ಸರ್ಕಾರಿ ಕಚೇರಿ ಕ್ಯಾಂಟೀನ್ ಗಳಲ್ಲಿ ಅನೈರ್ಮಲ್ಯ, ಜಿರಳೆಗಳು

Food Safety Department officials inspect Arogya Soudha canteen
Food Safety Department officials inspect Arogya Soudha canteen
Published on

ಪ್ರಮುಖ ಮುಖ್ಯಾಂಶಗಳು

  • - ವಿಧಾನಸೌಧ, ವಿಕಾಸಸೌಧ, ಆರೋಗ್ಯಸೌಧದಲ್ಲೂ ಪರಿಶೀಲನೆ
  • - ಅವಧಿ ಮೀರಿದ ಆಹಾರ ಪದಾರ್ಥಗಳ ಪತ್ತೆ
  • - ನೈರ್ಮಲ್ಯ ಕಾಪಾಡದ ಎಂಎಸ್ ಬಿಲ್ಡಿಂಗ್ ಆವರಣದ ಹೋಟೆಲ್ ಬಂದ್

ಬೆಂಗಳೂರು:

ವಿಧಾನಸೌಧ, ವಿಕಾಸಸೌಧ, ಆರೋಗ್ಯಸೌಧ, ಶಾಸಕರ ಭವನ, ಬಹುಮಹಡಿ ಕಟ್ಟಡ (ಎಂಎಸ್ ಬಿಲ್ಡಿಂಗ್) ಆವರಣದಲ್ಲಿನ ಕ್ಯಾಂಟೀನ್‌ಗಳ ಪರಿಶೀಲನೆಯಲ್ಲಿ ನೈರ್ಮಲ್ಯ ಕಾಪಾಡದಿರುವುದು ಕಂಡುಬಂದಿದ್ದು, ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಆಹಾರ ತಯಾರಿಸುವ ಕ್ಯಾಂಟೀನ್‌ನಲ್ಲಿದ್ದ ಜಿರಳೆಗಳ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಕಳೆದೊಂದು ವಾರದಿಂದ ನಗರದ ತಾರಾ ಹೋಟೆಲ್‌ಗಳು, ಆಹಾರ ದಾಸ್ತಾನು ಮಳಿಗೆಗಳು ಹಾಗೂ ಇಂದಿರಾ ಕ್ಯಾಟೀನ್ ಆಹಾರ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಬುಧವಾರವೂ ಕಾರ್ಯಚರಣೆ ಮುಂದುವರೆಸಿದ್ದು, ಸರ್ಕಾರಿ ಕಟ್ಟಡಗಳಲ್ಲಿನ ಕ್ಯಾಂಟೀನ್‌ಗಳ ಪರಿಶೀಲನೆ ನಡೆಸಿದರು. ಈ ವೇಳೆ ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳದ ಎಂಎಸ್ ಬಿಲ್ಡಿಂಗ್ ಆವರಣದ ಹೋಟೆಲ್‌ಗೆ ಬೀಗ ಹಾಕಲಾಗಿದೆ. ಉಳಿದಂತೆ ಇತರೆ ಕ್ಯಾಂಟೀನ್‌ಗಳಿಗೆ ನೋಟಿಸ್ ನೀಡಿ ನಿರ್ಣಯಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗಿದೆ.

ಅವಧಿ ಮೀರಿದ ಪದಾರ್ಥಗಳ ಪತ್ತೆ:

ಆರೋಗ್ಯಸೌಧದ ಕ್ಯಾಂಟೀನ್‌ನಲ್ಲಿ ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡದಿರುವುದು ಕಂಡುಬಂದಿದ್ದು, ಅವಧಿ ಮುಗಿದ ಇಡ್ಲಿ ರವಾ, ಕೋಕೋನಟ್ ಪೌಡರ್ ಪತ್ತೆಯಾಗಿದೆ. ಆಹಾರ ಪದಾರ್ಥಗಳ ಸಂಗ್ರಹಣೆಯಲ್ಲಿ ಎ್ಎಸ್‌ಎಸ್‌ಎಐ ಮಾರ್ಗಸೂಚಿ ಪಾಲಿಸದಿರುವುದು, ಕೀಟಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ. 500 ಗ್ರಾಂ ಸೂಜಿ ರವಾ ಮತ್ತು 500 ಗ್ರಾಂ ಕೋಕೋನಟ್ ಪೌಡರ್ ಜಪ್ತಿ ಮಾಡಲಾಗಿದೆ. ಶಾಸಕರ ಭವನದಲ್ಲಿನ ಮಲ್ಲಿಗೆ ಕ್ಯಾಂಟೀನ್‌ನಲ್ಲಿ ಆಹಾರ ತಯಾರಿಕೆಯಲ್ಲಿ ನೈರ್ಮಲ್ಯ ಕಾಪಾಡದಿರುವುದು, ಜಿರಳೆಗಳು ಕಂಡುಬಂದಿವೆ. ಜತೆಗೆ ಕೀಟಗಳ ನಿಯಂತ್ರಣಕ್ಕೆ ಕ್ರಮ ವಹಿಸದಿರುವುದು ಪತ್ತೆಯಾಗಿದೆ.


ನಂದಿನಿ ಪಾರ್ಲರ್‌ಗೆ ನೋಟಿಸ್

ನಂದಿನಿ ಪಾರ್ಲರ್‌ಗೆ ಭೇಟಿ ನೀಡಿದಾಗ, ಲೇಬಲಿಂಗ್‌ಗೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದಿದ್ದು, ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಎಂಎಸ್ ಬಿಲ್ಡಿಂಗ್‌ನ ಆವರಣದಲ್ಲಿನ ಹೋಟೆಲ್‌ಗೆ ಅನೈರ್ಮಲ್ಯಕ್ಕೆ ಸಂಬಂಧಿಸಿದ ಲೋಪಗಳನ್ನು ಸರಿಪಡಿಸಿಕೊಂಡ ಬಳಿಕವಷ್ಟೇ ಅನುಮತಿ ಪಡೆದು ಹೋಟೆಲ್ ಪುನರಾರಂಭಿಸುವುದಾಗಿ ಮುಚ್ಚಳಿಕೆ ಪಡೆಯಲಾಗಿದೆ. ಆಹಾರ ಉದ್ದಿಮೆದಾರರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಸಂಬಂಧಿತ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದ್ದು, ಆಹಾರದ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ, ಸೂಕ್ತ ಸಂಗ್ರಹಣೆ, ಲೇಬಲಿಂಗ್ ಮತ್ತು ಆಹಾರ ನಿರ್ವಹಣಾ ಕ್ರಮಗಳಲ್ಲಿ ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದಲ್ಲಿ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net