Toxic gas released into village from asphalt mixing plant!
Published on:
Copied
Follow Us
ಶಿಡ್ಲಘಟ್ಟ: ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಿಮಾರ್ಣ ಮಾಡಿರುವ ಡಾಂಬರು ಮಿಶ್ರಣ ಪ್ಲಾಂಟ್ನಿಂದ ಹೊರಬರುತ್ತಿರುವ ವಿಷಾನಿಲ ಸಹಿತ ಹೊಗೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿದೆ ಎಂದು ಅಲವತ್ತುಕೊಂಡ ಸಿಎನ್ ಹೊಸೂರು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು, ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ತಾಲೂಕಿನ ಗಡಿಭಾಗದಲ್ಲಿರುವ ಸಿ.ಎನ್.ಹೊಸೂರಿನ ಗಡಿಯಲ್ಲಿ 8 ತಿಂಗಳ ಹಿಂದೆ ಹಾಟ್ ಮಿಕ್ಸ್ ಪ್ಲಾಂಟ್ (ರಸ್ತೆಗೆ ಹಾಕುವ ಡಾಂಬರು ತಯಾರಿಸುವ ಕಾರ್ಖಾನೆ) ನಿಮಾರ್ಣ ಮಾಡಿದ್ದು, ಕಾರ್ಖಾನೆ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದೇವೆ. ಘಟಕದಿಂದ ಈಶಾನ್ಯ ದಿಕ್ಕಿಗೆ 392 ಮೀಟರ್ ಅಂತರದಲ್ಲಿ ವಸತಿ ನಿವೇಶನಗಳು ಇವೆ. ಪಶ್ಚಿಮ ದಿಕ್ಕಿಗೆ 402 ಮೀಟರ್ ಅಂತರದಲ್ಲಿ ಸಿ.ಎನ್.ಹೊಸೂರು ಗ್ರಾಮ, 671 ಮೀಟರ್ ಅಂತರದಲ್ಲಿ ಸರ್ಕಾರಿ ಶಾಲೆ, 722 ಮೀಟರ್ ಅಂತರದಲ್ಲಿ ಮುತ್ತೂರು ಗ್ರಾಮವಿದ್ದರೂ ಘಟಕ ಆರಂಭಿಸಿದ್ದಾರೆ. ಡಾಂಬರಿನ ವಾಸನೆ, ಧೂಳಿನಿಂದಾಗಿ ಗ್ರಾಮದ ಮಕ್ಕಳು, ವೃದ್ಧರು, ಮಹಿಳೆಯರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಘಟಕದಿಂದ ಹೊರಬರುತ್ತಿರುವ ರಾಸಾಯನಿಕ ವಿಷಾನಿಲ ಸಹಿತ ಹೊಗೆಯಿಂದ ಗ್ರಾಮದ ಜನರಿಗೆ ಕೆಮ್ಮು, ಕಫ ಮುಂತಾದ ಕಾಯಿಲೆಗಳು ಆವರಿಸಿಕೊಳ್ಳುತ್ತಿವೆ. ಡಯಾಲಿಸಿಸ್ ರೋಗಿಗಳ ಆರೋಗ್ಯ ಣಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದೇಕೆ ಎಂದು ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮುಖಂಡ ಪುನೀತ್, ಡಾಂಬರು ಮಿಶ್ರಣ ಪ್ಲಾಂಟ್ನಿಂದ ಉಗುಳುತ್ತಿರುವ ವಿಷಕಾರಕ ಅನಿಲದ ದೃಶ್ಯವನ್ನು ಸುದ್ದಿಗಾರರಿಗೆ ತೋರಿಸಿದರು.
"
ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಡಾಂಬರು ಮಿಶ್ರಣ ಮಾಡುವ ಪ್ಲಾಂಟ್ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.
> ಆರ್.ಜಿ.ಸೌಮ್ಯ, ಪಿಡಿಒ ಮಳ್ಳೂರು ಗ್ರಾಪಂ
ಸ್ಥಳಿಯ ಮುಖಂಡ ವೇಣು ಮಾತನಾಡಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಘಟಕಕ್ಕೆ ಹೊಂದಿಕೊಂಡಂತೆ ಕೃಷಿ ಜಮೀನುಗಳು ಇವೆ. ಘಟಕದಿಂದ ಹೊರ ಸೂಸುವ ಅನಿಲ ರೂಪದ ಮಾಲಿನ್ಯಕಾರಗಳು ಕೃಷಿ ಜಮೀನು ಸೇರಿದಂತೆ ಗ್ರಾಮದ ನಿವಾಸಿಗಳಿಗೆ ತೊಂದರೆಯಾಗಬಹುದು. ಘಟಕದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಕರ್ನಾಟಕ ದಲಿತ ಜನಸೇನೆ ರಾಜ್ಯಾಧ್ಯಕ್ಷ ಟಿ.ಭರತ್ ಮಾತನಾಡಿ, ಕೂಡಲೇ ಪ್ಲಾಂಟ್ನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮುಖಂಡರಾದ ವೇಣು, ಪುನೀತ್, ಮುನಿಕೃಷ್ಣಪ್ಪ, ಮಧು, ರವಿ, ರಮೇಶ್, ವೆಂಕಟೇಶ್, ಶಿವಕುಮಾರ್, ಗಜೇಂದ್ರ, ರಾಮಾಂಜಿ, ಅರವಿಂದ್ ರೆಡ್ಡಿ, ಬಾಲಕೃಷ್ಣ, ಮಹೇಶ್, ಡಿ.ಮುನಿಕೃಷ್ಣಪ್ಪ, ಮಂಜುನಾಥ್ ಇತರರು ಇದ್ದರು.