ಸಂಗೀತಕ್ಕೆ ಜೀವ ತುಂಬಿದ ಕಲೆಗಾರ : ಪಟ್ಟಾಪಟ್ಟಿ ಚಡ್ಡಿ, ತಲೆ ಮೇಲೆ ಮಾಸಿದ ಶಲ್ಯ, ತೂತಾದ ಗೊಂಗಡಿ ಹೆಗಲೇರಿಸಿ ಪೆನ್ನ ಓಬಳಯ್ಯ ಮನೆಯಿಂದ ಹೊರಬಿದ್ದರು ಎಂದರೆ ಹೊತ್ತು ಮುಳುಗುವುದರೊಳಗೆ ಚಂದದ ಒಂದು ವೀಣೆ ಜನ್ಮ ತಳೆಯಿತು ಎಂದೇ ಅರ್ಥ. ಹೌದು, ನಡುಗುವ ಕೈ ಬಿಗಿ ಹಿಡಿದು ವೀಣೆ ಕೊರಡು ತಿದ್ದ ತೊಡಗಿದರೆ ಲೋಕದ ಪರಿವೆ ಇರುತ್ತಿರಲಿಲ್ಲ. ಹಣ, ಅಧಿಕಾರ, ಕೀರ್ತಿಯ ಆಸೆ ತೊರೆದ ಪೆನ್ನ ಅವರಿಗೆ ವೀಣೆಗೆ ಜನ್ಮ ನೀಡುವುದೇ ಅಧ್ಯಾತ್ಮವಾಗಿತ್ತು. ಇಳಿ ವಯಸ್ಸಿನಲ್ಲೂ ವೀಣೆ, ತಂಬೂರಿ ತಯಾರಿಯೇ ಬದುಕಾಗಿತ್ತು. ದಶಕಗಳ ಕಾಲ ಯಾರ ತಂಟೆಗೂ ಹೋಗದೆ ಬದುಕಿದ ಈ ಸಂತನಿಗೆ ನ. 1 ರಂದಷ್ಟೇರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು. ಪೆನ್ನ ಓಬಳಯ್ಯ ಹುಟ್ಟಿ ಬೆಳೆದದ್ದು ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಸಿಂಪಾಡಿಪುರ ಗ್ರಾಮದಲ್ಲಿ. ಸಿಂಪಾಡಿಪುರವು ಕರಕುಶಲತೆಗೆೆ ಹೆಸರುವಾಸಿ. 50 ವರ್ಷಗಳಿಂದಲೂ ವೀಣೆ ತಯಾರಿಕೆಗೆ ಹೆಸರಾಗಿರುವ ಗ್ರಾಮವು ಓಬಳಯ್ಯನ ಮೂಲಕ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡಿದೆ.