ಆಗುಂಬೆಗೆ ಸುರಂಗ

 Tunnel to Agumbe
Tunnel to Agumbe
Published on

ಶ್ರವಣ್ ಕುಮಾರ್ ನಾಳ, ಮಂಗಳೂರು

ಮಲೆನಾಡು ಮತ್ತು ಕರಾವಳಿಯನ್ನು ಜೋಡಿಸುವ ಪಶ್ಚಿಮಘಟ್ಟಗಳ ಸೂಕ್ಷ್ಮ ಹಾಗೂ ಸುಂದರ ಕೊಂಡಿ ‘ಆಗುಂಬೆ ಘಾಟಿ’. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಕಿರಿದಾದ ಘಾಟಿ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಮತ್ತು ಸುಗಮ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ‘ಆಗುಂಬೆ ಸುರಂಗ ಮಾರ್ಗ’ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಹಸಿರು ವಲಯದಲ್ಲಿ ಸಂಭವಿಸುತ್ತಿರುವ ಸರಣಿ ಗುಡ್ಡ ಕುಸಿತಗಳ ಹಿನ್ನೆಲೆಯಲ್ಲಿ, ಈ ಸುರಂಗ ಮಾರ್ಗ ಎಷ್ಟು ಸುರಕ್ಷಿತ ಎಂಬ ಆತಂಕಕಾರಿ ಪ್ರಶ್ನೆ ಎದ್ದಿದೆ. ಪರಿಸರ ಸಂರಕ್ಷಣೆ ಮತ್ತು ಭೌತಿಕ ಅಭಿವೃದ್ಧಿಯ ನಡುವಿನ ಈ ಸಂಘರ್ಷ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪಶ್ಚಿಮಘಟ್ಟ ಶ್ರೇಣಿಯ ರುದ್ರ ರಮಣೀಯ ವಿಸ್ಮಯ ತಾಣ ತೀರ್ಥಹಳ್ಳಿ ತಾಲೂಕಿನ ಆಗುಂಬೆ. ನೈಋತ್ಯ ಮುಂಗಾರು ಮಾರುತಗಳಿಗೆ ಇದು ತಡೆಗೋಡೆ. ದಕ್ಷಿಣದ ಚಿರಾಪುಂಜಿ ಎನಿಸಿಕೊಂಡಿರುವ ಆಗುಂಬೆ ಘಾಟಿಯಲ್ಲಿ 14 ಹೇರ್ ಪಿನ್ ತಿರುವುಗಳಿವೆ. ಮಳೆಗಾಲದಲ್ಲಿ ದಟ್ಟ ಮಂಜು ಕವಿದು, ವಾಹನಗಳ ಚಾಲನೆ ಸಾಹಸಮಯ. ಸಮುದ್ರ ಮಟ್ಟದಿಂದ 826 ಮೀಟರ್ ಎತ್ತರದಲ್ಲಿದ್ದು, ಇಲ್ಲಿನ ಸೂರ್ಯಾಸ್ತ ಕಣ್ಮನ ತಣಿಸುತ್ತದೆ. ಭಾರತದ ಏಕೈಕ ಮಳೆಕಾಡು ಸಂಶೋಧನಾ ಕೇಂದ್ರವಿದೆ. ಒನಕೆ ಅಬ್ಬಿ, ಬರ್ಕಣ, ಜೋಗಿಗುಂಡಿ ಸೇರಿ ಹಲವು ಜಲಪಾತಗಳಿವೆ. 5 ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದ, 139 ಸಸ್ತನಿಗಳು, 508 ಪಕ್ಷಿಗಳು, 179 ಉಭಯಚರ ಪ್ರಭೇದಗಳು, 650 ಜಾತಿಯ ವೃಕ್ಷಗಳು ಪಶ್ಚಿಮಘಟ್ಟದಲ್ಲಿದ್ದು, ಸಿಂಹಬಾಲದ ಸಿಂಗಳೀಕಗಳು, ಕಾಳಿಂಗ ಸರ್ಪಗಳಿಗೆ ಆಗುಂಬೆಯೇ ಆವಾಸ. ಜಗತ್ತಿನ ಜೀವ ವೈವಿಧ್ಯದ 8 ಹಾಟ್ ಸ್ಪಾಟ್ ಗಳಲ್ಲಿ ಪಶ್ಚಿಮಘಟ್ಟವೂ ಒಂದು.
ರಾಷ್ಟ್ರೀಯ ಹೆದ್ದಾರಿ 169ಎ ಮೇಲ್ದರ್ಜೆಗೆ: ಆಗುಂಬೆ ಘಾಟಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ಎ (ಕಿ.ಮೀ. 30.75ರಿಂದ 51.60) ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರ 2.33 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲು ಇತ್ತೀಚೆಗೆ ಟೆಂಡರ್ ಆಹ್ವಾನಿಸಿದೆ. ವಿಶೇಷವಾಗಿ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನ, ಭೂ-ತಾಂತ್ರಿಕ ಪರಿಶೀಲನೆಗಳು ಮತ್ತು ತಜ್ಞರ ನೇಮಕಾತಿ ಒಳಗೊಂಡಿರುವುದು ಈ ಘೋಷಣೆಯ ಮಹತ್ವವನ್ನು ಹೆಚ್ಚಿಸಿದೆ. ದಶಕಗಳಿಂದ ಜನರು ಎದುರಿಸುತ್ತಿದ್ದ ಅಪಾಯಕಾರಿ ಪ್ರಯಾಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಇದು ಮೊದಲ ನಿರ್ಣಾಯಕ ಹೆಜ್ಜೆ. ಈ ಯೋಜನೆ ಮಲೆನಾಡು-ಕರಾವಳಿ ಜಿಲ್ಲೆಗಳ ಸಂಪರ್ಕ ಸುಧಾರಿಸಿ, ಸುರಕ್ಷತೆ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಸ್ಥಳೀಯ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ ಎಂಬುವುದು ಕೇಂದ್ರದ ನಿಲುವು.

