ಇದು ನಮ್ಮ ಮೆಟ್ರೋ, ನಿಮ್ಮ ಪಬ್ ಅಲ್ಲ! 11 ಯುವತಿಯರ ಪುಂಡಾಟಕ್ಕೆ ನೆಟ್ಟಿಗರ ಫುಲ್ ಕ್ಲಾಸ್.. | Metro

NammaMetro
NammaMetro
Published on
ಬೆಂಗಳೂರು: ಬೆಂಗಳೂರಿನ ಟ್ರಾಫಿಕ್​ ನಿಯಂತ್ರಣಕ್ಕೆ ಪರ್ಯಾಯವಾಗಿ ಬಂದತಹ ಸಾರ್ವಜನಿಕ ಸಾರಿಗೆ ನಮ್ಮ ಮೆಟ್ರೋ( Metro). ಇದು ತನ್ನದೇ ಆದ ನಿಯಮಗಳನ್ನು ಹೊಂದಿದೆ. ಮೆಟ್ರೋದಲ್ಲಿ ತಿನ್ನುವುದು, ಸಹ ಪ್ರಯಾಣಿಕರಿಗೆ ಕಿರಿಕಿರಿಯಾಗುವಂತೆ ಜೋರಾಗಿ ಹಾಡು ಹಾಕುವುದು, ಪಾನೀಯ ಕುಡಿಯುವುದು, ಫ್ಲೋರ್​ ಮೇಲೆ ಕುಳಿತುಕೊಳ್ಳುವುದು ಸೇರಿದಂತೆ ಇತರ ವಿಷಯಗಳ ಮೇಲೆ ನಿಷೇಧ ಹೇರಿದೆ. ಆದರೆ,ಇತ್ತೀಚೆಗೆ ಯುವತಿಯರ ಗುಂಪೊಂದು ನಮ್ಮ ಮೆಟ್ರೋದೊಳಗೆ(Bengaluru Metro ) ಬಾಲಿವುಡ್​ ಚಿತ್ರದ ಹಾಡು ಹಾಡಿ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿರುವ ವಿಡಿಯೋಗಳು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ಹನ್ನೊಂದು ಜನರ ವಿರುದ್ಧ ದೂರು

ಯುವತಿಯರು ಬಾಲಿವುಡ್​ ಹಾಡು ಹಾಡುತ್ತಿದ್ದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಎಚ್ಚೆತ್ತ (Bengaluru Metro Rail Corporation Limited) ಬಿಎಂಆರ್​ಸಿಎಲ್​ ಅಧಿಕಾರಿಗಳು, ಸಂಚಾರಕ್ಕೆ ಅಡ್ಡಪಡಿಸಿದ ಮತ್ತು ಇತರ ಪ್ರಯಾಣಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ 11 ಜನ ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಿದೆ.

ವಿಡಿಯೋದಲ್ಲಿ ಏನಿದೆ?

