ಸಾರಿಗೆ ಅಧಿಕಾರಿಗಳಿಂದ ವಾಹನಗಳ ಜಪ್ತಿ ಅಭಿಯಾನ...!

ಆರ್​ಟಿಒ ಅಧಿಕಾರಿಗಳಿಂದ ದಂಡ
ಆರ್​ಟಿಒ ಅಧಿಕಾರಿಗಳಿಂದ ದಂಡ
Published on
ಧಾರವಾಡ: ವಾಹನಗಳ ಮೇಲೆ ಆರ್​ಟಿಒ ಅಧಿಕಾರಿಗಳಿಂದ ದಾಖಲಾದ ಪ್ರಕರಣಗಳ ರಿಯಾಯಿತಿ ದಂಡ ಪಾವತಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋಟಾರು ವಾಹನ ಕಾಯ್ದೆಯಡಿ ನಿಯಮ ಉಲ್ಲಂನೆ ಸಂಬಂಧ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತಕ್ಕೆ ಶೇ. 50ರಷ್ಟು ರಿಯಾಯಿತಿ ನೀಡಿದ್ದರೂ ವಾಹನ ಮಾಲೀಕರು ದಂಡ ಭರಿಸಿಲ್ಲ. 22 ದಿನಗಳ ಅವಧಿಯಲ್ಲಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ 79,250 ರೂ. ದಂಡ ಆಕರಣೆಯಾಗಿದೆ.
ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಆರ್​ಟಿಒ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳಿಗೆ ದುಬಾರಿ ದಂಡ ಭರಿಸಲಾಗದೆ ವಾಹನಗಳ ಮಾಲೀಕರು ಅಧಿಕಾರಿಗಳ ಕಣ್ತಪ್ಪಿಸಿ ಸಂಚರಿಸುತ್ತಿದ್ದರು. ದಂಡದಿಂದ ಮುಕ್ತವಾಗಲು ಸಾರಿಗೆ ಇಲಾಖೆ  ಸುವರ್ಣಾವಕಾಶ ನೀಡಿತ್ತು. ವಾಹನಗಳ ಮೇಲೆ ಸಂಚಾರಿ ಇ& ಚಲನ್​ನಲ್ಲಿ ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಪೊಲೀಸ್​ ಇಲಾಖೆ ಇತ್ತೀಚೆಗೆ ಶೇ. 50ರಷ್ಟು ರಿಯಾಯಿತಿ ನೀಡಿತ್ತು. ಇದಕ್ಕೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹೀಗಾಗಿ ಸಾರಿಗೆ ಇಲಾಖೆಯೂ ಇದೇ ಮೊದಲ ಬಾರಿ ಅರ್ಧ ದಂಡ ಭರಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ನ. 21ರಿಂದ ಡಿ. 12ರವರೆಗೆ ಕಾಲಾವಕಾಶ ನೀಡಿತ್ತು. 1991- 92ನೇ ಸಾಲಿನಿಂದ 2019& 20ರವರೆಗಿನ ಪ್ರಕರಣಗಳಿಗೆ ರಿಯಾಯಿತಿ ಅನ್ವಯಿಸಿ ಅವಕಾಶ ನೀಡಲಾಗಿತ್ತು.
ಈ ಅವಧಿಯಲ್ಲಿ ಹುಬ್ಬಳ್ಳಿ ಗಬ್ಬೂರ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ 63) ವ್ಯಾಪ್ತಿಯಲ್ಲಿ ದಾಖಲಾಗಿರುವ 456 ಪ್ರಕರಣಗಳಲ್ಲಿ 16 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಇದರಿಂದ 74,800 ರೂಪಾಯಿ ದಂಡ ಆಕರಣೆಯಾಗಿದೆ.
ಧಾರವಾಡ ನವನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ 25) ವ್ಯಾಪ್ತಿಯಲ್ಲಿ ದಾಖಲಾಗಿರುವ 2,955 ಪ್ರಕರಣಗಳಲ್ಲಿ ಕೇವಲ 2  ಪ್ರಕರಣಗಳು ಇತ್ಯರ್ಥಗೊಂಡು 4,450 ರೂ. ದಂಡ ಆಕರಣೆಯಾಗಿದೆ.
ಅರ್ಧ ದಂಡ ಪಾವತಿಸಲು ನೀಡಿದ್ದ 22 ದಿನಗಳ ಅವಧಿಯಲ್ಲಿ ಆಕರಣೆಯಾಗಿರುವ ದಂಡದ ಒಟ್ಟು ಮೊತ್ತ 79,250 ರೂ. ಮಾತ್ರ.
ಹುಬ್ಬಳ್ಳಿ- ಧಾರವಾಡ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ 1991ರಿಂದ 2020ರ ಮಾ. 31ರವರೆಗೆ ದಂಡ ಪಾವತಿಸಬೇಕಿರುವ 3,411ಪ್ರಕರಣಗಳು ಬಾಕಿ ಇವೆ. ಆನ್​ಲೈನ್​ ವ್ಯವಸ್ಥೆ ಇಲ್ಲದಿರುವುದರಿಂದ ಕಚೇರಿಗೆ ತೆರಳಿಯೇ ದಂಡ ಪಾವತಿಸಲು ಆರ್​ಟಿಒ ಕಚೇರಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. 3,500 ರೂ. ಒಳಗಿನ ದಂಡಕ್ಕೆ ನಗದು, ಅದಕ್ಕಿಂತ ಮೇಲ್ಪಟ್ಟ ದಂಡಕ್ಕೆ ಡಿಡಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.
ವಾಹನಗಳ ಜಪ್ತಿ ಯೋಜನೆ
ಅರ್ಧ ದಂಡ ಪಾವತಿಗೂ ವಾಹನ ಮಾಲೀಕರು ನಿರಾಸಕ್ತಿ ತೋರಿದ್ದರಿಂದ ಆರ್​ಟಿಒ ಅಧಿಕಾರಿಗಳು ವಾಹನಗಳ ಹರಾಜಿಗೆ ಯೋಜನೆ ರೂಪಿಸಿದ್ದಾರೆ. ದಂಡ ಪಾವತಿಸಬೇಕಾದ ವಾಹನ ಮಾಲೀಕರಿಗೆ ನೋಟಿಸ್​ ನೀಡಲಾಗುತ್ತದೆ. ಸ್ಥಳದಲ್ಲೇ ದಂಡ ಪಾವತಿಗೆ ಅವಕಾಶ ನೀಡಲಾಗುತ್ತದೆ. ದಂಡ ಭರಿಸದಿದ್ದರೆ ವಾಹನ ಜಪ್ತಿ ಮಾಡಲಾಗುವುದು ಎನ್ನುತ್ತಾರೆ ಆರ್​ಟಿಒ ಅಧಿಕಾರಿಗಳು.
ಯಾವ ಪ್ರಕರಣಗಳು...?
ಮೋಟಾರು ವಾಹನ ಕಾಯ್ದೆ (1998) ಅನ್ವಯ ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ನಿರೀಕ್ಷಕರು ವಾಹನಗಳ ಮೇಲೆ ಪ್ರಕರಣ ದಾಖಲಿಸುತ್ತಾರೆ. ವಾಹನಗಳ ಸೂಕ್ತ ದಾಖಲಾತಿ& ಲೈಸೆನ್ಸ್​& ಹೊಗೆ ಮುಕ್ತ ಪ್ರಮಾಣಪತ್ರ ಇಲ್ಲದಿರುವುದು, ನೋಂದಣಿ ನವೀಕರಣ ಆಗದಿರುವುದು, ತೆರಿಗೆ ಪಾವತಿಸದಿರುವುದು, ರಹದಾರಿ ಪ್ರಮಾಣಪತ್ರ ಇಲ್ಲದಿರುವುದು, ನಿಗದಿಗಿಂತ ಹೆಚ್ಚಿನ ತೂಕದ ಸಾಮಗ್ರಿ ಸಾಗಣೆ, ಗೂಡ್ಸ್​ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಸೇರಿ ಇತರ ನಿಯಮ ಉಲ್ಲಂನೆಯಾದರೆ ಪ್ರಕರಣ ದಾಖಲಾಗುತ್ತವೆ. 
"

ದಂಡದ ಮೊತ್ತ ಪಾವತಿಗೆ ಶೇ. 50ರಷ್ಟು ರಿಯಾಯಿತಿ ನೀಡಿದ್ದರೂ ಅದರ ಪ್ರಯೋಜನ ಪಡೆದಿಲ್ಲ. ರಿಯಾಯಿತಿ ಅವಧಿ ವಿಸ್ತರಣೆಯಾಗಿರುವ ಮಾಹಿತಿ ಲಭ್ಯವಾಗಿಲ್ಲ. ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳ ಮಾಲೀಕರನ್ನು ಆರ್​ಟಿಒ ಇನ್​ಸ್ಪೆಕ್ಟರ್​ಗಳ ಮೂಲಕ ಪತ್ತೆ ಮಾಡಿ ವಾಹನ ಜಪ್ತಿ ಮಾಡಲಾಗುವುದು. ಬಹುತೇಕ ಪ್ರಕರಣಗಳಲ್ಲಿ ಇಲಾಖೆಗೆ ಮಾಹಿತಿ ನೀಡದೆ ವಾಹನಗಳನ್ನು ಗುಜರಿಗೆ ಹಾಕಿರುವ ಮಾಹಿತಿ ಇದೆ. ಅಂಥವರ ವಿರುದ್ಧವೂ ಕ್ರಮ ಜರುಗಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net