ರಸ್ತೆ ಕಾಮಗಾರಿ ಸ್ಥಗಿತದಿಂದ ಸಂಚಾರ ಕಿರಿಕಿರಿ

 ಅಜ್ಜೀಪುರದ ಬಳಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ವಾಹನಗಳ ಸಂಚಾರದಿಂದ ಧೂಳು ಆವರಿಸಿರುವುದು.
ಅಜ್ಜೀಪುರದ ಬಳಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ವಾಹನಗಳ ಸಂಚಾರದಿಂದ ಧೂಳು ಆವರಿಸಿರುವುದು.
Published on
ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ಬಳಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ವಾಹನ ಸಂಚಾರಕ್ಕೆ ತೊಡುಕಾಗಿರುವುದರ ಜತೆಗೆ ಸಾರ್ವಜನಿಕರು ನಿತ್ಯ ಧೂಳಿನ ಯಾತನೆ ಅನುಭವಿಸುವಂತಾಗಿದೆ.

ಹನೂರಿನಿಂದ ರಾಮಾಪುರ, ಮಾರ್ಟಳ್ಳಿ ಹೂಗ್ಯಂ ಹಾಗೂ ಗರಿಕೆಕಂಡಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಕಳೆದ 2 ವರ್ಷದಿಂದ ಈ ಮಾರ್ಗದ ಅಜ್ಜೀಪುರದ ಬಳಿ ಸುಮಾರು 1 ಕಿ.ಮೀ. ಅಂತರದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿತ್ತು. ಇದರಿಂದ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು, ಗಾಯಗೊಂಡಿರುವ ಘಟನೆಗಳು ಆಗ್ಗಾಗ್ಗೆ ಜರುಗುತ್ತಲೇ ಇತ್ತು. ಹಾಗಾಗಿ ವಾಹನ ಸಂಚಾರರು ಸಂಚರಿಸಲು ಸಮಸ್ಯೆ ಎದುರಿಸುವಂತಾಯಿತು. ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಡಬ್ಲುೃಡಿ ಇಲಾಖೆ ವತಿಯಿಂದ ಕಾಮಗಾರಿ ಕೈಗೊಂಡು 6 ತಿಂಗಳೇ ಕಳೆದಿದೆ. ಆದರೆ ಕಾಮಗಾರಿ ಸ್ಥಗಿತಗೊಂಡಿದೆ. ಜತೆಗೆ ಈ ಮಾರ್ಗದಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿಯೂ ಸಹ ಸ್ಥಗಿತಗೊಂಡಿದೆ. ಇದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಸಂಚರಿಸುವಂತಾಗಿದೆ. ಇದರಿಂದ ವಾಹನ ಸವಾರರು ಸಂಚರಿಸಲು ನಿತ್ಯ ಹರಸಾಹಸ ಪಡುವಂತಾಗಿದೆ.

ಇನ್ನು ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಜವಾಬ್ದಾರಿ ಹೊತ್ತವರು ರಸ್ತೆಗೆ ನೀರನ್ನು ಸಹ ಸಿಂಪಡಿಸುತ್ತಿಲ್ಲ. ಪರಿಣಾಮ ವಾಹನಗಳ ಸಂಚಾರದಿಂದ ಧೂಳು ಆವರಿಸುತ್ತದೆ. ಇದರಿಂದ ವಾಹನಗಳ ಹಿಂದೆ ಬರುವ ಬೈಕ್ ಸವಾರರು ಯಾತನೆ ಅನುಭವಿಸುವಂತಾಗಿದೆ. ಇದು ಕಣ್ಣು ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಶೀಘ್ರ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸಬೇಕು. ಜತೆಗೆ ಡಾಂಬರೀಕರಣಗೊಳ್ಳುವ ತನಕ ರಸ್ತೆಗೆ ಆಗ್ಗಾಗ್ಗೆ ನೀರನ್ನು ಸಿಂಪಡಿಸುವುದರ ಮೂಲಕ ಜನರ ಸಂಚಾರಕ್ಕೆ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net