ಬಿಡಾಡಿ ದನಗಳ ಹಾವಳಿ - ವಾಹನ ಸವಾರರಿಗೆ ಜೀವ ಭಯ

ಸಿರವಾರ ಪಟ್ಟಣದ ರಾಯಚೂರು-ಲಿಂಗಸುಗೂರು ಮುಖ್ಯರಸ್ತೆ ಮೇಲೆ ಮಲಗಿರುವ ಬಿಡಾಡಿ ದನಗಳು.
ಸಿರವಾರ ಪಟ್ಟಣದ ರಾಯಚೂರು-ಲಿಂಗಸುಗೂರು ಮುಖ್ಯರಸ್ತೆ ಮೇಲೆ ಮಲಗಿರುವ ಬಿಡಾಡಿ ದನಗಳು.
Published on

ಪ್ರಮುಖ ಮುಖ್ಯಾಂಶಗಳು

  • ಸಿರವಾರದಲ್ಲಿ ಬಿಡಾಡಿ ದನಗಳ ಹಾವಳಿ
  • ಮುಖ್ಯರಸ್ತೆ ಮಧ್ಯೆ ಮಲಗುವ ಜಾನುವಾರು
ಸಿರವಾರ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಮುಖ್ಯರಸ್ತೆಯ ಎಲ್ಲೆಂದರಲ್ಲಿ ಮಲಗುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. 
ದನಗಳ ಮಾಲೀಕರ ನಿರ್ಲಕ್ಷೃದಿಂದ ರಸ್ತೆಗಳೇ ಜಾನುವಾರುಗಳ ವಾಸಸ್ಥಾನವಾಗಿದೆ. ಬಸ್ ನಿಲ್ದಾಣ, ಹಳೇ ಪಂಚಾಯಿತಿ ಕಚೇರಿ ಮುಂದೆ ಮತ್ತು ಎಪಿಎಂಸಿ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಏಕಾಏಕಿ ಎದ್ದು ವಾಹನ ಸವಾರರಿಗೆ ಡಿಕ್ಕಿ ಹೊಡೆಯುತ್ತಿವೆ. ಇದರಿಂದ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಪ್ರಕರಣಗಳು ಮರುಕಳಿಸುತ್ತಿದ್ದು, ಜೀವ ಭಯದಲ್ಲಿ ಸಂಚರಿಸಬೇಕಿದೆ. 
ಭಾರಿ ಗಾತ್ರದ ಲಾರಿ, ಬಸ್‌ಗಳ ಚಕ್ರ ಹರಿದ ಪರಿಣಾಮ ಬಿಡಾಡಿ ದನಗಳೂ ಗಾಯಗೊಳ್ಳುವುದು ಸಾಮಾನ್ಯವಾಗಿದೆ. ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲದ ವೇಳೆ ಮುಖ್ಯರಸ್ತೆ ಮೇಲೆ ದನಗಳು ಮಲಗಿದ್ದರೆ ಕಾಣುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಚಾಲಕರ ಸ್ಥಿತಿ ದೇವರ ಬಲ್ಲ ಎನ್ನುವಂತಾಗಿದೆ. 
ಮುಖ್ಯರಸ್ತೆಯ ಕಾಮಗಾರಿ ಮತ್ತು ಕುಡಿವ ನೀರಿನ ಪೈಪ್‌ಲೈನ್‌ಗಾಗಿ ವಿವಿಧೆಡೆ ರಸ್ತೆ ಅಗೆಯಲಾಗಿದೆ. ರಸ್ತೆ ಮಧ್ಯದಲ್ಲಿ ಜಾನುವಾರು ಮಲಗಿದ್ದರೆ ವಾಹನಗಳು ರಸ್ತೆಗಾಗಿ ಅಗೆದ ಸ್ಥಳದಲ್ಲಿ ಅಪಘಾತಕ್ಕೊಳಗಾದರೆ ಯಾರು ಹೊಣೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. 
ಡಂಗೂರ ಸಾರಿದರೂ ನಿರ್ಲಕ್ಷೃ: ಬಿಡಾಡಿ ದನಗಳನ್ನು ಹೊಡೆದುಕೊಂಡು ಹೋಗಬೇಕು, ಇಲ್ಲವಾದರೆ ಗೋಶಾಲೆಗೆ ಕಳುಹಿಸಲಾಗುವುದು ಎಂದು ಡಂಗೂರ ಸಾರಿದರೂ ದನಗಳ ಮಾಲೀಕರು ಕ್ಯಾರೆ ಎನ್ನುತ್ತಿಲ್ಲ. ಜಾನುವಾರ ಮಾಲೀಕರ ವಿರುದ್ಧ ಯಾವುದೇ ಕ್ರಮವನ್ನು ಪಟ್ಟಣ ಪಂಚಾಯಿತಿ ತೆಗೆದುಕೊಳ್ಳದ ಕಾರಣ ರಸ್ತೆಯಲ್ಲೇ ದನಗಳು ಬಿಡಾರ ಹೂಡುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

ದನಗಳನ್ನು ರಸ್ತೆಗೆ ಬಿಡದಂತೆ ಡಂಗೂರ ಸಾರಲಾಗಿದೆ. ಆದರೂ ಮಾಲೀಕರು ಜಾನುವಾರುಗಳನ್ನು ಕಟ್ಟಿ ಹಾಕದಿದ್ದರೆ ಆಡಳಿತಾಧಿಕಾರಿ, ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸಲಾಗುವುದು.

— ಹಾಜಿಚೌದ್ರಿ ಅಧ್ಯಕ್ಷ, ಸಿರವಾರ ಪಪಂ
"

ಬಿಡಾಡಿ ದನಗಳ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಡಂಗೂರ ಸಾರುವುದರಿಂದ ಯಾವುದೇ ಪ್ರಯೋಜನ ಇಲ್ಲ. ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾತ್ರಿ ಹೊತ್ತಿನಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದೇನೆ. ಹೆಚ್ಚಿನ ಅನಾಹುತವಾದರೆ ಯಾರು ಹೊಣೆ?

— ರಾಜು ಸಿರವಾರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net