"ಅಂತ್ಯವಾಯ್ತು" ಕಿರುಚಿತ್ರ ಪೋಸ್ಟರ್ ಅಂಟಿಸಲು ತೆರಳಿದ್ದ ಯುವಕರ ಜೀವನವೇ ಅಂತ್ಯ
ರಾಯಚೂರಿನಲ್ಲಿ ಕಿರುಚಿತ್ರ ನಿರ್ಮಿಸಿ ಪೋಸ್ಟರ್ ಅಂಟಿಸಲು ತೆರಳಿದ್ದ ಆರು ಯುವಕರ ಪೈಕಿ ಮೂವರ ಸಾವು
ರಾಯಚೂರಿನ ದೇವದುರ್ಗದಲ್ಲಿ ನಡೆದ ಪ್ರಕರಣ, ಕುಟುಂಬಸ್ಥರ ಆಕ್ರಂದನ
ದೇವದುರ್ಗ: ಕಟ್ಟಡದ ಮೇಲ್ಛಾವಣಿ ಕುಸಿದ ಪರಿಣಾಮ ಕಿರುಚಿತ್ರದ ಪೋಸ್ಟರ್ ಅಂಟಿಸಲು ಹೋಗಿದ್ದ ಮೂವರು ಯುವಕರು ಮೃತಪಟ್ಟ ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ. ಮೂವರಿಗೆ ಗಂಭೀರಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ
ಮೃತರನ್ನು ರವಿಕುಮಾರ(21), ನಾಗರಾಜ ಕ್ಯಾದಿಗ್ಗೇರಾ (19) ಹಾಗೂ ಅರ್ಜುನ್ (21) ಎಂದು ಗುರುತಿಸಲಾಗಿದೆ. ಪ್ರಭು ಮಾತ್ಪಳ್ಳಿ ಹಾಗೂ ತಾಂಡಾ ಮೂಲದ ಉಮೇಶ್ ಎಚ್ಎನ್ ಹಾಗೂ ಅಭಿಷೇಕ್ಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ನಡೆದಿದ್ದೇನು?
ನಾಗರಾಜ ಕ್ಯಾದಿಗ್ಗೇರಾ ಹೆಸರಿನ ಯುವಕ ಅಂತ್ಯವಾಯ್ತು ಎನ್ನುವ ಕಿರುಚಿತ್ರ ತಯಾರಿಸಿದ್ದ. ಆರು ಮಂದಿ ಯುವಕರು ಶಾರ್ಟ್ ಸಿನಿಮಾದ ಪೋಸ್ಟರ್ ಅಂಟಿಸಲು ತೆರಳಿದ್ದರು. ಈ ವೇಳೆ ಕಟ್ಟಡದಲ್ಲಿ ಏಕಾಏಕಿ ಸಿಮೆಂಟ್ ಕಳಚಿ ಬಿದ್ದಿದ್ರಿಂದ ಯುವಕರು ಮೃತಪಟ್ಟಿದ್ದಾರೆ. ಸದ್ಯ ಪ್ರಕರಣ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಪರಿಹಾರಕ್ಕೆ ಒತ್ತಾಯ
ಘಟನೆಯಲ್ಲಿ ಮೃತಪಟ್ಟ ಯುವಕರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಒತ್ತಾಯಿಸಿದ್ದಾರೆ. ರಾಜ್ಯದ ವಿವಿಧ ಭಾಗದಲ್ಲಿ ಇಂತಹ ಘಟನೆ ಮರುಕಳಿಸುತ್ತಿದೆ. ಸರ್ಕಾರ ಸುರಕ್ಷತಾ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).