ಮರಗೋಡಿನಲ್ಲಿ ಕಾನಡ್ಕ ಕುಟುಂಬದ ವತಿಯಿಂದ ಆಯೋಜಿಸಿದ್ದ 12ನೇ ವರ್ಷದ ಯುಗಾದಿ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಸ್ಪರ್ಧಿಗಳು.
Published on:
Copied
Follow Us
ಮಡಿಕೇರಿ: ಕಾನಡ್ಕ ಕುಟುಂಬದ ವತಿಯಿಂದ 12ನೇ ವರ್ಷದ ಯುಗಾದಿ ಕ್ರೀಡಾಕೂಟ ಭಾನುವಾರ ಸಂಭ್ರಮದಿಂದ ನಡೆಯಿತು.
ಮರಗೋಡಿನ ಕಾನಡ್ಕ ಐನ್‌ಮನೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಚೆರಿಯಮನೆ ರತ್ನಕುಮಾರ್, ಯುಗಾದಿ ಹಬ್ಬವು ಹಿಂದೂಗಳಿಗೆ ಹೊಸ ವಷರ್ದ ಪವಿತ್ರ ದಿನವಾಗಿದೆ. ಈ ಶುಭ ಸಂದರ್ಭದಲ್ಲಿ ಹೊಸ ಗುರಿಗಳ ಸಾಧನೆಗೆ ನಾವುಗಳು ಕಾರ್ಯಪ್ರವೃತ್ತರಾಗಬೇಕು ಎಂದರು.
ಮರಗೋಡಿನ ವಿವೇಕಾನಂದ ಯುವಕ ಸಂಘದ ಮಾಜಿ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ, ಹಬ್ಬಗಳ ಸಂದರ್ಭ ಕ್ರೀಡಾಕೂಟಗಳನ್ನು ಆಯೋಜಿಸಿದರೆ ಹಬ್ಬದ ಮೆರುಗು ಮತ್ತಷ್ಟು ಹೆಚ್ಚಾಗುತ್ತದೆ. ಕ್ರೀಡೆಯಿಂದ ದೈಹಿಕ, ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಅಲ್ಲದೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಕಾನಡ್ಕ ಕುಟುಂಬದ ಹಿರಿಯ ಉಲ್ಲಾಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕಾನಡ್ಕ ದೇವಯ್ಯ, ವಿಷ್ಮಾಶ್ಮ, ಪೂಜಾ, ಸಂಧ್ಯಾ, ಲಕ್ಷಿತಾ, ಕಾನಡ್ಕ ಪ್ರಸಾದ್, ಕಾನಡ್ಕ ಹನೀಶ್, ಕಾನಡ್ಕ ಚರಣ್ ಮತ್ತಿತರರು ಇದ್ದರು.
ಪುಟಾಣಿಗಳಿಂದ ಹಿರಿಯರವರೆಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಗಳಿಗೆ ಕೃಷ್ಣ-ರುಕ್ಮಿಣಿ ಓಟ, ರಾಮ-ಸೀತೆ ಓಟ, ಹನುಮಂತನ ಓಟ, ಬಾಲ್ ಬ್ಯಾಲೆನ್ಸ್ ಓಟ, ಹಗ್ಗಜಗ್ಗಾಟ ಹೀಗೆ ವಿವಿಧ ಬಗೆಯ 21 ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕುಟುಂಬದ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಗೌಡ ಅಕಾಡೆಮಿ ಮಾಜಿ ಅಧ್ಯಕ್ಷ ತುಂತಜೆ ಗಣೇಶ್ ಮಾತೃಭಾಷೆಯಾಗಿರುವ ಅರೆಭಾಷೆ ೆಯನ್ನು ಪ್ರತಿಯೊಬ್ಬರೂ ಮಾತನಾಡಬೇಕು. ಮಕ್ಕಳಿಗೆ ಅರೆಷೆ ಆಚಾರ, ವಿಚಾರ ಮತ್ತು ಸಂಸ್ಕೃತಿ ಕಲಿಸಬೇಕು. ಮನೆಯಲ್ಲಿ ಅರೆಭಾಷೆಯನ್ನೇ ಮಾತನಾಡಬೇಕು. ಒಳ್ಳೆಯ ಸಂಸ್ಕಾರವನ್ನು ಕಲಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಆ ಮೂಲಕ ಅರೆಭಾಷೆ ಗೌಡ ಜನಾಂಗದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಕಟ್ಟೆಮಾಡಿನ ಕಾಫಿ ಬೆಳೆಗಾರ ತೋಟಂಬೈಲು ಪ್ರದೀಪ್, ಮರಗೋಡಿನ ಮಾಜಿ ಯೋಧ ಮುಕ್ಕಾಟಿರ ಗಿರೀಶ್ ಮಾತನಾಡಿದರು. ಮರಗೋಡಿನ ಕಾಫಿ ಬೆಳೆಗಾರ ಸುರೇಶ್ ಉಪಸ್ಥಿತರಿದ್ದರು. ಕಾನಡ್ಕ ಉಲ್ಲಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.
10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕಾನಡ್ಕ ದನ್ವಿ ಹಾಗೂ ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕಾನಡ್ಕ ದರ್ಶಿನಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.