ಮಾದಾವರದಿಂದ ಕೆಂಪೇಗೌಡ ಇಂಟರ್ಚೇಂಜ್ ಮೆಟ್ರೋ ನಿಲ್ದಾಣದ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿ ಎಂಟಕ್ಕಿಂತ ಹೆಚ್ಚು ಯುವತಿಯರ ಗುಂಪೊಂದು ಮೆಟ್ರೋ ಹತ್ತಿದ್ದರು. ಎಲ್ಲರೂ ಕೂರುವಷ್ಟು ಜಾಗವಿರದ ಹಿನ್ನೆಲೆ ಬೋಗಿಯ ನೆಲದ ಹಾಸಿನ ಮೇಲೆ, ಒಬ್ಬರ ಮೇಲೆ ಒಬ್ಬರು ಕುಳಿತ್ತಿದ್ದರು. ಖಾಸಗಿ ಕಾನ್ಸರ್ಟ್​ ಮುಗಿಸಿಕೊಂಡು ಬಂದಿದ್ದ ಅವರು ಅದೇ ಗುಂಗಿನಲ್ಲಿ ಹಿಂದಿ ಹಾಡುಗಳನ್ನು ಎಲ್ಲರಿಗೂ ಕೇಳುವಂತೆ ಹಾಡುತ್ತಿರುವುದು ವಿಡಿಯೋದಲ್ಲಿದೆ.
ಮುಂದುವರೆದು, ಇದನ್ನು ರೆಕಾರ್ಡ್​ ಮಾಡಿಕೊಂಡ ಯುವತಿಯೊಬ್ಬರು ಇದಕ್ಕೆ ಹಿನ್ನೆಲೆ ವಾಯ್ಸ್ ನೀಡಿದ್ದಾರೆ. ಏನೂ ಮಾಡಬೇಕು ಎಂದು ತಿಳಿಯುತ್ತಲೇ ಇಲ್ಲ. ಬೆಂಗಳೂರು ಮೆಟ್ರೋ ನಿಯಮದ ಪ್ರಕಾರ ಕೆಳಗೆ ಕೂರುವಂತಿಲ್ಲ. ಹಾಡುವಂತಿಲ್ಲ. ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ದೆಹಲಿ ಮೆಟ್ರೋದಂತೆ ಆಗುತ್ತಿದೆ ಎಂದೆನಿಸುತ್ತದೆ. ಇವರ ಮೇಲೆ ಕ್ರಮ ಕೈಗೊಳ್ಳದೇ ಹಾಗೆ ಬಿಟ್ಟು ಬಿಟ್ಟರೇ ಮುಂದಿನ ದಿನಗಳಲ್ಲಿ ಇನ್ನು ಕೆಲವರು ಇಂತದ್ದನ್ನೇ ಅಳವಡಿಸಿಕೊಂಡು ಬಿಡುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ರೂಪೇಶ್ ರಾಜಣ್ಣ ಕಿಡಿ
ನಮ್ಮ ಮೆಟ್ರೋ ರೈಲಿನಲ್ಲಿ ನಡೆದಿದೆ ಎನ್ನಲಾದ ಅಸಭ್ಯ ವರ್ತನೆಯ ವಿರುದ್ಧ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಘಟನೆಯ ವಿಡಿಯೋ ಹಂಚಿಕೊಂಡಿರುವ ಅವರು, ಬಿಎಂಆರ್​ಸಿಎಲ್ (BMRCL) ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಬೆಂಗಳೂರನ್ನು ಭೀಮಾರು (BIMARU) ರಾಜ್ಯಗಳ ಬೀದಿ ಅಂದುಕೊಂಡಿದ್ದೀರಾ?" ಎಂದು ಪ್ರಶ್ನಿಸಿರುವ ರಾಜಣ್ಣ, "ಈ ಅನಾಗರಿಕರಿಗೆ ಬುದ್ಧಿ ಹೇಳುವವರು ಯಾರೂ ಇಲ್ಲವೇ? ಮೆಟ್ರೋ ಅಧಿಕಾರಿಗಳೇ, ಇಂತಹ ಕೆಟ್ಟ ನಾಟಕಗಳನ್ನು ಅವರ ಊರಿನಲ್ಲಿ ಇಟ್ಟುಕೊಳ್ಳಲು ಹೇಳಿ. ಕರ್ನಾಟಕದ ನೆಲದಲ್ಲಿ ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ," ಎಂದು ಗುಡುಗಿದ್ದಾರೆ.
ಅಲ್ಲದೆ, ಇಂತಹ ಕೃತ್ಯಗಳಿಗೆ ಮೆಟ್ರೋ ಸಿಬ್ಬಂದಿಯೇ ಸಾಥ್ ನೀಡುತ್ತಿದ್ದಾರೆಯೇ ಎಂಬ ಸಂಶಯ ವ್ಯಕ್ತಪಡಿಸಿರುವ ಅವರು, ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಸಿಟಿ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.

ನೆಟ್ಟಿಗರಿಂದ ಪರ-ವಿರುದ್ಧ ಚರ್ಚೆ

ಕೆಲವು ಬಳಕೆದಾರರು ಈ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. "ಇರ್ಲಿ ಬಿಡ್ರಪ್ಪ, ಅವರು ದಿನದ 24 ಗಂಟೆಯೂ ಮೆಟ್ರೋದಲ್ಲೇ ಇರುತ್ತಾರೆಯೇ? ಒಂದು ಹಾಡು ಹಾಡಿದರೆ ಅದರಲ್ಲಿ ತಪ್ಪೇನಿದೆ? ಇದನ್ನು ಇಷ್ಟೊಂದು ದೊಡ್ಡದು ಮಾಡುವ ಅಗತ್ಯವಿಲ್ಲ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಕನ್ನಡಿಗರಾಗಿದ್ದರೆ ಸುಮ್ಮನಿರುತ್ತಿದ್ದರೇ?

ಆದರೆ, ಬಹುತೇಕ ಕನ್ನಡಿಗರು ಮೆಟ್ರೋ ಅಧಿಕಾರಿಗಳ ತಾರತಮ್ಯದ ವಿರುದ್ಧ ಕಿಡಿಕಾರಿದ್ದಾರೆ. "ಒಂದು ವೇಳೆ ಅದೇ ಜಾಗದಲ್ಲಿ ಒಬ್ಬ ಕನ್ನಡಿಗ ಇಂತಹ ಕೆಲಸ ಮಾಡಿದ್ದರೆ, ಇಷ್ಟೊತ್ತಿಗೆ ಅಧಿಕಾರಿಗಳು ಆತನನ್ನು ಮೆಟ್ರೋದಿಂದ ಹೊರಹಾಕಿ ದಂಡ ವಿಧಿಸುತ್ತಿದ್ದರು. ಆದರೆ, ಈ ಅನಾಗರಿಕರಿಗೆ ನಿಯಮಗಳಿಂದ ವಿನಾಯಿತಿ ನೀಡಲಾಗಿದೆಯೇ?" ಎಂದು ಮತ್ತೊಬ್ಬ ಬಳಕೆದಾರರು ಖಾರವಾಗಿ ಪ್ರಶ್ನಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net