ರಾಜಧಾನಿಯಲ್ಲಿ ಸಡಗರದ ವರಮಹಾಲಕ್ಷ್ಮೀ ಹಬ್ಬ

Sheshadripuram Mahalakshmi temple
Sheshadripuram Mahalakshmi temple
Published on

ಪ್ರಮುಖ ಮುಖ್ಯಾಂಶಗಳು

  • * ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ
  • * ಮನೆ- ದೇಗುಲಗಳಲ್ಲಿ ಪೂಜೆ

ಬೆಂಗಳೂರು:

ನಗರದಾದ್ಯಂತ ಶುಕ್ರವಾರ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯಿತು. ಸಂಪತ್ತು, ಸಮೃದ್ಧಿಯ ಅಧಿದೇವತೆ ವರಮಹಾಲಕ್ಷ್ಮಿಯನ್ನು ತಮ್ಮ ಶಕ್ತ್ಯಾನುಸಾರ ಪೂಜಿಸಿ, ವರ ಕರುಣಿಸುವಂತೆ ಬೇಡಿಕೊಂಡರು.

ಮನೆಗಳಲ್ಲಿ ಬಹುತೇಕರು ಬ್ರಾಹ್ಮಿ ಮುಹೂರ್ತದಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ, ಬಗೆಬಗೆಯ ಹೂಗಳಿಂದ ಅಲಂಕರಿಸಿ, ವಿವಿಧ ಭಕ್ಷ್ಯಗಳನ್ನು ನೈವೇದ್ಯ ಅರ್ಪಿಸಿ ಪೂಜೆ ಮಾಡಿದರು. ಮನೆಗಳಲ್ಲಿ ಕಳಶದ ಮೇಲೆ ಬೆಳ್ಳಿ ಸೇರಿ ವಿವಿಧ ಲೋಹಗಳಿಂದ ಮಾಡಿದ ಲಕ್ಷ್ಮೀದೇವಿ ಮುಖವಾಡವನಿಟ್ಟು ಪೂಜಿಸಿದರು. ಕೆಲ ಮನೆಗಳಲ್ಲಿ ಲಕ್ಷ್ಮೀ ಭಾವಚಿತ್ರ ಇಟ್ಟು ಪೂಜಿಸಿದರೆ, ಹಲವರು ತೆಂಗಿನಕಾಯಿಗೆ ಅರಿಶಿನದ ಹಿಟ್ಟಿನಿಂದ ಲಕ್ಷ್ಮೀ ರೂಪ ನೀಡಿ. ಕಳಶದ ಮೇಲೆ ಪ್ರತಿಷ್ಠಾಪಿಸಿ ಸೀರೆ ಉಡಿಸಿ, ಆಭರಣಗಳನ್ನು ತೊಡಿಸಿ, ಹೂಗಳಿಂದ ಅಲಂಕರಿಸಿದ್ದರು. ಮತ್ತೆ ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಲಕ್ಷ್ಮೀ ವಿಗ್ರಹಗಳನ್ನು ತಂದು, ಅದನ್ನು ಅಲಂಕರಿಸಿ ಪ್ರತಿಷ್ಠಾಪಿಸಿದ್ದರು.
ವರಮಹಾಲಕ್ಷ್ಮೀ ಹಬ್ಬದ ಅಡುಗೆಯಲ್ಲಿ ಒಬ್ಬಟ್ಟು ಪ್ರಧಾನ. ಜತೆಗೆ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಕುಟುಂಬಸಮೇತರಾಗಿ ಊಟ ಮಾಡಿ ಹಬ್ಬ ಆಚರಿಸಿದರು. ಮನೆಯಲ್ಲಿ ಲಕ್ಷ್ಮೀ ಕೂರಿಸಿದ್ದವರು ಸಂಜೆಯಾಗುತ್ತಿದ್ದಂತೆ ಅಕ್ಕಪಕ್ಕದವರು, ಸ್ನೇಹಿತರು, ಬಂಧು-ಬಳಗದವರ ಮನೆಗಳಿಗೆ ತೆರಳಿ ಕುಂಕುಮ ಪಡೆದು, ಅವರನ್ನೂ ತಮ್ಮ ಮನೆಗಳಿಗೆ ಕರೆದು ಅರಿಶಿನ ಕುಂಕುಮ ಕೊಟ್ಟು ಸಂಭ್ರಮಿಸಿದರು.

