ಹೈಕೋರ್ಟ್​ ಕದ ತಟ್ಟಿದ ಟಿ.ಎನ್​. ಸೀತಾರಾಮ್​| High court

ಟಿ.ಎನ್​. ಸೀತಾರಾಮ್
ಟಿ.ಎನ್​. ಸೀತಾರಾಮ್
Published on

ಪ್ರಮುಖ ಮುಖ್ಯಾಂಶಗಳು

  • ಎಫ್​ಐಆರ್​ ರದ್ದುಕೋರಿ ಅರ್ಜಿ
  • ಪ್ರತಿವಾದಿಗಳಿಗೆ ನೋಟಿಸ್​ ಜಾರಿಗೊಳಿಸಿದ ಹೈಕೋರ್ಟ್​
ಬೆಂಗಳೂರು: ಜಮೀನು ವ್ಯಾಜ್ಯವೊಂದರಲ್ಲಿ ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ಅತಿಕ್ರಮಣ ಪ್ರವೇಶ ಮಾಡಿ, ದೌರ್ಜನ್ಯ ನಡೆಸಿದ ಆರೋಪದ ಮೇಲೆ ದಾಖಲಾಗಿರುವ ಎಫ್​ಐಆರ್​ ರದ್ದುಗೊಳಿಸುವಂತೆ ಕೋರಿ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್​. ಸೀತಾರಾಮ್​ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​ ಜಾರಿಗೊಳಿಸಿದೆ.
ಟಿ.ಎನ್​. ಸೀತಾರಾಮ್​ ಮತ್ತು ಅವರ ಸಹೋದರಿ ಕೆ.ಎಸ್​. ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್​ ಜಾರಿಗೊಳಿಸಿ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹಸನಘಟ್ಟ ಗ್ರಾಮದಲ್ಲಿ ಸುಮಾರು 5 ಎಕರೆ ಜಮೀನಿಗೆ ಸಂಬಂಧಿಸಿ ಈ ಎಫ್​ಐಆರ್​ ದಾಖಲಾಗಿದೆ. ದೂರುದಾರರ ಪ್ರಕಾರ, ಸೀತಾರಾಮ್​ ಅವರು 1977ರಲ್ಲೇ ಈ ಜಮೀನನ್ನು ರಾಮಯ್ಯ ಎಂಬುವರಿಗೆ ಮಾರಾಟ ಮಾಡಿದ್ದರು. ನಂತರದ ದಿನಗಳಲ್ಲಿ ಈ ಜಮೀನು ಅಡವಿಯಪ್ಪ ಎಂಬುವರ ವಾರಸುದಾರರಾದ ಅರವಿಂದ ಕುಮಾರ್​ ಮತ್ತು ಜಗದೀಶ್​ ಅವರ ಸ್ವಾಧಿನಕ್ಕೆ ಬಂದಿತ್ತು. ಆದರೆ, ಈ ಜಮೀನಿನಲ್ಲಿ 1 ಎಕರೆ 26 ಗುಂಟೆ ಜಮೀನು ಇನ್ನೂ ತಮ್ಮ ಹೆಸರಿನಲ್ಲೇ ಇದೆ ಎಂದು ಪ್ರತಿಪಾದಿಸಿರುವ ಸೀತಾರಾಮ್​, ಎನ್​. ರಾಕೇಶ್​ ಎಂಬುವರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. 2026ರ ಮೇ 1ರಂದು ರಾತ್ರಿ ವೇಳೆ ಸೀತಾರಾಮ್​ ಮತ್ತು ತಂಡವು 100ಕ್ಕೂ ಹೆಚ್ಚು ಜನರೊಂದಿಗೆ ಮಾರಾಕಾಸ್ತ್ರಗಳೊಡನೆ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ, ಕಾಂಪೌಂಡ್​ ಕೆಡವಿ, ಸಿಸಿಟಿವಿ ನಾಶಪಡಿಸಿದ್ದಾರೆ ಎಂಬುದು ದೂರಲಾಗಿದೆ.

ಗಂಭೀರ ಆರೋಪ: 

ದೂರಿನಲ್ಲಿ ಮಹಿಳೆಯರ ಘನತೆಗೆ ಧಕ್ಕೆ ತಂದಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಸ್ಥಳದಲ್ಲಿದ್ದ ಕೆಲಸಗಾರರನ್ನು ಕೂಡಿಹಾಕಿ, ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕ ದೌರ್ಜನ್ಯ ಎಸಗಲಾಗಿದೆ ಎಂದು ಎಫ್​ಐಆರ್​ನಲ್ಲಿ ವಿವರಿಸಲಾಗಿದೆ. ಸೀತಾರಾಮ್​, ವಿಜಯಲಕ್ಷ್ಮೀ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net