ಶಾಲೆ ಬಿಟ್ಟ ಸಾವಿರಾರು ಮಕ್ಕಳು! ಬರದ ಎಫೆಕ್ಟ್ 35 ಸಾವಿರ ಲಂಬಾಣಿ ಕುಟುಂಬಗಳ ಗುಳೆ

ಬರದ ಎಫೆಕ್ಟ್ 35 ಸಾವಿರ ಲಂಬಾಣಿ ಕುಟುಂಬಗಳ ಗುಳೆ
ಬರದ ಎಫೆಕ್ಟ್ 35 ಸಾವಿರ ಲಂಬಾಣಿ ಕುಟುಂಬಗಳ ಗುಳೆ
Published on

| ಮಂಜುನಾಥ ಅಯ್ಯಸ್ವಾಮಿ, ಹೊಸಪೇಟೆ

ಮುಂಗಾರು ಕಣ್ಣಾಮುಚ್ಚಾಲೆ ಪರಿಣಾಮ ಭೀಕರ ಬರಗಾಲಕ್ಕೆ ಸಿಲುಕಿರುವ ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಲಂಬಾಣಿ ತಾಂಡಾಗಳಲ್ಲಿ ಮಕ್ಕಳ ಶಿಕ್ಷಣಕ್ಕೂ ಬರ ಎದುರಾಗಿದೆ. ಹೊತ್ತಿನ ತುತ್ತಿಗಾಗಿ ಸುಮಾರು 260 ತಾಂಡಾಗಳ 35 ಸಾವಿರಕ್ಕೂ ಅಧಿಕ ಕುಟುಂಬಗಳು ಅನ್ಯ ಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ಗುಳೆ ಹೊರಟಿರುವ ಪರಿಣಾಮ 10 ಸಾವಿರಕ್ಕೂ ಹೆಚ್ಚು ಮಕ್ಕಳ ಶಿಕ್ಷಣ ಸಂಪೂರ್ಣವಾಗಿ ಮೊಟಕುಗೊಂಡಿದೆ.

ರಾಜ್ಯಾದ್ಯಂತ ಈ ವರ್ಷ ಮುಂಗಾರು ಕೊರತೆ ಕಾಡಿದೆ. ಅದರಲ್ಲೂ ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಲಂಬಾಣಿ ತಾಂಡಗಳ ಜನತೆಗೆ ಬರ ಸಿಡಿಲು ಎದುರಾಗಿದೆ. ಜಿ-ರಾಮ್ ಜಿ ಯೋಜನೆ ಅಡಿ ವರ್ಷಕ್ಕೆ ಇಂತಿಷ್ಟು ದಿನ ಎಂದು ಕೆಲಸ ಕೊಟ್ಟರೂ ಇವರ ಬದುಕು ಹಸನಾಗಿಲ್ಲ. ಹೀಗಾಗಿ ಎಂದಿನಂತೆ ಈ ವರ್ಷವೂ ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಜಾನುವಾರುಗಳನ್ನು ದಲ್ಲಾಳಿಗಳಿಗೆ ಮಾರಿ, ವೃದ್ಧರನ್ನು ಮನೆಯಲ್ಲಿರಿಸುವ ಕುಟುಂಬಸ್ಥರು ಹೆಂಡತಿ, ಮಕ್ಕಳ ಸಮೇತ ಸಿಕ್ಕಸಿಕ್ಕ ವಾಹನ ಏರಿ ದೂರದೂರಿಗೆ ತೆರಳುತ್ತಿದ್ದಾರೆ. ಈ ಮೂರು ಜಿಲ್ಲೆಗಳಲ್ಲೇ ಸುಮಾರು 10 ಸಾವಿರಕ್ಕೂ ಹೆಚ್ಚು ಮಕ್ಕಳು ಊರು ತೊರೆದಿರುವುದರಿಂದ ಶಾಲೆಗಳು ಪಾಳು ಬೀಳುವಂತಾಗಿದೆ.

ಬಳಪ ಹಿಡಿವ ಕೈಗಳಲ್ಲಿ ಕುಡುಗೋಲು

ಇಲ್ಲಿನ ಲಂಬಾಣಿ ತಾಂಡಾಗಳ ಮಕ್ಕಳು ಶಾಲೆಗೆ ಹೋಗಿ ಬಳಪ ಹಿಡಿದಿದ್ದಕ್ಕಿಂತ ಕಬ್ಬು ಕಡಿಯುವ ಕುಡುಗೋಲು, ಇಟ್ಟಿಗೆ, ಮಣ್ಣು ಹೊರುವ ಬುಟ್ಟಿ ಹಿಡಿಯುವುದೇ ಹೆಚ್ಚು. ಲಂಬಾಣಿ ತಾಂಡಾದ ಜನರು ಹೊಟ್ಟೆಪಾಡಿಗಾಗಿ ಮಳೆ, ಚಳಿ, ಬಿಸಿಲೆನ್ನದೆ ಊರೂರಿಗೆ ಅಲೆದಾಡುತ್ತಾರೆ. ಇವರ ಮಕ್ಕಳು ಅನ್ಯ ಜಿಲ್ಲೆ ಹಾಗೂ ರಾಜ್ಯಗಳ ಕಟ್ಟಡ ಕಾಮಗಾರಿಗಳಲ್ಲೋ, ಕಬ್ಬು ಕಟಾವು ಮಾಡುವ ಮೈದಾನಗಳಲ್ಲೋ ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net