

ರಾಜಕಾರಣಕ್ಕೂ ಜಾತಿ ಸಮೀಕರಣಕ್ಕೂ ಬಿಡಿಸಲಾರದ ನಂಟು. ರಾಜಕಾರಣದ ಒಳಹೂರಣವೇ ಜಾತಿ ಲೆಕ್ಕಾಚಾರ. ಯಾವ ಕ್ಷೇತ್ರದಲ್ಲಿ ಯಾವ ಜಾತಿಯವರಿದ್ದಾರೆ ಎಂಬುದನ್ನು ಆಧರಿಸಿಯೇ ಪಕ್ಷಗಳು ಟಿಕೆಟ್ ನೀಡುವ ಸಂಪ್ರದಾಯವನ್ನು ಇಂದಿಗೂ ಪಾಲಿಸುತ್ತಿವೆ. ಆದರೆ 1970ರ ದಶಕದಲ್ಲಿ ಜಾತಿ ರಾಜಕಾರಣಕ್ಕೆ ಹೊಸ ವ್ಯಾಖ್ಯಾನ ಬರೆದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು. ಆ.20 (ಇಂದು) ಅರಸು ಅವರ ಜನ್ಮದಿನ. ತನ್ನಿಮಿತ್ತ ಅವರ ಹೆಜ್ಜೆಗುರುತುಗಳನ್ನು ನೆನಪಿಸಿಕೊಳ್ಳಲಾಗಿದೆ.
ದೇವರಾಜ ಅರಸು ಅವರು ಪ್ರತಿನಿಧಿಸುತ್ತಿದ್ದ ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದಲ್ಲಿ ಅರಸು ಸಮುದಾಯದ ಜನ ತೀರಾ ಕಡಿಮೆ ಇದ್ದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರ ಪ್ರಾಬಲ್ಯವೇ ಹೆಚ್ಚು. ಒಮ್ಮೆ ಅವರು, ಇನ್ನೊಮ್ಮೆ ಇವರು ಎಂಬಂತೆ ಮುಖ್ಯಮಂತ್ರಿಗಳಾಗುತ್ತಿದ್ದ ಕಾಲವದು. ಆ ಸಮೀಕರಣವನ್ನು ತಲೆಕೆಳಗೆ ಮಾಡಿ ರಾಜ್ಯದ ಮಟ್ಟಿಗೆ ತೀರಾ ಸಣ್ಣ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದು ದೊಡ್ಡ ಇತಿಹಾಸವೇ ಸರಿ.
1952ರಲ್ಲಿ ರಾಜಕೀಯ ಪ್ರವೇಶ ಮಾಡಿದ ಅರಸು ಅವರು ನಿಜಲಿಂಗಪ್ಪನವರ ಸಂಪುಟದಲ್ಲಿ ಮೊದಲಿಗೆ ಪಶು ಸಂಗೋಪನೆ ಸಚಿವರಾಗಿದ್ದರು. 1969ರಲ್ಲಿ ಕಾರಣಾಂತರದಿಂದ ಅವರಿಗೆ ಪಕ್ಷದ ಟಿಕೆಟ್ ಕೈತಪ್ಪಿತ್ತು. ಈ ವೇಳೆ ಆಪ್ತ ಸ್ನೇಹಿತರಾಗಿದ್ದ ಆರ್.ಶಂಕರನಾರಾಯಣ ಅವರ ಸಲಹೆ ಮತ್ತು ಮಾರ್ಗದರ್ಶನದಂತೆ ತಾಳ್ಮೆಯಿಂದ ಕಾಯ್ದರು. ವೀರೇಂದ್ರ ಪಾಟೀಲರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಮುಂದೆ ದೇಶದಲ್ಲಿ ಉಂಟಾದ ರಾಜಕೀಯ ವಿಪ್ಲವತೆಯ ಕಾರಣಕ್ಕೆ ಕಾಂಗ್ರೆಸ್ ಇಬ್ಭಾಗವಾಯಿತು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. ಆ ಸಂದರ್ಭದಲ್ಲಿ ಅರಸು ಇಂದಿರಾ ಗಾಂಧಿಯವರ ಗುಂಪಿನಲ್ಲಿ ಗುರುತಿಸಿಕೊಂಡರು.
