ಶಾಲೆ ಬಿಟ್ಟ ಸಾವಿರಾರು ಮಕ್ಕಳು!

ಮಕ್ಕಳೊಂದಿಗೆ ಗುಳೆ ಹೊರಟ ಹೊಸಪೇಟೆಯ ಕಮಲಾಪುರ ತಾಂಡಾ ಜನರು.
ಮಕ್ಕಳೊಂದಿಗೆ ಗುಳೆ ಹೊರಟ ಹೊಸಪೇಟೆಯ ಕಮಲಾಪುರ ತಾಂಡಾ ಜನರು.
Published on

ಪ್ರಮುಖ ಮುಖ್ಯಾಂಶಗಳು

  • ಬರಡ ಎಫೆಕ್ಟ್
  • 35 ಸಾವಿರ ಲಂಬಾಣಿ ಕುಟುಂಬಗಳ ಗುಳೆ
  • 10 ಸಾವಿರಕ್ಕೂ ಹೆಚ್ಚು ಮಕ್ಕಳ ಶಿಕ್ಷಣ ಸಂಪೂರ್ಣವಾಗಿ ಮೊಟಕು
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಮುಂಗಾರು ಕಣ್ಣಾಮುಚ್ಚಾಲೆ ಪರಿಣಾಮ ಭೀಕರ ಬರಗಾಲಕ್ಕೆ ಸಿಲುಕಿರುವ ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಲಂಬಾಣಿ ತಾಂಡಾಗಳಲ್ಲಿ ಮಕ್ಕಳ ಶಿಕ್ಷಣಕ್ಕೂ ಬರ ಎದುರಾಗಿದೆ. ಹೊತ್ತಿನ ತುತ್ತಿಗಾಗಿ ಸುಮಾರು 260 ತಾಂಡಾಗಳ 35 ಸಾವಿರಕ್ಕೂ ಅಧಿಕ ಕುಟುಂಬಗಳು ಅನ್ಯ ಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ಗುಳೆ ಹೊರಟಿರುವ ಪರಿಣಾಮ 10 ಸಾವಿರಕ್ಕೂ ಹೆಚ್ಚು ಮಕ್ಕಳ ಶಿಕ್ಷಣ ಸಂಪೂರ್ಣವಾಗಿ ಮೊಟಕುಗೊಂಡಿದೆ.
ರಾಜ್ಯಾದ್ಯಂತ ಈ ವರ್ಷ ಮುಂಗಾರು ಕೊರತೆ ಕಾಡಿದೆ. ಅದರಲ್ಲೂ ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಲಂಬಾಣಿ ತಾಂಡಾಗಳ ಜನತೆಗೆ ಬರ ಸಿಡಿಲು ಎದುರಾಗಿದೆ. ಜಿ-ರಾಮ್ ಜಿ ಯೋಜನೆಯಡಿ ವರ್ಷಕ್ಕೆ ಇಂತಿಷ್ಟು ದಿನ ಎಂದು ಕೆಲಸ ಕೊಟ್ಟರೂ ಇವರ ಬದುಕು ಹಸನಾಗಿಲ್ಲ. ಹೀಗಾಗಿ ಎಂದಿನಂತೆ ಈ ವರ್ಷವೂ ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಜಾನುವಾರುಗಳನ್ನು ದಲ್ಲಾಳಿಗಳಿಗೆ ಮಾರಿ, ವೃದ್ಧರನ್ನು ಮನೆಯಲ್ಲಿರಿಸುವ ಕುಟುಂಬಸ್ಥರು ಹೆಂಡತಿ, ಮಕ್ಕಳ ಸಮೇತ ಸಿಕ್ಕಸಿಕ್ಕ ವಾಹನ ಏರಿ ದೂರದೂರಿಗೆ ತೆರಳುತ್ತಿದ್ದಾರೆ. ಈ ಮೂರು ಜಿಲ್ಲೆಗಳಲ್ಲೇ ಸುಮಾರು 10 ಸಾವಿರಕ್ಕೂ ಹೆಚ್ಚು ಮಕ್ಕಳು ಊರು ತೊರೆದಿರುವುದರಿಂದ ಶಾಲೆಗಳು ಪಾಳು ಬೀಳುವಂತಾಗಿದೆ.