ತಜ್ಞರ ಎಚ್ಚರಿಕೆ

ಒಂದು ಕಾಲದಲ್ಲಿ ಭೂಕುಸಿತಗಳು ಕೇವಲ ಅತಿವೃಷ್ಟಿಯಿಂದ ಸಂಭವಿಸುವ ನೈಸರ್ಗಿಕ ವಿಪತ್ತುಗಳಾಗಿದ್ದವು. ಆದರೆ ಇತ್ತೀಚೆಗೆ ಕೊಡಗು, ಶಿರೂರು ಅಥವಾ ಹುಲಿಕಲ್ ಘಾಟಿಗಳಲ್ಲಿ ನಡೆಯುತ್ತಿರುವ ದುರಂತಗಳನ್ನು ಗಮನಿಸಿದರೆ, ಇವೆಲ್ಲವೂ ಮಾನವ ನಿರ್ಮಿತ ಎನ್ನುವುದು ಸ್ಪಷ್ಟ. ರಸ್ತೆ ವಿಸ್ತರಣೆ, ಅವೈಜ್ಞಾನಿಕ ಗಣಿಗಾರಿಕೆ, ರೈಲ್ವೆ ಲೇನ್ ಮತ್ತು ಸುರಂಗ ಮಾರ್ಗಗಳಿಗಾಗಿ ಗುಡ್ಡಗಳನ್ನು ಅಡ್ಡಾದಿಡ್ಡಿ ಕತ್ತರಿಸುತ್ತಿರುವುದೇ ಇಂದಿನ ಅನಾಹುತಗಳಿಗೆ ಮೂಲ ಕಾರಣ. ಆಗುಂಬೆ ಘಾಟಿ ಕಡಿದಾದ ತಿರುವುಗಳನ್ನು ಹೊಂದಿದ್ದು, ಇಲ್ಲಿನ ಮಣ್ಣು ಸಡಿಲವಾಗಿದೆ ಮತ್ತು ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾಗಿದೆ. ಇಂತಹ ಸೂಕ್ಷ್ಮ ಜಾಗದಲ್ಲಿ ಸುರಂಗ ನಿರ್ಮಿಸಲು ಡೈನಮೈಟ್ ಸ್ಫೋಟಗಳನ್ನು ಮಾಡುವುದರಿಂದ ಇಡೀ ಪರ್ವತ ಶ್ರೇಣಿಯ ಆಂತರಿಕ ಸಮತೋಲನ ಏರುಪೇರಾಗುತ್ತದೆ. ಮಳೆಗಾಲದಲ್ಲಿ ಸುರಂಗದ ಮೇಲ್ಭಾಗದ ಗುಡ್ಡಗಳು ಕುಸಿದು ಭೀಕರ ದುರಂತ ಸಂಭವಿಸುವ ಸಾಧ್ಯತೆ ಬಗ್ಗೆ ಪರಿಸರ ತಜ್ಞರು ಎಚ್ಚರಿಸಿದ್ದಾರೆ.

ತುರ್ತು ಸೇವೆಗಳ ಸಂಜೀವಿನಿ

ಆಗುಂಬೆ ಘಾಟಿ ಕೇವಲ ಪ್ರವಾಸಿತಾಣ ಅಥವಾ ಮಲೆನಾಡು-ಕರಾವಳಿಯನ್ನು ಜೋಡಿಸುವ ಸಾಮಾನ್ಯ ರಸ್ತೆಯಲ್ಲ. ಇದು ದಿನಂಪ್ರತಿ ಸಂಚರಿಸುವ ಸಾವಿರಾರು ಜನರಿಗೆ, ಅದರಲ್ಲೂ ವಿಶೇಷವಾಗಿ ತುರ್ತು ವೈದ್ಯಕೀಯ ಚಿಕಿತ್ಸೆ ಬಯಸುವ ರೋಗಿಗಳಿಗೆ ಮಹತ್ವದ ‘ಸಂಜೀವಿನಿ ಮಾರ್ಗ’ವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿ ಮಲೆನಾಡು ಮತ್ತು ಬಯಲುಸೀಮೆಯ ಜಿಲ್ಲೆಗಳಿಂದ ಸುಧಾರಿತ ಚಿಕಿತ್ಸೆಗಾಗಿ ಕರಾವಳಿಯ ಮಣಿಪಾಲ ಆಸ್ಪತ್ರೆಗೆ ಧಾವಿಸುವ ನೂರಾರು ಆಂಬುಲೆನ್ಸ್ ಗಳಿಗೆ ಇದೇ ಪ್ರಮುಖ ದಾರಿಯಾಗಿದೆ. ಜೀವನ್ಮರಣದ ನಡುವೆ ಹೋರಾಟ ನಡೆಸುವ ರೋಗಿಗಳನ್ನು ಹೊತ್ತ ಆಂಬುಲೆನ್ಸ್ ಗಳು ಈ ಕಡಿದಾದ ಘಾಟಿಯ ಮೂಲಕವೇ ಸಂಚರಿಸಿ ಲಕ್ಷಾಂತರ ಜೀವಗಳ ಉಸಿರು ಉಳಿಸುತ್ತವೆ. ಮಳೆಗಾಲದ ಭೂಕುಸಿತ ಅಥವಾ ಅತಿಯಾದ ಸಂಚಾರ ದಟ್ಟಣೆಯಿಂದಾಗಿ ಈ ಮಾರ್ಗ ಬಂದ್ ಆದರೆ, ತುರ್ತು ಚಿಕಿತ್ಸೆ ಸಿಗದೆ ದಾರಿಯಲ್ಲೇ ಪ್ರಾಣಪಕ್ಷಿ ಹಾರಿಹೋಗುವ ಭೀತಿ ಇರುತ್ತದೆ. ಆದ್ದರಿಂದ, ಘಾಟಿಯ ಸುರಕ್ಷೆ ಮತ್ತು ಸುಗಮ ಸಂಚಾರ ಕೇವಲ ರಸ್ತೆ ಅಭಿವೃದ್ಧಿಯ ವಿಷಯವಲ್ಲ. ಅದು ಮನುಷ್ಯನ ಬದುಕುವ ಹಕ್ಕಿಗೆ ಸಂಬಂಧಿಸಿದ ಜೀವನ್ಮರಣದ ವಿಷಯವೂ ಆಗಿದೆ.

ಪರಿಹಾರದ ದಾರಿಗಳೇನು?

