ಶಿಡ್ಲಘಟ್ಟ: ವಚನಗಳು ಒಂದು ಕಾಲಘಟ್ಟಕ್ಕೆ ಸೀಮಿತವಾದ ಸಾಹಿತ್ಯವಲ್ಲ. ಅದು ಸಾರ್ವಕಾಲಿಕ ಜೀವನ ಧರ್ಮವಾಗಿದೆ ಎಂದು ಬೆಂ. ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಹೇಳಿದರು. religion
ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವನಹಳ್ಳಿ ತಾಲೂಕು ಶರಣ ಸಾಹಿತ್ಯ ಪರಿಷತ್, ಸಾಕ್ಷಿ ಮುರುಘ ಸೇವಾ ಟ್ರಸ್ಟ್ ಹಾಗೂ ಬಂಗಲೆ ಕುಟುಂಬದ ಜಂಟಿ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಶರಣಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಶರಣರ ವಚನಗಳಲ್ಲಿ ಅಡಗಿರುವ ಸಾಮಾಜಿಕ ಸಮಾನತೆ, ಕಾಯಕ ಮತ್ತು ದಾಸೋಹ ತತ್ವ ಇಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ವಚನಗಳ ಓದು ಮತ್ತು ಶರಣರ ಆದರ್ಶಗಳನ್ನು ರೂಢಿಸಿಕೊಂಡರೆ ಸಾಹಿತ್ಯಾಸಕ್ತಿ ಮತ್ತು ನೈತಿಕ ಮೌಲ್ಯ ಬೆಳೆಯುತ್ತದೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯುವಪೀಳಿಗೆಯು ಅಂಕಗಳಿಕೆಯ ಶಿಕ್ಷಣಕ್ಕೆ ಸೀಮಿತವಾಗದೆ, ಮಾನವೀಯ ಮೌಲ್ಯ ಕಲಿಯುವುದು ಅತ್ಯಗತ್ಯವಾಗಿದೆ. ಶರಣರು ನುಡಿದಂತೆ ನಡೆದವರು. ಅವರ ಬದುಕು ನಮಗೆ ದಾರಿದೀಪವಾಗಬೇಕು ಎಂದು ಹೇಳಿದರು.
ದೇವನಹಳ್ಳಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮ.ಸುರೇಶ್ ಬಾಬು ಮಾತನಾಡಿ, ಯುವಪೀಳಿಗೆಯು ತಂತ್ರಜ್ಞಾನದ ಸುಳಿಗೆ ಸಿಲುಕಿ ಸಂಸತಿ ಮತ್ತು ಸಾಹಿತ್ಯಿಕ ಬೇರುಗಳಿಂದ ದೂರವಾಗುತ್ತಿರುವುದು ಕಳವಳಕಾರಿ ಸಂಗತಿ. ಶರಣರ ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಅತ್ಯುತ್ತಮ ಸೂತ್ರಗಳನ್ನು ಒಳಗೊಂಡಿವೆ. ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಶರಣರ ವಿಚಾರಧಾರೆಗಳನ್ನು ನಿರಂತರವಾಗಿ ತಲುಪಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ವಚನಗಾಯನ ನಡೆಸಿ ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.