ಈ ವರ್ಷ ಬಿಸಿಲು ಹೆಚ್ಚಳ; ಮಾರ್ಚ್ನಿಂದ ಮೇವರೆಗೂ ಗರಿಷ್ಠ ತಾಪಮಾನ
Temperatures
Published on:
Copied
Follow Us
ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿಯ ಬೇಸಿಗೆಯಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾರ್ಚ್ನಿಂದ ಮೇವರೆಗೆ ತಾಪಮಾನ ಸಾಮಾನ್ಯಕ್ಕಿಂತ ಕಠಿಣವಾಗಿರಲಿದೆ.
ರಾಜ್ಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಕಡಿಮೆ ಶಾಖದ ಅಲೆ ಮತ್ತು ಬೆಚ್ಚಗಿನ ರಾತ್ರಿ ಇರಲಿದೆ. ಮಾರ್ಚ್ ಆರಂಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಳವಾಗಲಿದ್ದು, ಕರಾವಳಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು ಶೇ.65 ಹೆಚ್ಚಲಿದೆ. ಬೆಂಗಳೂರು ನಗರ ಸೇರಿ ಕೆಲ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಬಿಸಿ ವಾತಾವರಣ ಇರಲಿದೆ.
ರಾಜ್ಯದ ಇತರ ಜಿಲ್ಲೆಗಳಿಗಿಂತ ಕಲಬುರಗಿಯಲ್ಲಿ ಅತಿ ಹೆಚ್ಚು 45 ಡಿ.ಸೆ. ಉಷ್ಣಾಂಶ ದಾಖಲಾಗಲಿದೆ. ವಿಜಯಪುರ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ, ಧಾರವಾಡ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ ಸೇರಿ ಉ.ಕರ್ನಾಟಕದ ಜಿಲ್ಲೆಗಳಲ್ಲಿ 43 ಡಿ.ಸೆ., ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ತುಮಕೂರು, ಬೆಂ.ದಕ್ಷಿಣ, ಬೆಂ.ಗ್ರಾಮಾಂತರದಲ್ಲಿ 40 ಡಿ.ಸೆ.ವರೆಗೆ ಉಷ್ಣಾಂಶ ದಾಖಲಾಗುವ ಸಂಭವ ಇದೆ.
"
ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಜಾಸ್ತಿ ಬಿಸಿಲು ಇರಲಿದೆ. ಮಾ.15ರಿಂದ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ. ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಕೆಂಡದಂತಹ ಬಿಸಿಲು ಇರಲಿದೆ. ಸರ್ಕಾರ ಸಹ ಬಿಸಿಲು ಎದುರಿಸಲು ಸಿದ್ಧವಾಗಬೇಕು.
ಸಿ.ಎಸ್.ಪಾಟೀಲ್ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ
ಬೆಂಗಳೂರಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಬಿಸಿಲು ಇರಲಿದ್ದು, ಗರಿಷ್ಠ 39 ಡಿ.ಸೆ.ವರೆಗೆ ಉಷ್ಣಾಂಶ ಕಂಡುಬರಲಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿಯೂ 40 ಡಿ.ಸೆ.ವರೆಗೆ ಉಷ್ಣಾಂಶವಿರಲಿದೆ. ಕರ್ನಾಟಕದ ಬಹುತೇಕ ಭೌಗೋಳಿಕ ಪ್ರದೇಶಗಳಲ್ಲಿ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಬಿಸಿಲಿನ ತೀವ್ರತೆ ಜಾಸ್ತಿ ಇರಲಿದೆ. ಈ ಸಂದರ್ಭದಲ್ಲಿ ಬೀಸಿಗಾಳಿ(ಹೀಟ್ವೇವ್) ಬೀಸಲಿದೆ.
ಕಾರಣವೇನು?: ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ‘ಲಾ ನಿನಾ’ ತಗ್ಗುವುದು ಮತ್ತು ಒಣಗಾಳಿ ಬೀಸುವುದೂ ಸೇರಿ ಇತರ ಹವಾಮಾನ ವೈಪರೀತ್ಯ ಕಾರಣಗಳಿಂದ ಹಲವು ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 4-5 ಡಿ. ಸೆ.ಉಷ್ಣಾಂಶ ಹೆಚ್ಚಬಹುದೆಂದು ಹವಾಮಾನ ಇಲಾಖೆ ಹೇಳಿದೆ.