ. ಪ್ರತಿ ವರ್ಷ ಎರಡು ಬಾರಿ ಎಬಿಸಿ ವರದಿಯನ್ನು ನೀಡುತ್ತದೆ. 2026ರ ಜನವರಿ&ಜೂನ್​ ಅವಧಿಯ ವರದಿಯನ್ವಯ, ವಿಜಯವಾಣಿಯು ಕನ್ನಡದ ನಂಬರ್​ 1 ಪತ್ರಿಕೆಯಾಗಿ ಮುಂದುವರಿದಿದೆ. 
ಈ ಮೂಲಕ ಪತ್ರಿಕೆಯು ಎಂದಿನಂತೆ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ. ಈ ಹೆಗ್ಗಳಿಕೆಯ ಶ್ರೇಯಸ್ಸು ತಮಗೆ ಅಂದರೆ ಸಮಸ್ತ ಕನ್ನಡಿಗರಿಗೆ ಸಲ್ಲಬೇಕು. ಪ್ರಾರಂಭವಾದ 27 ತಿಂಗಳುಗಳಲ್ಲಿಯೇ ಅಗ್ರಸ್ಥಾನವನ್ನು ಸಾಧಿಸಿದ ವಿಜಯವಾಣಿ, ಈ ಹಿರಿಮೆಯನ್ನು ನಿರಂತರವಾಗಿ ಕಾಪಾಡಿಕೊಂಡು ಬಂದಿರುವುದು ನಿಮಗೆ ಗೊತ್ತೇ ಇದೆ. "ಓದುಗರಿಗೆ ಮೊದಲ ಮಣೆ 'ಎಂಬುದು ನಾವು ಮೊದಲಿಂದಲೂ ಪಾಲಿಸಿಕೊಂಡು ಬರುತ್ತಿರುವ ಧ್ಯೇಯ. ಹೀಗಾಗಿಯೇ ಪತ್ರಿಕೆಯು ಕನ್ನಡಿಗರ ಧ್ವನಿಯಾಗಿ ಹೊರ ಹೊಮ್ಮಲು ಸಾಧ್ಯವಾಯಿತು.
ಬೇರೆ ಬೇರೆ ಮೂಲಗಳಿಂದ ಮಾಹಿತಿಯ ಪ್ರವಾಹವೇ ಹರಿದುಬರುವ ಇಂದಿನ ದಿನಮಾನದಲ್ಲಿ, ಸತ್ಯ&ಅಸತ್ಯ ಗುರುತಿಸುವುದೇ ಸವಾಲಿನ ಕೆಲಸ. ಅವಾಸ್ತವದ, ಅಪಕ್ವ ಮಾಹಿತಿಗಳಿಂದ ಸಾಮಾಜಿಕ ಆರೋಗ್ಯಕ್ಕೆ ಹಾನಿಯಾಗುತ್ತಿರುವುದನ್ನು ನಾವೆಲ್ಲ ನೋಡುತ್ತಲೇ ಇದ್ದೇವೆ. ವಿಜಯವಾಣಿಯು ಅವಸರಕ್ಕೆ ಬಿದ್ದು, ಅತಿರೇಕದ ವರದಿಗಳನ್ನು ನೀಡದೆ, ಸುದ್ದಿಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡು ಓದುಗರಿಗೆ ನೀಡುತ್ತ ಬಂದಿದೆ. ಹೀಗಾಗಿಯೇ ಸಾಮಾಜಿಕ ಮಾಧ್ಯಮಗಳ ಅಬ್ಬರದ ನಡುವೆಯೂ ಪತ್ರಿಕೆ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗಿದೆ.  ಭಾರತೀಯ ಸಂಸತಿ, ಪರಂಪರೆಯನ್ನು ಬಿಂಬಿಸುವ ಲೇಖನ, ವರದಿಗಳಿಗೆ ನಮ್ಮಲ್ಲಿ ಮೊದಲಿಂದಲೂ ಪ್ರಾಮುಖ್ಯ ನೀಡುತ್ತ ಬಂದಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಎಂದಿಗೂ ನಮ್ಮ ನಿಲುವಿನಲ್ಲಿ ರಾಜಿಯಿಲ್ಲ. ಈ  ಕಾರಣಗಳಿಂದ ಎಲ್ಲ ವಯೋಮಾನದವರಿಗೂ ವಿಜಯವಾಣಿ ಇಷ್ಟದ ಪತ್ರಿಕೆಯಾಗಿರುವುದು ನಿಮ್ಮ ಗಮನಕ್ಕಿರುವ ಸಂಗತಿ. 
ಜನರ ಮನಸ್ಸಿನಲ್ಲಿ ಉಳಿಯಬೇಕೆಂದಾದಲ್ಲಿ ಕಾಲಕ್ಕೆ ತಕ್ಕ ಹಾಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಅಗತ್ಯ ಬದಲಾವಣೆಗಳನ್ನು ತಂದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿಯೂ ನಾವು ದೃಢ ಹೆಜ್ಜೆಗಳನ್ನಿರಿಸಿದ್ದೇವೆ. ವಿಜಯವಾಣಿ ಡಿಜಿಟಲ್​ ಆವೃತ್ತಿಗೆ ನಿರಂತರವಾಗಿ ಹೊಸತನ, ಹೊಸ ಸ್ಪರ್ಶ ನೀಡುತ್ತಿದ್ದೇವೆ. ಈ ಮುಖಾಂತರ ರಾಜ್ಯ, ಹೊರ ರಾಜ್ಯಗಳು ಹಾಗೂ ಹೊರ ದೇಶಗಳ ಕನ್ನಡ ಬಳಗವನ್ನು ಇನ್ನಷ್ಟು ವ್ಯಾಪಕವಾಗಿ ತಲುಪುತ್ತಿದ್ದೇವೆ.
ವಿಜಯವಾಣಿಯ ಸಾಧನೆಗೆ ಕಾರಣರಾದ ನಮ್ಮೆಲ್ಲ ವಿತರಕರು, ಓದುಗರು, ಜಾಹೀರಾತುದಾರರಿಗೆ  ಧನ್ಯವಾದಗಳನ್ನು ಹೇಳಬಯಸುತ್ತೇವೆ. ನಂಬರ್​ 1 ಸ್ಥಾನ ಎಂಬುದು ನಮಗೆ ಹೇಗೆ ಹೆಮ್ಮೆಯ ಸಂಗತಿಯೋ, ಹಾಗೇ ನಮ್ಮ ಹೊಣೆಗಾರಿಕೆ, ಬದ್ಧತೆಯನ್ನು ನೆನಪಿಸುವಂಥದೂ ಹೌದು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸದ ಬಲದಿಂದ ಈ ಮಹತ್ತರ 
ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆಂಬ ಭರವಸೆಯನ್ನು ಈ ಸಮಯದಲ್ಲಿ ಮತ್ತೊಮ್ಮೆ ನೀಡಬಯಸುತ್ತೇವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net