'ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡ ಸಂಸದರಿಗೆ ಕೇಂದ್ರ ಶಿಕ್ಷಣ ಸಚಿವ ಸ್ಥಾನ, ಕನ್ನಡಿಗರು ತಲೆ ತಗ್ಗಿಸುವ ಘಟನೆ'; ಮಾಜಿ ಸಿಎಂ ಸಿದ್ದರಾಮಯ್ಯ

CM Siddaramaiah on Union Education Minister Prahlad Joshi
CM Siddaramaiah on Union Education Minister Prahlad Joshi
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮೇಂದ್ರ ಪ್ರಧಾನ್​ರ ನಂತರ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಪ್ರಹ್ಲಾದ್ ಜೋಶಿ ನೇಮಕ.
  • ಜೋಶಿ ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿರುವುದು ಕನ್ನಡಿಗರೆಲ್ಲರೂ ತಲೆತಗ್ಗಿಸುವ ವಿಚಾರ ಎಂದ ಸಿದ್ದರಾಮಯ್ಯ.
  • ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಆರ್​ಎಸ್​ಎಸ್​ನ ನಿರ್ದೇಶನದಂತೆ ಪ್ರಹ್ಲಾದ್ ಜೋಶಿ ನಡೆದುಕೊಳ್ಳಬೇಕಾಗುತ್ತದೆ.
CM Siddaramaiah on Union Education Minister Prahlad Joshi: ಕರ್ನಾಟಕದ ಸಂಸದರೊಬ್ಬರು ದೇಶದ ಶಿಕ್ಷಣ ಸಚಿವರಾದರೆಂದು ನಾವೆಲ್ಲರೂ ಹೆಮ್ಮೆ ಪಡಬೇಕಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯ ಅತ್ಯಾಚಾರಿಗಳನ್ನು ಸಮರ್ಥಿಸಿದ್ದ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್​ ಜೋಶಿ(Union Education Minister Prahlad Joshi) ಅವರನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ ಕನ್ನಡಿಗರೆಲ್ಲರೂ ತಲೆತಗ್ಗಿಸುವ ಹಾಗೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಕ್ಸ್​​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲುಂಟಾದ ಲೋಪದೋಷಗಳ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಹೋರಾಟ ನಡೆಸಿದ ಹಿನ್ನೆಲೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಿದರು. ಆ ಬೆನ್ನಲ್ಲೇ ಸಂಸದ ಪ್ರಹ್ಲಾದ್​ ಜೋಶಿ ಅವರನ್ನು ಕೇಂದ್ರ ಶಿಕ್ಷಣ ಸಚಚಿವರನ್ನಾಗಿ ನೇಮಕ ಮಾಡಲಾಯ್ತು ಆ ಬಗ್ಗೆ ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್​​ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಹ್ಲಾದ್​​-ಪ್ರಧಾನ್​ RSS ನಿರ್ದೇಶನದಂತೆ ನಡೆದುಕೊಳ್ತಾರೆ

