ವಿಬಿಜಿ ರಾಮ್ ಜಿ ಜು.1ರಿಂದಲೇ ಜಾರಿ

ಸಚಿವ ಈಶ್ವರ ಬಿ ಖಂಡ್ರೆ
ಸಚಿವ ಈಶ್ವರ ಬಿ ಖಂಡ್ರೆ
Published on
ಬೆಂಗಳೂರು: ಗ್ರಾಮೀಣ ಜನರ, ಮಹಿಳೆಯರ, ದುರ್ಬಲರ ಹಿತದೃಷ್ಟಿಯಿಂದ ಜು.1 ರಿಂದ ರಾಜ್ಯದಲ್ಲಿ ವಿಕ್ಷಿತ್ ಭಾರತ್ ರಾಮ್ ಜಿ ಯೋಜನೆ ಜಾರಿಗೆ ತರುವುದಾಗಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ 90:10 ಅನುಪಾತದಲ್ಲಿ ವೇತನ ಭರಿಸುತ್ತಿತ್ತು. ರಾಜ್ಯ ಸರ್ಕಾರ ಕೇವಲ ಶೇ.10 ಹಣ ನೀಡುತ್ತಿತ್ತು.ಈಗ 60:40ರ ಅನುಪಾತದಲ್ಲಿ ವೆಚ್ಚ ಭರಿಸಬೇಕಾಗಿದ್ದು, ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಆಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಹಂತ ಹಂತವಾಗಿ ಕನಿಷ್ಠ 80:20ರ ಅನುಪಾತದಲ್ಲಿ ಆದರೂ ರಾಜ್ಯಗಳ ನೆರವಿಗೆ ನಿಲ್ಲಬೇಕು. ವಿಬಿಜಿ ರಾಮ್ ಜಿ ಅಡಿ ರಾಜ್ಯಕ್ಕೆ 5709 ಕೋಟಿ ರೂ. ಹಂಚಿಕೆ ಮಾಡಿದೆ. ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ಯೋಜನೆಗೆ ರಾಜ್ಯದಿಂದ 3,806 ಕೋಟಿ ರೂ. ಭರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಬೇಸಾಯದ ಸಮಯದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡದಿರುವಂತೆ ಅವೈಜ್ಞಾನಿಕವಾಗಿ ಸೂಚಿಸಿದೆ. ಅತ್ಯಾಧುನಿಕ ಕೃಷಿ ಯಂತ್ರೋಪಕರಣ ಬಂದಿದ್ದು, ಗ್ರಾಮೀಣ ಕುಟುಂಬಗಳಿಗೆ ಬೇಸಾಯದ ಸಮಯದಲ್ಲೂ ಕೃಷಿ ಉದ್ಯೋಗ ಲಭಿಸುವುದಿಲ್ಲ. ಹೀಗಾಗಿ ವಿಬಿಜಿ ರಾಮ್ ಜಿ ಕೃಷಿ ಕಾರ್ಮಿಕರ ಅನ್ನವನ್ನು ಕಸಿದುಕೊಂಡಂತೆ ಮಾಡಿದೆ. ಇದರ ವಿರುದ್ಧ ರಾಜ್ಯ ಸರ್ಕಾರ ಆಕ್ಷೇಪಣೆ ವ್ಯಕ್ತಪಡಿಸಿದೆ.
ಬೇಡಿಕೆ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಯ. ನಮ್ಮ ರಾಜ್ಯದಲ್ಲಿ 375 ರೂ. ಕೂಲಿ ಇದೆ. ಇದಕ್ಕೆ ಹೊಂದುವಂತೆ ಕೇಂದ್ರವೂ ಕನಿಷ್ಠ ಕೂಲಿ ಹೆಚ್ಚಿಸಬೇಕು.
ಯಾರೇ ಉದ್ಯೋಗ ಕೇಳಿ ಬಂದರೂ ಅರ್ಹರಿಗೆ ಉದ್ಯೋಗ ನೀಡಲು ಸರ್ಕಾರ ಸನ್ನದ್ಧವಾಗಿದೆ.
ಕಳೆದ 3 ತಿಂಗಳಲ್ಲಿ ರಾಜ್ಯದಲ್ಲಿ 1.40 ಲಕ್ಷ ಮಾನವ ದಿನ ಸೃಷ್ಟಿಸಲಾಗಿದೆ. 9 ಕೋಟಿ ವಾರ್ಷಿಕ ಗುರಿ ಇಟ್ಟುಕೊಂಡಿದೆ. ಪ್ರತಿ ತಿಂಗಳೂ 80 ರಿಂದ 90 ಲಕ್ಷ ಮಾನವ ದಿನ ಸೃಷ್ಟಿ ನಮ್ಮ ಗುರಿಯಾಗಿದೆ.
ಈಗಾಗಲೇ ನರೇಗಾ ಅಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 7 ಸಾವಿರ ಸಿಬ್ಬಂದಿ ಜೀವನೋಪಾಯಕ್ಕೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ವಹಿಸಲಿದೆ ಎಂದು ಖಂಡ್ರೆ ಭರವಸೆ ನೀಡಿದರು.

ಕೇಂದ್ರದ ಮುಂದೆ ಪ್ರಸ್ತಾಪ :

ಜೂನ್ 28ರಂದು ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರೊಂದಿಗೆ ಎಲ್ಲ ರಾಜ್ಯಗಳ ಸಚಿವರ ಸಭೆ ಇದ್ದು, ಸಭೆಯಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಪ್ರಸ್ತಾಪಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net