ಮೊದಲ ಹಂತದ ಗಣತಿ: ಮೊದಲ ಹಂತದಲ್ಲಿ ಬಂಡೀಪುರ, ಕುಂದಕೆರೆ, ಗೋಪಾಲಸ್ವಾಮಿಬೆಟ್ಟ ಹಾಗೂ ಗುಂಡ್ಲುಪೇಟೆ ಬಫರ್ ವಲಯಗಳಲ್ಲಿ ಗಣತಿ ಕಾರ್ಯ ಕೈಗೊಳ್ಳಲಾಗಿದೆ. ಇದು ಪೂರ್ಣಗೊಂಡ ನಂತರ ಇತರ ವಲಯಗಳಲ್ಲಿ ಗಣತಿ ನಡೆಸಲಾಗುತ್ತದೆ. ಮೊದಲ ದಿನ ಕಚೇರಿಯಲ್ಲಿ ತಮ್ಮ ಗಣತಿಗೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಿಬ್ಬಂದಿ ಎರಡು, ಮೂರು ಹಾಗೂ ನಾಲ್ಕನೇ ದಿನಗಳು ಕಾಡಿಗೆ ತೆರಳುವರು. ಪ್ರತಿ ಬೀಟ್‌ನಲ್ಲಿ 5 ಕಿಮೀ ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಕಣ್ಣಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಂಡುಬರುವ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಚಿರತೆ, ಕಾಡುನಾಯಿ, ನರಿ, ತೋಳಗಳು ಮತ್ತು ಬೃಹತ್ ಸಸ್ಯಹಾರಿಗಳಾದ ಆನೆ ಮತ್ತು ಕಾಟಿಗಳ ಕುರುಹುಗಳ ಸಮೀಕ್ಷೆ ನಡೆಸುವರು. ಆನೆ, ಹುಲಿಗಳ ಲದ್ದಿ, ಹೆಜ್ಜೆಗುರುತುಗಳನ್ನು ಪತ್ತೆಹಚ್ಚಿ ಡೇಟಾ ಶೀಟ್‌ನಲ್ಲಿ ದಾಖಲಿಸುವರು.
ಮುಂದಿನ ಎರಡು ದಿನಗಳ ಕಾಲ ಟ್ರ್ಯಾಂಜಾಕ್ಟ್ ಲೈನ್‌ನಲ್ಲಿ ಸಾಗುವ ಸಿಬ್ಬಂದಿ ಎಂಸಟ್ಯೆಾಪ್ ಇಕೋಲಾಜಿಕಲ್ ಆಪ್ ಬಳಸಿ ಗಣತಿ ನಡೆಸುವರು. ಪ್ರತ್ಯಕ್ಷವಾಗಿ ಕಂಡುಬರುವ ಕೃಷ್ಣ ಮೃಗ ಮತ್ತು ಕಾಡುಹಂದಿ ಮುಂತಾದ ಸಸ್ಯಹಾರಿ ಪ್ರಾಣಿಗಳ ಸಂಖ್ಯೆಯನ್ನು ಅಂದಾಜು ಮಾಡಲು ಸಾಧ್ಯವಾಗುತ್ತದೆ. ಅಂತಿಮ ದಿನ ಗಣತಿಕಾರ್ಯ ಪೂರ್ಣಗೊಂಡ ನಂತರ ಕಂಪ್ಯೂಟರ್‌ಗೆ ದತ್ತಾಂಶಗಳನ್ನು ಅಪ್ ಲೋಡ್ ಮಾಡುವರು.
ಗಣತಿ ಇತಿಹಾಸ ಅಂಕಿ-ಅಂಶಗಳು: ರಾಷ್ಟ್ರ ಮಟ್ಟದಲ್ಲಿ ಹುಲಿಗಳ ಸ್ಥಿತಿಗತಿ ಮೌಲ್ಯಮಾಪನದ ಅಂಗವಾಗಿ 2006, 2010, 2014, 2018 ಮತ್ತು 2022 ರಲ್ಲಿ ಪ್ರತಿ ನಾಲ್ಕು ವರ್ಷಗಳ ಅಂತರದಲ್ಲಿ ಹುಲಿಗಣತಿ ನಡೆಸಲಾಗಿತ್ತು. ಈ ಅಖಿಲ ಭಾರತ ಹುಲಿಗಣತಿ ವರದಿಯ ಪ್ರಕಾರ, ಭಾರತದಲ್ಲಿ 2006ರಲ್ಲಿ 1411, 2010ರಲ್ಲಿ 1706, 2014ರಲ್ಲಿ 2226 ಹಾಗೂ 2018 ರಲ್ಲಿ 2967 ಹುಲಿಗಳಿರುವುದು ಬಹಿರಂಗವಾಗಿತ್ತು.
2022ರ ಗಣತಿಯ ಪ್ರಕಾರ ಭಾರತವು 3682 ಹುಲಿಗಳನ್ನು ಹೊಂದಿದ್ದು, ಇದು ವಿಶ್ವದ ಒಟ್ಟು ಹುಲಿಗಳ ಸಂಖ್ಯೆಯ ಶೇ. 70 ರಷ್ಟಿದೆ. ಕರ್ನಾಟಕದಲ್ಲಿ 2006 ರಲ್ಲಿ 290, 2010 ರಲ್ಲಿ 300, 2014 ರಲ್ಲಿ 406, 2018ರಲ್ಲಿ 524ಕ್ಕೆ ಏರಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿತ್ತು. ಆದರೆ 2018ರಲ್ಲಿ 324 ಹುಲಿಗ ಸಂಖ್ಯೆಯೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು. ಪ್ರಸ್ತುತ ಕರ್ನಾಟಕವು 563 ಹುಲಿಗಳನ್ನು ಹೊಂದಿದ್ದು, ಮಧ್ಯಪ್ರದೇಶದ ನಂತರ ಎರಡನೇ ಸ್ಥಾನ ಪಡೆದುಕೊಂಡಿದೆ.