ಸ್ಪರ್ಧಾತ್ಮಕ ಯುಗದಲ್ಲಿ ಕೃಷಿ ಉತ್ಪನ್ನಗಳಿಗಿಂತಲೂ ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಬೆಲೆ ಸಿಗಲಿದೆ ಎಂದು ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ(ಜಿಕೆವಿಕೆ)ದ ತರಬೇತಿ ಘಟಕದ ಸಂಯೋಜಕಿ ಡಾ.ಭಾರತಿ ಹೇಳಿದರು.
ತಾಲೂಕಿನ ಚೀಮನಹಳ್ಳಿಯಲ್ಲಿ 3 ತಿಂಗಳ ಕಾಲ ಬೀಡುಬಿಟ್ಟಿರುವ ಜಿಕೆವಿಕೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು, ಗ್ರಾಮದ ಡೇರಿಯಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ತರಬೇತಿಯಲ್ಲಿ ಮಾತನಾಡಿದರು.
ಕೃಷಿ, ಹೈನುಗಾರಿಕೆಯ ಉತ್ಪನ್ನಗಳಿಗಿಂತಲೂ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೆಲೆ ಮತ್ತು ಬೇಡಿಕೆ ಇದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನ ಮಾರಾಟ ಮಾಡಬೇಕಾಗುತ್ತದೆ. ಮಾರುಕಟ್ಟೆ ಬಗ್ಗೆ ತಿಳಿದುಕೊಂಡಾಗಲೇ ಲಾಭದಾಯಕ ಉದ್ಯಮ ನಡೆಸಲು ಸಾಧ್ಯ ಎಂದರು.
ತೆಂಗಿನಕಾಯಿ ಕುಕೀಸ್, ಮಸಾಲಾ ಡೋನಟ್ ತಯಾರಿಸುವ ವಿಧಾನ ವಿವರಿಸಿದರು. ಬೇಕರಿ ಉತ್ಪನ್ನಗಳ ತಯಾರಿಕೆಯ ಮೂಲಕ ಸ್ವಯಂ ಉದ್ಯೋಗ, ಕೌಶಲಾಭಿವೃದ್ಧಿ, ಹೆಚ್ಚುವರಿ ಆದಾಯ ಗಳಿಸುವ ಅವಕಾಶಗಳ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.