ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಸ್ಸಾಂ ಮೂಲದ 35 ವರ್ಷದ ಸಫಿಕುಲ್ ಇಸ್ಲಾಂ, 25 ವರ್ಷದ ಮೊಹಮ್ಮದ್ ರಫಿಕುಲ್ ಅಲಿ ಬಂಧಿತ ಆರೋಪಿಗಳಾಗಿದ್ದು, ಪ್ರಸ್ತುತ ತಾಲೂಕಿನ ಆರೇಹಳ್ಳಿ ಹೋಬಳಿಯ ಲಿಂಗಾಪುರ ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸವಾಗಿದ್ದರು. ಗಾಂಜಾ ಮಾರಾಟ ಮಾಡುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶೋಭಾ ಭರಮಣ್ಣ ಮತ್ತು ಸಿಬ್ಬಂದಿ ಸೋಮವಾರ ಲಿಂಗಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ 325 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿ ಸಂದರ್ಭದಲ್ಲಿ ಅರೇಹಳ್ಳಿ ಉಪ ತಹಸೀಲ್ದಾರ್ ಪ್ರದೀಪ್, ಪೊಲೀಸ್ ಸಿಬ್ಬಂದಿ ಸುಪ್ರೀತ್, ಸಂಶುದ್ದೀನ್ ಸೊನ್ನದ್, ಮಂಜುನಾಥ್, ದರ್ಶನ್ ಇದ್ದರು.