ನೌಕಾಪಡೆಯ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಬೆಂಗಳೂರಿನಲ್ಲಿನ ಬಾಲ್ಯದ ದಿನಗಳು ಹೀಗಿದ್ದವು

ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್
ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ನರಸಿಂಹರಾಜ ಕಾಲನಿ (ಎನ್.ಆರ್. ಕಾಲನಿ) ನಿವಾಸಿಯಾಗಿದ್ದರು
  • ತಮ್ಮ ಬಾಲ್ಯದ ಶಿಕ್ಷಣವನ್ನು 11ನೇ ವಯಸ್ಸಿನವರೆಗೂ ಬಿಷಪ್ ಕಾಟನ್ ಶಾಲೆಯಲ್ಲಿಯೇ ಓದಿದ ಕೃಷ್ಣ ಸ್ವಾಮಿನಾಥನ್ ಬಳಿಕ, ಬಿಜಾಪುರದಲ್ಲಿರುವ ಸೈನಿಕ ಶಾಲೆಗೆ ಸೇರ್ಪಡೆ
  • ಶಾಲಾ ದಿನಗಳಲ್ಲಿ ಲಾಲ್‌ಬಾಗ್ ಅವರ ನೆಚ್ಚಿನ ತಾಣಗಳಲ್ಲಿ ಒಂದಾಗಿತ್ತು. ಸ್ನೇಹಿತರೊಂದಿಗೆ ಮರಗಳ ಮೇಲಿದ್ದ ಕೋತಿಗಳನ್ನು ನೋಡುವುದು, ಅವುಗಳ ಹಿಂದೆ ಓಡುವುದು ಅವರ ಹವ್ಯಾಸಗಳಲ್ಲಿ ಒಂದಾಗಿತ್ತು.
ಬೆಂಗಳೂರು: ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ಭಾನುವಾರ ಅಧಿಕಾರ ಸ್ವೀಕರಿಸಿರುವ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಬೆಂಗಳೂರಿನವರು ಎಂಬುದು ಹೆಮ್ಮಯ ಸಂಗತಿಯಾಗಿದೆ.
ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ನರಸಿಂಹರಾಜ ಕಾಲನಿ (ಎನ್.ಆರ್. ಕಾಲನಿ) ನಿವಾಸಿಯಾಗಿದ್ದರು. ಡಿ. ಸ್ವಾಮಿನಾಥನ್ ಮತ್ತು ಶಾಂತಾ ಸ್ವಾಮಿನಾಥನ್ ದಂಪತಿಯ ಪುತ್ರರಾಗಿದ್ದಾರೆ. ತಂದೆ-ತಾಯಿ ಇಬ್ಬರೂ ಶಿಕ್ಷಕರಾಗಿದ್ದರು.
ಬಿಷಪ್ ಕಾಟನ್ ಬಾಲಕರ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ತಮ್ಮ ಬಾಲ್ಯದ ಶಿಕ್ಷಣವನ್ನು ಅಂದರೆ, 11ನೇ ವಯಸ್ಸಿನವರೆಗೂ ಬಿಷಪ್ ಕಾಟನ್ ಶಾಲೆಯಲ್ಲಿಯೇ ಓದಿದ ಕೃಷ್ಣ ಸ್ವಾಮಿನಾಥನ್ ಬಳಿಕ, ಬಿಜಾಪುರ (ವಿಜಯಪುರ)ದಲ್ಲಿರುವ ಸೈನಿಕ ಶಾಲೆಗೆ ಸೇರ್ಪಡೆಯಾದರು. 12ನೇ ತರಗತಿ ಮುಗಿಯುತ್ತಿದ್ದಂತೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿನ ಮೊದಲ ಪ್ರಯತ್ನದಲ್ಲಿಯೇ ಅರ್ಹತೆ ಪಡೆದು 19ನೇ ವಯಸ್ಸಿನಲ್ಲಿಯೇ ನೌಕಾಪಡೆಗೆ ಸೇರ್ಪಡೆಯಾದರು.

ಲಾಲ್‌ಬಾಗ್ ನೆಚ್ಚಿನ ತಾಣ:

ಶಾಲಾ ದಿನಗಳಲ್ಲಿ ಲಾಲ್‌ಬಾಗ್ ಅವರ ನೆಚ್ಚಿನ ತಾಣಗಳಲ್ಲಿ ಒಂದಾಗಿತ್ತು. ಸ್ನೇಹಿತರೊಂದಿಗೆ ಲಾಲ್‌ಬಾಗ್‌ಗೆ ಭೇಟಿ ನೀಡುವುದು, ಅಲ್ಲಿನ ಆಹ್ಲಾದಕರ ವಾತಾವರಣದಲ್ಲಿ ಸುತ್ತಾಡುವುದು, ಮರಗಳ ಮೇಲಿದ್ದ ಕೋತಿಗಳನ್ನು ನೋಡುವುದು, ಅವುಗಳ ಹಿಂದೆ ಓಡುವುದು ಅವರ ಹವ್ಯಾಸಗಳಲ್ಲಿ ಒಂದಾಗಿತ್ತು. ಉತ್ತಮ ಓಟಗಾರನಾಗಿದ್ದ ಅವರು ತುಂಬಾ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದ. ಬೆಂಗಳೂರಿನಿಂದ ತೆರಳಿದ ಬಳಿಕವೂ ಬೆಂಗಳೂರಿನ ನೆನಪುಗಳು, ಬಾಲ್ಯ ಮತ್ತು ಬಾಲ್ಯದ ಸ್ನೇಹಿತರ ಒಡನಾಟವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ತಮ್ಮ ನಿವೃತ್ತಿ ನಂತರದ ಜೀವನವನ್ನು ಬೆಂಗಳೂರಿನಲ್ಲಿಯೇ ಕಳೆಯುವ ಯೋಜನೆಯನ್ನು ಸಹ ಹೊಂದಿದ್ದಾರೆಂದು ಇತ್ತೀಚೆಗೆ ಅವರ ಬಾಲ್ಯದ ಸ್ನೇಹಿತರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net