ನಿರ್ಗಮಿತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗಿಂತ ಪ್ರಹ್ಲಾದ್ ಜೋಷಿ ಅವರು ಯಾವುದೇ ರೀತಿ ಭಿನ್ನರಲ್ಲ, ಇವರಿಬ್ಬರೂ ಸೈದ್ಧಾಂತಿಕವಾಗಿ ಅವಳಿ-ಜವಳಿಗಳು. ಇಬ್ಬರೂ ಸಂಘ ಪರಿವಾರದ ಎಬಿವಿಪಿಯಿಂದ ಪಕ್ಷಕ್ಕೆ ಬಂದವರು. ಮಹಿಳೆಯರು, ದಲಿತರು, ಬಡವರು, ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ - ಕ್ರಿಶ್ಚಿಯನರ ಬಗ್ಗೆ ಆರ್.ಎಸ್.ಎಸ್ ಹೊಂದಿರುವ ಅಭಿಪ್ರಾಯವನ್ನೇ ಹೊಂದಿದವರು. ಇದಕ್ಕಾಗಿಯೇ ಪ್ರಧಾನ್ ಅವರ ಸ್ಥಾನಕ್ಕೆ ಜೋಷಿ ಅವರನ್ನು ತಂದು ಕೂರಿಸಲಾಗಿದೆ. ಇದೊಂದು ರೀತಿ ಊದುವುದನ್ನು ಕೊಟ್ಟು ಬಾರಿಸುವುದನ್ನು ಕೊಂಡು ಬಂದಂತೆ. ಬದಲಾಗಿದ್ದು ಪಾತ್ರಧಾರಿ ಅಷ್ಟೆ, ಸೂತ್ರಧಾರಿಗಳಾದ ಆರ್​ಎಸ್​ಎಸ್​ನ ನಿರ್ದೇಶನದಂತೆ ಇವರೂ ನಡೆದುಕೊಳ್ಳಬೇಕಾಗುತ್ತದೆ.
ಗುಜರಾತ್ ಗಲಭೆಯ ಕಾಲದಲ್ಲಿ ಬಿಲ್ಕಿಸ್ ಭಾನು ಎಂಬ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರಿಗಳನ್ನು 2022ರಲ್ಲಿ ಗುಜರಾತ್ ಸರ್ಕಾರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ್ದನ್ನು ಪ್ರಹ್ಲಾದ ಜೋಷಿ ಅವರು ಸಮರ್ಥಿಸಿ ಅತ್ಯಾಚಾರಿಗಳ ಪರವಾಗಿ ಮಾತನಾಡಿದ್ದರು. ಇಂತಹವರು ಶಿಕ್ಷಣ ಸಚಿವರಾದರೆ ದೇಶದ ಶಿಕ್ಷಣ ವ್ಯವಸ್ಥೆಯ ಗತಿ ಏನಾಗಬಹುದು ಎನ್ನುವುದು ನಮ್ಮೆಲ್ಲರ ಈಗಿನ ಆತಂಕ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಾಯಿ ಮುಚ್ಚಿಸುವುದು ಅಸಾಧ್ಯ

ವಿರೋಧ ಪಕ್ಷದ ನಾಯಕರಾದ ರಾಹುಲ್​ ಗಾಂಧಿಯವವರು ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿಯವರು ಲೋಕಸಭೆಯಲ್ಲಿ ಪ್ರಹ್ಲಾದ್ ಜೋಷಿ ಅವರ ಮುಖವಾಡವನ್ನು ಕಿತ್ತೊಗೆದು ದೇಶದ ಮುಂದೆ ನಿಲ್ಲಿಸಿದ್ದಾರೆ. ಸದನದಲ್ಲಿ ಅವರ ಬಾಯಿ ಮುಚ್ಚಿಸಬಹುದು, ಆದರೆ ದೇಶದ ಕೋಟ್ಯಂತರ ಜನರ ಬಾಯಿ ಮುಚ್ಚುವುದು ಸಾಧ್ಯ ಇಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಅರ್ಹರಿಗೆ ಖಾತೆ ಹಂಚಿ

ಧರ್ಮೇಂದ್ರ ಪ್ರಧಾನ್ ಹಾದಿಯಲ್ಲಿಯೇ ಜೋಷಿ ಅವರು ಹೊರಡುವುದಕ್ಕೆ ಬಹಳ ದಿನಗಳು ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಒಂದಿಷ್ಟು ಕಾಳಜಿ ಹೊಂದಿದ್ದರೆ ತಕ್ಷಣ ಶಿಕ್ಷಣ ಖಾತೆಯನ್ನು ಜೋಷಿ ಅವರಿಂದ ಕಿತ್ತುಕೊಂಡು, ಯಾರಾದರೂ ಅರ್ಹರಿದ್ದರೆ ಅಂತವರಿಗೆ ಈ ಮಹತ್ವದ ಖಾತೆಯ ಹೊಣೆ ವಹಿಸಿ ಕೊಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net