ಆಗುಂಬೆ ಘಾಟಿಯ ಆಧುನೀಕರಣ ಮತ್ತು ವಾಹನ ಸಂಚಾರ ಸುಗಮಗೊಳಿಸುವುದು ಅಗತ್ಯವೇನೋ ನಿಜ. ಅಭಿವೃದ್ಧಿ ಮತ್ತು ಪರಿಸರ ಎರಡನ್ನೂ ಕಾಪಾಡಲು ಹಲವು ಸಮತೋಲಿತ ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದು. ಆಗುಂಬೆ ಘಾಟಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಈಗಾಗಲೇ ಇರುವ ತೀರ್ಥಹಳ್ಳಿ-ಉಡುಪಿ ಅಥವಾ ಇತರ ಪರ್ಯಾಯ ರಸ್ತೆಗಳನ್ನು ಪರಿಸರಕ್ಕೆ ಹಾನಿಯಾಗದಂತೆ ದ್ವಿಪಥಗೊಳಿಸಿ ಅಭಿವೃದ್ಧಿಪಡಿಸಬಹುದು. ಆಗುಂಬೆ ಘಾಟಿಯಲ್ಲಿ ದೊಡ್ಡ ಮಲ್ಟಿ-ಆಕ್ಸಲ್ ಲಾರಿಗಳು ಮತ್ತು ಬಸ್ ಗಳ ಸಂಚಾರವನ್ನು ಶಾಶ್ವತವಾಗಿ ನಿರ್ಬಂಧಿಸಿ, ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಬೇಕು. ಸುರಂಗ ಮಾಡಲೇಬೇಕಾದ ಅನಿವಾರ್ಯತೆಯಿದ್ದರೆ, ಹಿಮಾಲಯದ ಸೂಕ್ಷ್ಮವಲಯಗಳಲ್ಲಿ ಬಳಸುವ ‘ಟನಲ್ ಬೋರಿಂಗ್ ಮಷಿನ್’ (ಟಿಬಿಎಂ) ನಂತಹ ಅತ್ಯಾಧುನಿಕ, ಕನಿಷ್ಠ ಕಂಪನ ಉಂಟುಮಾಡುವ ತಂತ್ರಜ್ಞಾನ ಬಳಸಬೇಕು. ಬ್ಲಾಸ್ಟಿಂಗ್ ಪದ್ಧತಿಯನ್ನು ಸಂಪೂರ್ಣ ಕೈಬಿಡಬೇಕು.

