ಕೊಳತೊಡು ರಾಜ್ಯ ಹೆದ್ದಾರಿಯಲ್ಲಿ ಹುಲಿ ಸಂಚಾರ!

ವಿರಾಜಪೇಟೆ ಹಾಗೂ ಅಮ್ಮತ್ತಿ ವಲಯಗಳ ವಿಶೇಷ ತಂಡ ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿರುವುದು.
ವಿರಾಜಪೇಟೆ ಹಾಗೂ ಅಮ್ಮತ್ತಿ ವಲಯಗಳ ವಿಶೇಷ ತಂಡ ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯ ಕೊಳತೊಡು ರಾಜ್ಯ ಹೆದ್ದಾರಿ
  • ಹುಲಿ ಪ್ರತ್ಯಕ್ಷ
ಸಿದ್ದಾಪುರ: ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯ ಕೊಳತೊಡು ರಾಜ್ಯ ಹೆದ್ದಾರಿಯಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮುಂಜಾನೆ 4.30ರ ವೇಳೆಗೆ ಕೊಳತೊಡು ಗ್ರಾಮದ ಮುಖ್ಯ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆ. ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದವರು ಹುಲಿಯನ್ನು ಪ್ರತ್ಯಕ್ಷವಾಗಿ ಕಂಡು ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಲಭಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ವಿರಾಜಪೇಟೆ ಹಾಗೂ ಅಮ್ಮತ್ತಿ ವಲಯಗಳ ವಿಶೇಷ ತಂಡಗಳನ್ನು ನಿಯೋಜಿಸಿ ಹುಲಿ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕೆ.ಬೈಗೋಡು, ಕೊಳತೊಡು, ಬಿಟ್ಟಂಗಾಲ ಹಾಗೂ ನಾಂಗಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಲಿ ಸಂಚಾರದ ಹೆಜ್ಜೆ ಗುರುತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಶಿವರಾಂ, ಡಿಆರ್‌ಎಫ್‌ಒ ಮನೋಜ್, ಡಿಆರ್‌ಎಫ್‌ಒ ಪ್ರಶಾಂತ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಆರ್‌ಆರ್‌ಟಿ ಸಿಬ್ಬಂದಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.
ಹುಲಿಯ ನಿಖರ ಗುರುತು ಸದ್ಯಕ್ಕೆ ಪತ್ತೆಯಾಗಿಲ್ಲ. ಮುಂದಿನ ಶೋಧ ಕಾರ್ಯಾಚರಣೆಯಲ್ಲಿ ದೊರೆಯುವ ಸಾಕ್ಷ್ಯಾಧಾರ ಆಧರಿಸಿ ಅಗತ್ಯವಿದ್ದಲ್ಲಿ ಬೋನು ಅಳವಡಿಸುವುದು ಅಥವಾ ಟ್ರಾೃಪ್ ಕ್ಯಾಮರಾ ಅಳವಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ:ಹುಲಿ ಸಂಚಾರದ ಹಿನ್ನೆಲೆಯಲ್ಲಿ ಕೆ.ಬೈಗೋಡು, ಬಿಟ್ಟಂಗಾಲ, ನಾಂಗಾಲ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ತೋಟದ ಕಾರ್ಮಿಕರು, ವಾಯುವಿಹಾರಕ್ಕೆ ತೆರಳುವವರು ಹಾಗೂ ದ್ವಿಚಕ್ರ ವಾಹನ ಸವಾರರು ಮುಂಜಾನೆ ಮತ್ತು ಸಂಜೆ ವೇಳೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net