ಬಿಜೆಪಿ ವಿರುದ್ಧ ಒಂದೇ ವೇದಿಕೆಯಲ್ಲಿ ಬರ್ತಾರೆ

 ಸಚಿವ ಸತೀಶ ಜಾರಕಿಹೊಳಿ
ಸಚಿವ ಸತೀಶ ಜಾರಕಿಹೊಳಿ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸತೀಶ ಜಾರಕಿಹೊಳಿ ಹೇಳಿಕೆ
  • ಕಾಕ್ರೋಚ್ ಜನತಾ ಪಾರ್ಟಿಗೆ ಬೆಂಬಲ ವಿಚಾರ
ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಟಿ ಶರ್ಟ್ ಪ್ರದರ್ಶನ ಮಾಡುವ ಮೂಲಕ ಬೆಂಬಲ ನೀಡಿರುವ ಸಿದ್ದರಾಮಯ್ಯ ಅವರ ನಡೆಯನ್ನು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ. ಸಿಜೆಪಿಗೆ ಬೆಂಬಲ ಮಾಡಿಯೇ ಮಾಡುತ್ತಾರೆ. ಕಾರಣ ಎಲ್ಲರೂ ಒಂದೇ ವೇದಿಕೆಯಲ್ಲಿ ಬರುತ್ತಾರೆ ಎಂದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಜಾರಕಿಹೊಳಿ ಅವರು, ಇದು ಎಲ್ಲರಿಗೂ ಅವಶ್ಯಕತೆ ಇದೆ. ಹೀಗಾಗಿ ಎಲ್ಲರೂ ಬರುತ್ತಾರೆ. ಬಿಜೆಪಿ ಬಲಿಷ್ಠವಾಗಿದೆ. ಕೇಂದ್ರದಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅನೇಕ ರಾಜ್ಯಗಳಲ್ಲಿ ಅವರ ಅಧಿಕಾರ ಇದೆ. ಬಲಿಷ್ಠ ಯಾವಾಗಲೂ ಇರಲು ಅಗುವುದಿಲ್ಲ. ಜನರ ಭಾವನೆಗಳಿಗೆ ವಿರುದ್ಧವಾಗಿ ನಾವು ಹೋದರೆ ಜನ ನಮಗೆ ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು.
ಜನರು ಯಾವುದೋ ಒಂದು ಪಕ್ಷಕ್ಕೆ ಒಂದು ಕಡೆಗೆ ಬೆಂಬಲ ನೀಡುತ್ತಾರೆ. ಆದರೆ, ನಿರ್ಲಕ್ಷೃ ಮಿತಿಮೀರಿದರೆ ಹೀಗಾಗುತ್ತದೆ. ಇತಿಹಾಸದಲ್ಲಿ ಹಿಂದೆ ಎಲ್ಲ ಪಕ್ಷವನ್ನು ಸೋಲಿಸಿದ್ದಾರೆ. ಇಂದಿರಾಗಾಂಧಿ, ವಾಜಪೇಯಿ, ಮುರಾರ್ಜಿ ದೇಸಾಯಿ ಇದ್ದಾಗಲೂ ಸೋಲಿಸಿದ್ದಾರೆ ಎಂದರೆ ನಾವು ಯಾವುದನ್ನು ನಿರ್ಲಕ್ಷಿಸಬಾರದು ಎಂದು ಅರ್ಥ.
ಇವತ್ತು ಎಲ್ಲರಿಗೂ ಉದ್ಯೋಗ ಇಲ್ಲ, ಅವರೆಲ್ಲ ಬೀದಿಗೆ ಬಂದಿದ್ದಾರೆ.
ಈ ನಿಟ್ಟಿನಲ್ಲಿ ಜನರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಸಿಜೆಪಿಯಿಂದ ಬರೀ ಮೂರು ದಿನಗಳಲ್ಲಿ ಅಷ್ಟೊಂದು ದೊಡ್ಡ ಸಂಚಲನ ಆಯಿತು. ಹೀಗಾಗಿ ಜನರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮೋದಿ ಅವರು ಮತ್ತು ಅವರ ಸರ್ಕಾರ ಜನರಿಗೆ ಏನು ಬೇಕು ಆ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಪರ್ಯಾಯವಾಗಿ ಈ ದೇಶದ ಜನರು ಎಲ್ಲರಿಗೂ ಬುದ್ಧಿ ಕಲಿಸಿದ್ದಾರೆ, ಈಗಲೂ ಕಲಿಸುತ್ತಾರೆ ಅಷ್ಟೆ ಎಂದು ಹೇಳಿದರು.
ಕಾಕ್ರೋಚ್ ಪಾರ್ಟಿಗೆ ಶೇ. 40ರಷ್ಟು ಫಾಲೋವರ್ಸ್ ಪಾಕಿಸ್ತಾನಿಗಳು ಇದ್ದಾರೆ ಎನ್ನುವ ಬಿಜೆಪಿಗರ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ ಸಚಿವ ಸತೀಶ ಜಾರಕಿಹೊಳಿ, ಅಷ್ಟು ಹೇಳಿದರೆ ಮುಗಿಯಿತಲ್ಲ. ಪಾಕಿಸ್ತಾನದವರು ಇದ್ದಾರೆ ಎಂದು ಎಲ್ಲರ ಲಕ್ಷೃವನ್ನು ಬೇರೆ ಕಡೆಗೆ ತಿರುಗಿಸಿ ಬಿಡುತ್ತದೆ. ಬಾಗಲಕೋಟೆಗೆ ಹೋಗಲು ಬದಲಿಗೆ ಗದಗ ಕಡೆಗೆ ಹೋಗಿಬಿಡುವುದು ಎಂದು ಲೇವಡಿ ಮಾಡಿದರು.
ಸಿಜೆಪಿ ಅವರ ಖಾತೆಗಳನ್ನು ಸ್ಟಾಪ್ ಮಾಡುತ್ತಾರೆ ಎಂದರೆ ಬಿಜೆಪಿಯವರು ನೂರಕ್ಕೆ ನೂರರಷ್ಟು ವಿಚಲಿತರಾಗಿದ್ದಾರೆ. ಇದನ್ನು ನೋಡಿಯಾದರೂ ಸಹ ದೇಶಕ್ಕೆ ಏನು ಅವಶ್ಯಕತೆ ಇದೆ ಅದನ್ನು ಮಾಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net