ಬೆಂಗಳೂರು: ಕೈದಿಗಳಿಗೆ ಮನೆ ಊಟ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ನೀಡುವ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ಸಮಯ ಒದಗಿ ಬಂದಿದೆ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ಪವಿತ್ರಾ ಗೌಡ ಮತ್ತು ಇತರ ಇಬ್ಬರು ಆರೋಪಿಗಳಿಗೆ ವಾರದಲ್ಲಿ ಒಮ್ಮೆ ಮನೆಯೂಟ ನೀಡಲು ಅವಕಾಶ ಕಲ್ಪಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ತೋರಿಸಿ ಇತರ ಆರೋಪಿಗಳಿಗೆ ಜೈಲು ಅಧಿಕಾರಿಗಳು ಬೆದರಿಕೆಯೊಡ್ಡುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ದರ್ಶನ್ ಅವರನ್ನು ಅಮಾನುಷವಾಗಿ ನಡೆಸಿಕೊಳ್ಳಬಾರದು ಎಂದು ವಿಚಾರಣಾ ನ್ಯಾಯಾಲಯ ಹೇಳಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಯಾರಿಗೆಲ್ಲ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಮಾಹಿತಿ ನೀಡಬೇಕು. ಆಹಾರ ಮತ್ತು ಯಾವುದೇ ಸೌಲಭ್ಯಗಳಾದರೂ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ನೀಡಲು ಸಾಧ್ಯವಿಲ್ಲ. ಸೌಲಭ್ಯ ಕೊಡಲೇಬಾರದು ಎಂದೇನಿಲ್ಲ. ವೈದ್ಯರ ಸೂಚನೆ ಇದ್ದರೆ ನೀಡಬಹುದು. ಈ ಬಗ್ಗೆ ಮಾರ್ಗಸೂಚಿ ರೂಪಿಸಲು ಈಗ ಕಾಲ ಕೂಡಿ ಬಂದಿದೆ ಎಂದಿತು.
ಪೊಲೀಸರ ಪರ ವಾದಿಸಿದ ವಕೀಲರು, ಜೈಲಿನ ನಿಯಮಗಳು ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನಡೆಯಬೇಕು. ಸೌಲಭ್ಯ ನೀಡುವ ಬಗ್ಗೆ ಮಾರ್ಗಸೂಚಿ ರೂಪಿಸುವುದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಹಿಂದೆಯೇ ಮನೆ ಉಟಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಆದರೆ, ಅದನ್ನು ಹಿಂಪಡೆಯಲಾಗಿತ್ತು. ಆಗಲೇ ಮಾರ್ಗಸೂಚಿ ರೂಪಿಸಬಹುದಿತ್ತು. ಈಗ ಎಲ್ಲ ದಾಖಲೆಗಳನ್ನು ಸಲ್ಲಿಸಿದರೆ ಈ ಬಗ್ಗೆ ಪರಿಶೀಲಿಸಬಹುದು ಎಂದು ಹೇಳಿ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿತು.