ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಲಿ

 ಬೇಲೂರು ಸಮೀಪದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ಬೇಲೂರು ಸಮೀಪದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯುನೈಟೆಡ್ ಅಕಾಡೆಮಿ ಶಾಲೆ
  • ಬೇಲೂರು ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ
ಬೇಲೂರು: ರಸ್ತೆ ಸುರಕ್ಷತೆ ಕೇವಲ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ. ಬದಲಾಗಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೇಲೂರು ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ಹಾಗೂ ಯುನೈಟೆಡ್ ಅಕಾಡೆಮಿ ಶಾಲೆ ಸಹಯೋಗದಲ್ಲಿ ಮಕ್ಕಳ ರಕ್ಷಣೆ, ಫೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ನಿಷೇಧ ಕುರಿತು ಸಮೀಪದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಯಮ ಪಾಲನೆಯಿಂದ ಅಪಘಾತಗಳನ್ನು ತಡೆಗಟ್ಟುವುದರ ಜತೆಗೆ ದಂಡದ ರೂಪದಲ್ಲಿ ವ್ಯರ್ಥವಾಗುವ ಹಣವನ್ನೂ ಉಳಿಸಬಹುದು ಎಂದರು.
18 ವರ್ಷ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನ ಚಲಾಯಿಸಲು ಅವಕಾಶ ನೀಡಬಾರದು. ಲೈಸನ್ಸ್ ಇಲ್ಲದ ಮಕ್ಕಳ ಕೈಗೆ ವಾಹನ ನೀಡುವುದು ಕಾನೂನು ಬಾಹಿರ. ಅತಿ ವೇಗ, ನಿರ್ಲಕ್ಷ್ಯದ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಸಂಚಾರ ನಿಯಮಗಳ ಉಲ್ಲಂಘನೆ ಅಪಘಾತಗಳಿಗೆ ಪ್ರಮುಖ ಕಾರಣ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಧರಿಸುವುದರ ಜತೆಗೆ ವಾಹನಕ್ಕೆ ವಿಮೆ ಮಾಡಿಸಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾರಣ ಸಾರ್ವಜನಿಕರು ಸ್ವಯಂ ಶಿಸ್ತು ಪಾಲಿಸಿ ಸುರಕ್ಷಿತವಾಗಿರಬೇಕು ಎಂದರು.
ಯುನೈಟೆಡ್ ಅಕಾಡೆಮಿ ಶಾಲೆ ಕಾರ್ಯದರ್ಶಿ ಎಚ್.ಎಂ.ದಿನೇಶ್ ಮಾತನಾಡಿ, ಶಿಕ್ಷಣದ ಜತೆಗೆ ಕಾನೂನು ಅರಿವು, ಶಿಸ್ತು, ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅತ್ಯಗತ್ಯ. ಇಂದಿನ ಮಕ್ಕಳು ನಾಳಿನ ದೇಶದ ಭವಿಷ್ಯವಾಗಿರುವುದರಿಂದ ಪಾಲಕರು, ಶಿಕ್ಷಕರು ಹಾಗೂ ಸಮಾಜದ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.
ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಬಾರದು. ಬಾಲ್ಯ ವಿವಾಹ, ಮಕ್ಕಳ ಮೇಲಿನ ದೌರ್ಜನ್ಯ, ಫೋಕ್ಸೋ ಕಾಯ್ದೆ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಗೂ ಅರಿವಿರಬೇಕು. ಯಾವುದೇ ಸಮಸ್ಯೆ ಎದುರಾದರೆ ಹೆದರದೆ ಪಾಲಕರು, ಶಿಕ್ಷಕರು ಅಥವಾ ಸಂಬಂಧಪಟ್ಟ ಅಧಿಕಾರಿಗಳ ನೆರವು ಪಡೆಯಬೇಕು. ಪರಿಸರ, ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಹಾಗೂ ಸ್ವಚ್ಛ ಸಮಾಜ ನಿರ್ಮಾಣದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ವಕೀಲರಾದ ಭೂಮಿಲಾ ಎಂ.ಗೌಡ, ಶಶಿಕಲಾ, ಯುನೈಟೆಡ್ ಅಕಾಡೆಮಿ ಶಾಲೆ ಖಜಾಂಚಿ ಸಿ.ಎಚ್.ಲೋಕೇಶ್, ಮುಖ್ಯಶಿಕ್ಷಕಿ ಎಂ.ಎನ್.ದೀಪಾ, ಪೊಲೀಸ್ ಸಿಬ್ಬಂದಿ ದೇವರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net