ಗುಳೆಗೆ ಕಾರಣವೇನು?: ಕಲ್ಯಾಣ ಕರ್ನಾಟಕ ಜಿಲ್ಲೆಗಳ ಬಹುತೇಕ ತಾಂಡಾಗಳಿಗೆ ವಲಸೆಯೇ ಬದುಕಿಗೆ ಆಸರೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಕ್ಕೆ 100 ದಿನ ಕೆಲಸ ನೀಡಲಾಗುತ್ತಿದ್ದರೂ ಉಳಿದ ದಿನಗಳಲ್ಲಿ ಸಮರ್ಪಕ ಕೆಲಸ ದೊರೆಯದ ಕಾರಣ ಊರು ತೊರೆಯುತ್ತಾರೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಮತ್ತು ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ.
ಅಧಿಕಾರಿಗಳ ಉದಾಸೀನ: ತಾಂಡಾಗಳಲ್ಲಿ ಅಸುರಕ್ಷತೆಯ ಭೀತಿಯಿಂದಾಗಿ ಮಕ್ಕಳನ್ನು ಪಾಲಕರು ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮೈಗ್ರೇಷನ್ ಕಾರ್ಡ್ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರಲು ಸರ್ಕಾರ ವಿಶೇಷ ವಸತಿ ಶಾಲೆ ಅಥವಾ ಚಿಣ್ಣರ ತಂಗುದಾಣದಂತಹ ತಾತ್ಕಾಲಿಕ ವ್ಯವಸ್ಥೆ ಜಾರಿಗೆ ತರಬೇಕಿತ್ತು. ಆದರೆ, ಆಡಳಿತ ವರ್ಗದ ಉದಾಸೀನತೆಯಿಂದಾಗಿ ಯೋಜನೆಗಳು ಕಾಗದಕ್ಕಷ್ಟೇ ಸೀಮಿತವಾಗಿವೆ.
ಅಸುರಕ್ಷಿತ ಬದುಕು: ಮೈಸೂರು, ಮಂಡ್ಯ ಜಿಲ್ಲೆಗಳ ಕಬ್ಬು ಕಟಾವು ಉದ್ಯಮವನ್ನು ಇಲ್ಲಿನ ಜನ ಹೆಚ್ಚು ನಂಬಿಕೊಂಡಿದ್ದಾರೆ. ಮಳೆ, ಗಾಳಿ, ಬಿಸಿಲೆನ್ನದೆ ಕಡುಕಷ್ಟದ ಪರಿಸ್ಥಿತಿಯಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದ ಟೆಂಟ್‌ಗಳಲ್ಲಿ ವಾಸಿಸುವ ಇವರ ಆರೋಗ್ಯ ದಿನೇದಿನೆ ಕ್ಷೀಣಿಸುತ್ತಿದೆ. ಕಾವೇರಿ ಕಣಿವೆ ಹಾಗೂ ಮಲೆನಾಡಿನ ಕಾಫಿ ತೋಟಗಳಲ್ಲಿ ಸೂಕ್ತ ಸುರಕ್ಷತೆಯಿಲ್ಲದೆ ಎಷ್ಟೋ ಕಾರ್ಮಿಕರು ವನ್ಯಜೀವಿ, ವಿಷಜಂತುಗಳಿಗೆ ತುತ್ತಾಗಿ ಹಾಗೂ ರೋಗ-ರುಜಿನಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೆತ್ತವರ ಕಣ್ಣೆದುರೇ ದುರಂತಗಳಲ್ಲಿ ಮಕ್ಕಳು ಸಾವಿಗೀಡಾದ ಕರುಣಾಜನಕ ಘಟನೆಗಳೂ ಜರುಗಿವೆ.
ಮಧ್ಯವರ್ತಿಗಳ ಜಾಲ ಸಕ್ರಿಯ: ಮೈಸೂರು ಮಂಡ್ಯ, ಕಾಫಿನಾಡಿನ ಕಡೆ ಕರೆದುಕೊಂಡು ಹೋಗಲು ಮಧ್ಯವರ್ತಿಗಳಿದ್ದಾರೆ. ಅಲ್ಲಿನ ಕೆಲಸ ಕಾರ್ಯಗಳಿಗಾಗಿ ಕಾರ್ಮಿಕರನ್ನು ಲಾರಿ, ಟ್ರ್ಯಾಕ್ಟರ್ ಹಾಗೂ ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುತ್ತಾರೆ. ಈ ಭಾಗದಲ್ಲಿ ಮಧ್ಯವರ್ತಿಗಳ ಜಾಲವೇ ಇದೆ.

3 ಜಿಲ್ಲೆ ಶೇ. 70 ವಲಸೆ

ವಿಜಯನಗರ 145, ಕೊಪ್ಪಳ 105, ಬಳ್ಳಾರಿ 10 ಸೇರಿ ಮೂರು ಜಿಲ್ಲೆಯಲ್ಲಿ ಒಟ್ಟು 260 ತಾಂಡಾಗಳಿವೆ. ಈ ತಾಂಡಾಗಳಿಂದ ಶೇ. 70 ಕುಟುಂಬಗಳು ಬೆಂಗಳೂರು, ಮೈಸೂರು, ಮಂಡ್ಯ, ಹುಬ್ಬಳ್ಳಿ ಸೇರಿ ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಮಕ್ಕಳೊಂದಿಗೆ ಗುಳೆ ಹೋಗುತ್ತಿದ್ದಾರೆ.

ಬಳಪ ಹಿಡಿಯುವ ಕೈಗಳಲ್ಲಿ ಕುಡುಗೋಲು

ಇಲ್ಲಿನ ಲಂಬಾಣಿ ತಾಂಡಾಗಳ ಮಕ್ಕಳು ಶಾಲೆಗೆ ಹೋಗಿ ಬಳಪ ಹಿಡಿದಿದ್ದಕ್ಕಿಂತ ಕಬ್ಬು ಕಡಿಯುವ ಕುಡುಗೋಲು, ಇಟ್ಟಿಗೆ, ಮಣ್ಣು ಹೊರುವ ಬುಟ್ಟಿ ಹಿಡಿಯುವುದೇ ಹೆಚ್ಚು. ಲಂಬಾಣಿ ಜನರು ಹೊಟ್ಟೆಪಾಡಿಗಾಗಿ ಮಳೆ, ಚಳಿ, ಬಿಸಿಲೆನ್ನದೆ ಊರೂರಿಗೆ ಅಲೆದಾಡುತ್ತಾರೆ. ಇವರ ಮಕ್ಕಳು ಅನ್ಯ ಜಿಲ್ಲೆ ಹಾಗೂ ರಾಜ್ಯಗಳ ಕಟ್ಟಡ ಕಾಮಗಾರಿಗಳಲ್ಲೋ, ಕಬ್ಬು ಕಟಾವು ಮಾಡುವ ಮೈದಾನಗಳಲ್ಲೋ ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ.
"

ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದ್ದರೂ ನಾನಾ ಕಾರಣಗಳಿಂದ ಕೆಲ ಕೂಲಿಕಾರರು ದೂರದ ಊರುಗಳಿಗೆ ಗುಳೆ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಆದರೂ, ಕೆಲಸ ಕೇಳಿ ಬಂದವರಿಗೆ ಈ ಯೋಜನೆಯಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಇಲ್ಲಿನ ಸ್ಥಿತಿಗತಿಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಮೈಗ್ರೇಷನ್ ಕಾರ್ಡ್ ಕೊಡಲಾಗುತ್ತದೆ.

— ಕವಿತಾ ಎಸ್. ಮನ್ನಿಕೇರಿ ಜಿಲ್ಲಾಧಿಕಾರಿ, ವಿಜಯನಗರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net