ಹೊಸ ವರ್ಷಾಚರಣೆಗೆ ಎಲ್ಲೆಡೆ ಬಿಗಿಭದ್ರತೆ! ಹೀಗಿವೆ ಮಾರ್ಗಸೂಚಿಗಳು

ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ
ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ
Published on
ಬೆಂಗಳೂರು: ಗೋವಾದಲ್ಲಿ ಇತ್ತೀಚೆಗೆ ನಡೆದ ನೈಟ್​ಕ್ಲಬ್ ಅವಘಡ ಗಮನದಲ್ಲಿಟ್ಟುಕೊಂಡು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ, ಹೊಸ ವರ್ಷದ ಸಂಭ್ರಮಾಚರಣೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳುವ ಹಾಗೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದಾರೆ.
ಸಂಭ್ರಮಾಚರಣೆಯ ಪ್ರಮುಖ ಸ್ಥಳಗಳಾದ (ಹಾಟ್​ಸ್ಪಾಟ್) ಬೀಚ್, ಮಾಲ್, ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಪ್ರಮುಖ ಹೆದ್ದಾರಿಗಳನ್ನು ಒಳಗೊಂಡಂತೆ ಅಪಾಯಕಾರಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸೂಚಿಸಿದ್ದಾರೆ. ಮದ್ಯಪಾನದಿಂದ ಸಂಭ್ರಮದ ಕ್ಷಣದಲ್ಲಿ ಉಂಟಾಗುವ ಉಲ್ಲಾಸವು ಸಾಮೂಹಿಕವಾಗಿ ಪ್ರೇರೇಪಣೆ ಸೃಷ್ಟಿಸಿ, ಅಪಾಯಕಾರಿ ಪರಿಣಾಮ ಉಂಟು ಮಾಡುತ್ತದೆ. ಇಳಿಜಾರು ಸ್ಥಳ, ಪ್ರದೇಶ, ಮೆಟ್ಟಿಲುಗಳಿಂದ ಕೂಡಿದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರಿರುವ ಜನಸ್ತೋಮದಲ್ಲಿ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಗುಂಪಿನಲ್ಲಿರುವ ವ್ಯಕ್ತಿಗಳು ಬೇಜವಾಬ್ದಾರಿ ಮತ್ತು ವಿಧ್ವಂಸಕೃತ್ಯ, ಅಶಿಸ್ತಿನ ವರ್ತನೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಕೈಗೊಳ್ಳಬೇಕಾದ ಕುರಿತು ಮಾರ್ಗಸೂಚಿ ಜಾರಿ ಮಾಡಿದ್ದಾರೆ.

ಮಾರ್ಗಸೂಚಿಗಳು

  • ಸಂಭ್ರಮಾಚರಣೆ ಕುರಿತು ಕಾರ್ಯಕ್ರಮ ಆಯೋಜಕರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ನಿರ್ದೇಶನ ನೀಡಿ ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸುವಂತೆ ತಿಳಿಸಿದ್ದಾರೆ. ಮಾರ್ಗಸೂಚಿ ಕ್ರಮಗಳು ಮೋಜು ಮಸ್ತಿ ಸ್ಥಳದಲ್ಲಿ ಕೃತಕ ಬುದ್ಧಿಮತ್ತೆ (ಎಐ)
  • ತಂತ್ರಜ್ಞಾನ ಬಳಕೆ, 1 ಸಾವಿರಕ್ಕೂ ಹೆಚ್ಚು ಜನರು ಸೇರಬಹುದಾದ ಸ್ಥಳಗಳಲ್ಲಿ ‘ಪೆರಿಮಿಟರ್’ ತಪಾಸಣೆ. ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಮತ್ತೊಂದು ಜಿಲ್ಲೆಗೆ ಬರುವ ವಾಹನಗಳನ್ನು ಚೆಕ್​ಪೋಸ್ಟ್​ಗಳಲ್ಲಿ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ.
  • ಪೊಲೀಸ್ ವಾಹನಗಳ ನಿರಂತರ ಗಸ್ತು, ಕಾಲ್ನಡಿಗೆ ಗಸ್ತು, ಬೈಕ್ ಹಾಗೂ ಅಶ್ವಾರೋಹಿ (ಕುದುರೆ) ಹೆಚ್ಚಿಸುವುದು. ಪ್ರಮುಖ ಕಾರ್ಯ ಕ್ರಮಗಳ ಸ್ಥಳಗಳು ಮತ್ತು ಹೆದ್ದಾರಿ ಪ್ರವೇಶ, ನಿರ್ಗಮನ ದ್ವಾರಗಳಲ್ಲಿ ‘ಡಬ್ಲ್ಯು’ ಮಾದರಿಯ ಬ್ಯಾರಿಕೇಡ್ ವ್ಯವಸ್ಥೆ, ಪ್ರತಿಫಲಕ, ಸೂಚನಾ ಫಲಕ ಮತ್ತು ವಾಹನ ತಪಾಸಣೆ ಸೇರಿ ಇತರ ಅಪಾಯಗಳನ್ನು ಮೌಲ್ಯಮಾಪನ ಮಾಡಿ ಕ್ರಮ.
  • ಮಹಿಳೆಯರನ್ನು ಚುಡಾಯಿಸುವುದನ್ನು ತಡೆಯಲು ಮಹಿಳಾ ಪೊಲೀಸ್ ತಂಡಗಳ ನಿಯೋಜನೆ, ಆಂಬುಲೆನ್ಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳನ್ನು ಸಿದ್ಧ ಸ್ಥಿತಿಯಲ್ಲಿಟ್ಟು, ಸ್ಪಷ್ಟ ನಿರ್ಗಮನ ಮಾರ್ಗಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದು. ಡ್ರೋನ್ ಹಾಗೂ ಸಿಸಿ ಕ್ಯಾಮರಾಗಳ ಬಳಕೆ.
  • ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವಾಗುವಂತೆ ಜನರ ನಿಯಂತ್ರಣ, ತಂತ್ರಗಾರಿಕೆ, ಮೇಲ್ವಿಚಾರಣೆ ಮೂಲಕ ಚಲನವಲನ ಹಾಗೂ ಒಂದೇ ಕಡೆ ಅತೀ ಹೆಚ್ಚು ಸಂಖ್ಯೆಯಲ್ಲಿ ಜನ ಸೇರದಂತೆ ಕ್ರಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net