ಪಕ್ಷದ ಅಧ್ಯಕ್ಷ ಜವಾಬ್ದಾರಿಯ ಜೊತೆಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನವೂ ಒಲಿದು ಬಂತು. ನಂತರ ನಡೆದ ಚುನಾವಣೆಯಲ್ಲಿ ಪಕ್ಷವನ್ನು ಶೇ.75 ಸ್ಥಾನಗಳೊಂದಿಗೆ ಅಧಿಕಾರಕ್ಕೆ ತಂದು, 1973ರಲ್ಲಿ ಮುಖ್ಯಮಂತ್ರಿಗಳಾದರು. ಹೀಗೆ ಆರಂಭವಾದ ಅರಸು ಅಧಿಕಾರದ ಪಯಣ ಇತ್ತೀಚಿನವರೆಗೆ ಸುದೀರ್ಘ ಅವಧಿ ಕರ್ನಾಟಕವನ್ನು ಆಳಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ನಿರ್ವಿುಸಿತ್ತು. ಈಗ ಆ ಸ್ಥಾನ ಸಿದ್ಧರಾಮಯ್ಯನವರಿಗೆ ಲಭಿಸಿದೆ.
ಹಿಂದುಳಿದ ವರ್ಗದ ಕಲ್ಯಾಣದ ಹರಿಕಾರ: ಸಣ್ಣ ಸಮುದಾಯದಲ್ಲಿ ಹುಟ್ಟಿ ಬಂದಿದ್ದ ದೇವರಾಜ ಅರಸು ಅವರು ದೇಶದ ಉದ್ಧಾರವೆಂದರೆ ಹಿಂದುಳಿದವರ, ರೈತರ ಉದ್ಧಾರ ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಚಿಂತನೆಯಂತೆಯೇ ಕಾರ್ಯಗಳನ್ನು ಮಾಡಿ ದೇಶದ ಆಡಳಿತ ವ್ಯವಸ್ಥೆಯಲ್ಲಿಯೇ ಹೊಸ ದಾಖಲೆಗಳನ್ನು ಬರೆದರು. ಮೈಸೂರು ರಾಜ್ಯದ ಹೆಸರು ಅಧಿಕೃತವಾಗಿ ಕರ್ನಾಟಕ ಎಂದು ಹೆಸರಾಗಿದ್ದು ಅವರ ಕಾಲದಲ್ಲಿಯೇ.
ಆಡಳಿತದ ಅವಧಿಯಲ್ಲಿ ಬಡ ಕುಟುಂಬದ ಮನೆಗಳಿಗೆ ಭಾಗ್ಯಜ್ಯೋತಿ ಉಚಿತ ವಿದ್ಯುತ್ ಸಂಪರ್ಕ ನೀಡಿದರು. ಇಡೀ ದೇಶಕ್ಕೆ ಮಾದರಿ ಎನಿಸುವ ‘ಉಳುವವನೆ ನೆಲದೊಡೆಯ’ ಎಂಬ ಪರಿಕಲ್ಪನೆಯಲ್ಲಿ ಭೂ ಸುಧಾರಣೆ ಕಾಯ್ದೆ ತಂದರು. ಅಂದಿನ ಬಿಹಾರ ಮುಖ್ಯಮಂತ್ರಿ ಕರ್ಪರಿ ಠಾಕೂರ್ ಅವರು ಶಂಕರನಾರಾಯಣ ಅವರ ಮನೆಯಲ್ಲಿ ಭೇಟಿಯಾದಾಗ ಈ ಯೋಜನೆ ಬಗ್ಗೆ ವಿವರಿಸಿದ್ದರು. ಆದರೆ ಅವರಿಗಿಂತಲೂ ಮೊದಲು ಕಾಯ್ದೆಯನ್ನು ಜಾರಿಗೆ ತಂದು ಕ್ರಾಂತಿ ಮಾಡಿದರು.
ಈ ನಡುವೆ 1977ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಕಾಂಗ್ರೆಸ್ ವಿರುದ್ಧದ ವಾತಾವರಣ ನಿರ್ವಣಗೊಂಡಿತ್ತು. ಆದರೆ 1978ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಿದ್ದರ ಹಿಂದಿದ್ದಿದ್ದು ಅರಸು ನಾಯಕತ್ವ. ಮತ್ತೆ ಮುಖ್ಯಮಂತ್ರಿಗಳಾದರು. ಆದರೆ ದೇಶದ ಪ್ರಧಾನಿಯಾಗಲು ಅರಸು ಪ್ರಯತ್ನಿಸುತ್ತಿದ್ದಾರೆ ಎಂಬ ತಪ್ಪು ಮಾಹಿತಿ ಪಡೆದ ಪಕ್ಷದ ಸವೋಚ್ಛ ನಾಯಕಿ ಇಂದಿರಾಗಾಂಧಿ, ಇವರನ್ನು 1980ರಲ್ಲಿ ಪದಚ್ಯುತಗೊಳಿಸುವ ಮೂಲಕ ಅರಸು ಆಡಳಿತದ ಯುಗಾಂತ್ಯವಾಯಿತು. ಕರ್ನಾಟಕ ಕ್ರಾಂತಿರಂಗ ಎಂಬ ಹೊಸ ಪಕ್ಷಸ್ಥಾಪಿಸಿದರೂ ಅದು ಯಶಸ್ವಿಯಾಗಲಿಲ್ಲ.
ಕೃಷಿ ಕುಟುಂಬದ ಹಿನ್ನೆಲೆ: ಹುಣಸೂರು ತಾಲೂಕಿನ ಕಲ್ಲಹಳ್ಳಿ ಎಂಬ ಹಳ್ಳಿಯಲ್ಲಿ 1915ರ ಆ.20 ರಂದು ಅರಸು ಜನಿಸಿದ್ದರು. ಅವರ ಹಿರಿಯರು ಪಾಳೆಗಾರಿಕೆ ವಂಶಸ್ಥರಾಗಿದ್ದರು. ಈ ಕಾರಣದಿಂದ ಹೇರಳವಾದ ಕೃಷಿ ಭೂಮಿ ಹೊಂದಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರೂ, ಅರಸು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಅವರಲ್ಲಿದ್ದ ಬುದ್ದಿವಂತಿಕೆ, ಜನಪರ ಕಾಳಜಿ ಅವರನ್ನು ರಾಜಕೀಯ ಪ್ರವೇಶಿಸುವಂತೆ ಮಾಡಿತು. ಹುಣಸೂರಿನ ಕರಿಯಪ್ಪಗೌಡರು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟ ಪರಿಣಾಮ ಮೊದಲ ಬಾರಿಗೆ ಶಾಸನಸಭೆಗೆ ಆಯ್ಕೆಯಾದರು. ನಂತರ ನಡೆದಿದ್ದೆಲ್ಲಾ ಇತಿಹಾಸ.
ಮೈಸೂರಿನಲ್ಲಿ ಇದ್ದಾಗಿನಿಂದರೂ ಆರ್.ಶಂಕರನಾರಾಯಣ ಅವರ ಸ್ನೇಹಿತರಾಗಿದ್ದು, ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಸ್ನೇಹಿತನೊಂದಿಗಿನ ಸಂಪರ್ಕ ಕಡಿದುಕೊಂಡಿರಲಿಲ್ಲ. ಚಾಮರಾಜಪೇಟೆಯ ಕೋಟೆ ಹೈಸ್ಕೂಲ್ ಕಾಂಪೌಂಡ್ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡುತ್ತಿದ್ದರು. 1982 ಜೂನ್ 6ರಂದು ಅರಸು ಅವರು ಇಹಲೋಕ ತ್ಯಜಿಸಿದರು. ಅವರಿಗೆ ಚಂದ್ರಪ್ರಭಾ, ನಾಗರತ್ನ ಮತ್ತು ಭಾರತಿ ಎಂಬ ಮೂವರು ಹೆಣ್ಣುಮಕ್ಕಳಿದ್ದು, ಚಂದ್ರಪ್ರಭಾ ಕೆಲಕಾಲ ರಾಜಕಾರಣದಲ್ಲಿದ್ದರು.