ವೆಂಕಟರಮಣಸ್ವಾಮಿ ರಥೋತ್ಸವ ಅದ್ದೂರಿ

ಗುಂಡ್ಲುಪೇಟೆ ತಾಲೂಕಿನ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ದಿವ್ಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗುಂಡ್ಲುಪೇಟೆ ತಾಲೂಕಿನ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ದಿವ್ಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on
ಗುಂಡ್ಲುಪೇಟೆ: ತಾಲೂಕಿನ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಗುರುವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದಿವ್ಯರಥೋತ್ಸವ ಸಂಪನ್ನಗೊಂಡಿತು.

ಚಿಕ್ಕತಿರುಪತಿ ಎಂದೇ ಕರೆಯಲಾಗುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಮಕರ ಸಂಕ್ರಾಂತಿಯಂದು ದಿವ್ಯ ರಥೋತ್ಸವ ನಡೆಸಲಾಗುತ್ತಿದೆ. ಪ್ರತಿ ವರ್ಷವೂ ಧನುರ್ಮಾಸ ಕಳೆದ ನಂತರ ನಡೆಯುವ ಮೊದಲನೇ ರಥೋತ್ಸವಕ್ಕೆ ತಾಲೂಕಿನ ಜನರಲ್ಲದೆ ನೆರೆಯ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಬಿದಿರಿನಿಂದ ನಿರ್ಮಿಸಿದ ರಥವನ್ನು ಬಣ್ಣಬಣ್ಣದ ಬಟ್ಟೆಗಳಿಂದ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗಿನಿಂದಲೇ ಮೂಲ ವಿಗ್ರಹಗಳು ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಬೆಳಗ್ಗೆ 10 ಗಂಟೆ ವೇಳೆಗೆ ಪ್ರವಾಹದಂತೆ ಆಗಮಿಸಿದ ಭಕ್ತರು ದಿವ್ಯ ರಥವನ್ನು ಎಳೆಯಲು ಕಾದು ನಿಂತಿದ್ದರು.

ಉತ್ಸವ ಮೂರ್ತಿಗಳನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿ ರಥದಲ್ಲಿ ಕುಳ್ಳಿರಿಸಿದ ನಂತರ ಬಾನಿನಲ್ಲಿ ಗರುಡ ಕಾಣಿಸಿಕೊಂಡ ಕೂಡಲೇ ಮಧ್ಯಾಹ್ನ 12.45 ಗಂಟೆಗೆ ತಹಸೀಲ್ದಾರ್ ಎಂ.ಎಸ್.ತನ್ಮಯಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಲಕ್ಷಾಂತರ ಭಕ್ತರು ಗೋವಿಂದಾ ಗೋಪಾಲ ಎಂಬ ಜಯಘೋಷಗಳನ್ನು ಕೂಗುತ್ತಾ ರಥವನ್ನು ದೇವಾಲಯದ ಸುತ್ತಲೂ ಶ್ರದ್ಧಾ ಭಕ್ತಿಗಳಿಂದ ಎಳೆದರು. ನವ ದಂಪತಿಗಳು ಹೂವು ಹಣ್ಣುಗಳನ್ನು ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಪೊಲೀಸ್ ಬಿಗಿ ಬಂದೋಬಸ್ತ್:
ಸಂಕ್ರಾಂತಿಯಂದು ನಡೆಯುವ ಜಾತ್ರೆಗೆ ಸ್ಥಳೀಯರಲ್ಲದೆ ಹೊರಗಿನಿಂದಲೂ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಆಗುತ್ತಿದ್ದ ನೂಕುನುಗ್ಗಲು ತಪ್ಪಿಸಿ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಆಯೋಜಿಸಿತ್ತು.

ತೆರಕಣಾಂಬಿ ಮತ್ತು ಪಟ್ಟಣದಿಂದ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಬೆಟ್ಟಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಖಾಸಗಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು.
ಬೈಕ್, ಕಾರು, ಬಸ್ಸು ಸೇರಿದಂತೆ ಎಲ್ಲ ವಾಹನಗಳು ತೆರಕಣಾಂಬಿಯಿಂದ ಬೊಮ್ಮನಹಳ್ಳಿ ರಸ್ತೆಯಲ್ಲಿ ಸಾಗಿ ಬೆಟ್ಟದ ತಪ್ಪಲಿನಲ್ಲಿ ಪ್ರಯಾಣಿಕರನ್ನು ಇಳಿಸಿ ಕೊತ್ತಲವಾಡಿ ಮಾರ್ಗದಲ್ಲಿ ವಾಪಸಾಗುವಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿತ್ತು. ಬೆಟ್ಟಕ್ಕೆ ಹೋಗುವ ಭಕ್ತರ ಬೈಕ್ ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net