ಮಾರುಕಟ್ಟೆಯಲ್ಲಿ ಜನದಟ್ಟಣೆ


ಹಬ್ಬದ ಹಿನ್ನೆಲೆ ಮೂರ‌್ನಾಲ್ಕು ದಿನಗಳಿಗೂ ಮುಂಚಿತವಾಗಿಯೇ ಮಾರುಕಟ್ಟೆಗಳಲ್ಲಿ ಜನರು ಕಿಕ್ಕಿರಿದು ಸೇರಿ ಹಬ್ಬಕ್ಕೆ ಖರೀದಿ ನಡೆಸಿದ್ದರು. ಆದಾಗಿಯೂ ಕಚೇರಿಗೆ ಹೋಗುವ ಮಂದಿ ಬಿಡುವು ಸಿಗದ ಕಾರಣ ಹಬ್ಬದ ದಿನವೇ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಗಾಗಿ ಶುಕ್ರವಾರವೂ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿಯೇ ನಡೆದಿತ್ತು.

ದೇವಾಲಯಗಳಲ್ಲೂ ಸಂಭ್ರಮ

ಬನಶಂಕರಿ, ಮಹಾಲಕ್ಷ್ಮಿ ಲೇಔಟ್‌ನ ಲಕ್ಷ್ಮೀ ದೇವಾಲಯ, ರಾಜರಾಜೇಶ್ವರಿ, ಗಂಗಮ್ಮದೇವಿ, ಸರ್ಕಲ್ ಮಾರಮ್ಮ, ಅಣ್ಣಮ್ಮ, ಯಶವಂತಪುರದ ಚೌಡೇಶ್ವರಿದೇವಿ, ಪುಟ್ಟೇನಹಳ್ಳಿಯ ಮಹಾಲಕ್ಷ್ಮೀ ದೇವಾಲಯ, ವೈಯಾಲಿಕಾವಲ್‌ನ ಲಕ್ಷ್ಮೀ ದೇವಾಲಯ, ಶೇಷಾದ್ರಿಪುರದ ಲಕ್ಷ್ಮೀ ದೇವಾಲಯ, ಸೇರಿ ದೇವಿ ದೇವಾಲಯಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನಡೆಯಿತು. ದೇವಾಲಯಗಳಲ್ಲಿ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ನಿಂಬೆ ಹಣ್ಣಿನ ದೀಪ, ಬೆಲ್ಲದ ಆರತಿ ಬೆಳಗಿ ಪ್ರಾರ್ಥಿಸಿದರು.

ಬನಶಂಕರಿ ದೇವಿಗೆ ಬೆಳ್ಳಿ ಮಂದಹಾಸ


ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ಹಾಗೂ ಶಾಕಾಂಬರಿ ದೇವಿಯರಿಗೆ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜೆ ನಡೆಯಿತು. ಈ ವೇಳೆ ಭಕ್ತ ಕೆ.ವಿ. ಬಾಲಸುಬ್ರಹ್ಮಣ್ಯ ಹಾಗೂ ಕುಟುಂಬದವರು ಬನಶಂಕರಿ ದೇವಿಗೆ 6.50 ಕೆ.ಜಿ. ತೂಕದ ಬೆಳ್ಳಿಯ ಮಂದಹಾಸವನ್ನು (ದೇವಿಯನ್ನು ಕೂರಿಸುವ ಪೀಠ) ಕಾಣಿಕೆಯಾಗಿ ನೀಡಿದರು. ಹಬ್ಬದ ದಿನವೇ ದೇವಿಗೆ ಮಂದಹಾಸ ಕಾಣಿಕೆಯಾಗಿ ದೊರೆತಿರುವುದು ವಿಶೇಷ ಎಂದು ಬನಶಂಕರಿ ದೇವಲಯದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಜಿ.ಎನ್.ಆರ್. ಮೋಹನ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net