ಕ್ಯಾಂಟಿಲಿವರ್ ತಂತ್ರಜ್ಞಾನ

ಆಗುಂಬೆ ಘಾಟಿಯಲ್ಲಿ ಭೂಕುಸಿತ ತಡೆಯಲು ಮತ್ತು ಪರಿಸರ ರಕ್ಷಿಸಲು ಹೆದ್ದಾರಿ ಇಲಾಖೆಯ ಇಂಜಿನಿಯರ್ ಗಳು ಕ್ಯಾಂಟಿಲಿವರ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಈ ಭಾಗದಲ್ಲಿ ರಸ್ತೆ ವಿಸ್ತರಣೆಗಾಗಿ ಗುಡ್ಡಗಳನ್ನು ಅಗೆಯುವುದು ಭೂಕುಸಿತಕ್ಕೆ ಆಹ್ವಾನ ನೀಡಿದಂತೆ. ಹಾಗಾಗಿ, ಬೆಟ್ಟವನ್ನು ಕತ್ತರಿಸುವ ಬದಲಾಗಿ ರಸ್ತೆಯ ಪಾರ್ಶ್ವದಲ್ಲಿ ಬಲಿಷ್ಠ ಪಿಲ್ಲರ್ ಗಳನ್ನು ನಿರ್ಮಿಸಿ, ಅವುಗಳ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಗಳನ್ನು ಚಾಚುವ ಮೂಲಕ ರಸ್ತೆ ವಿಸ್ತರಿಸಲು ಯೋಜಿಸಲಾಗಿದೆ. ಇದರಿಂದ ಬೆಟ್ಟದ ನೈಸರ್ಗಿಕ ರಚನೆಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೆ, ಮರಗಳ ಮಾರಣಹೋಮ ಮತ್ತು ಮಣ್ಣಿನ ಸವೆತವನ್ನು ಗಣನೀಯವಾಗಿ ತಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ. ಈಗಾಗಲೇ ಮಹಾರಾಷ್ಟ್ರದ ಮಲ್ಶೇಜ್ ಹಾಗೂ ಉತ್ತರಾಖಂಡದ ಘಾಟಿ ಪ್ರದೇಶಗಳಲ್ಲಿ ಈ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ರಸ್ತೆ ವಿಸ್ತರಣೆ ಮಾಡಲಾಗಿದೆ. ಆಗುಂಬೆ ಘಾಟಿಯು ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಗೆ ಬರುವುದರಿಂದ ಈ ಯೋಜನೆಗೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಕಡ್ಡಾಯ. ಕ್ಯಾಂಟಿಲಿವರ್ ತಂತ್ರಜ್ಞಾನವು ಪರಿಸರಸ್ನೇಹಿಯಾಗಿದ್ದರೂ, ಕಾಮಗಾರಿ ನಡೆಯುವ ಸಂದರ್ಭ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸುವ ದೊಡ್ಡ ಜವಾಬ್ದಾರಿ ಇಲಾಖೆಯ ಮೇಲಿದೆ.
ಸಮತೋಲಿತ ಮಾರ್ಗ ಅಗತ್ಯ
ಅಶ್ವತ್ ಎಸ್.ಎಲ್. ಸಕ್ರೆಬೈಲ್, ಶಿಕ್ಷಣ ತಜ್ಞರು
ಈ ಹಿಂದೆ ಪ್ರೇಮಸಂಜೆಯನ್ನು ನೆನೆದು ಮಂಜಿನ ಮುತ್ತುಗಳ ನಡುವೆ ಆಗುಂಬೆಯಲ್ಲಿ ಸಂಚರಿಸುವುದೇ ರೋಮಾಂಚನ ಅನುಭವವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹುಲಿಕಲ್ಲು ಘಾಟಿಯ ದುರಸ್ತಿ ಸೇರಿ ಪ್ರವಾಸಿಗರ ಮತ್ತು ಜನದಟ್ಟಣೆಯ ಕಾರಣ ಸಂಚಾರ ಬಹಳಷ್ಟು ಕಷ್ಟಕರವಾಗಿದೆ. ಪ್ರಯಾಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತಿದೆ. ಆಧುನಿಕ ಅಭಿವೃದ್ಧಿ ಪಥದ ಈ ಹಂತದಲ್ಲಿ ಆಗುಂಬೆ ಘಾಟಿಯ ಉನ್ನತೀಕರಣ ಮತ್ತು ಆಧುನೀಕರಣವೂ ಅಗತ್ಯವೆಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗ ಪ್ರಸ್ತಾಪದಲ್ಲಿರುವ ಸುರಂಗ ಮಾರ್ಗ ಯೋಜನೆ ಆದಷ್ಟು ಬೇಗ ಜಾರಿಯಾದರೆ ಉತ್ತಮ. ಬಹಳಷ್ಟು ಸಸ್ಯ ಪ್ರಭೇದಗಳು ಮತ್ತು ವಿಶಿಷ್ಟ ಪ್ರಾಣಿ ಸಂಕುಲಗಳನ್ನು ಒಳಗೊಂಡಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಆಗುಂಬೆಯನ್ನು ಜೀವವೈವಿಧ್ಯದ ಸ್ವರ್ಗಭೂಮಿ ಎಂದೇ ಕರೆಯಬಹುದು. ಆದ್ದರಿಂದ ಅಲ್ಲಿನ ಆಧುನೀಕರಣ, ಸುರಂಗ ಮಾರ್ಗ, ರಸ್ತೆ ವಿಸ್ತರಣೆ ಅಥವಾ ಕೇಬಲ್ ರಸ್ತೆ ಯೋಜನೆಗಳು ಒಂದೆಡೆ ಪರಿಸರಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದ್ದರೂ, ಮತ್ತೊಂದೆಡೆ ಸಂಚಾರ ಸುಗಮತೆ ಹಾಗೂ ಆಧುನಿಕ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಬದಲಾವಣೆಯನ್ನು ತರಬಲ್ಲವು. ಹೆಚ್ಚುತ್ತಿರುವ ಜನಸಂಖ್ಯೆ, ವಾಹನಗಳ ಸಂಖ್ಯೆ ಮತ್ತು ಸಂಚಾರದ ಒತ್ತಡವನ್ನು ಗಮನಿಸಿದಾಗ, ಮೂಲಸೌಕರ್ಯಗಳ ಅಭಿವೃದ್ಧಿಯೂ ಕಾಲದ ಅವಶ್ಯಕತೆಯಾಗಿದೆ. ಹೀಗಾಗಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಈ ಎರಡರ ನಡುವೆ ಸಮತೋಲನ ಸಾಧಿಸುವ ದೃಷ್ಟಿಕೋನವೇ ಇಂದಿನ ಸಂದರ್ಭಕ್ಕೆ ಸೂಕ್ತವಾದ ಮಾರ್ಗವಾಗಿದೆ. ದಿನಂಪ್ರತಿ ಆಗುಂಬೆ ಘಾಟಿಯಲ್ಲಿ ಸಂಚಾರ ಮಾಡುವ ಸಾವಿರಾರು ಜನರಿಗೆ, ಕರಾವಳಿ ಮತ್ತು ಮಲೆನಾಡನ್ನು ಜೋಡಿಸುವ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಈ ಘಾಟಿ ಮಹತ್ವದ್ದಾಗಿದೆ. ಅದರಲ್ಲೂ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ನಿರಂತರ ಸಂಚರಿಸುವ ನೂರಾರು ರೋಗಿಗಳಿಗೆ ಪ್ರಮುಖ ಮಾರ್ಗ. ಆದ್ದರಿಂದ ಈ ಯೋಜನೆ ಸಾಕಾರಗೊಳ್ಳುವುದು ಅಗತ್ಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net